ಹಾಸನ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬುಲ್ಸ್ ಟಾಸ್ಕರ್ಸ್ ಎಂಬ ಬೆಂಗಳೂರು ತಂಡವರ ಬೈಕ್ ಜಾಥಾ, ಸ್ವಚ್ಛತಾ ಕಾರ್ಯಕ್ರಮ ಮತ್ತು ಜಲಸಾಹಸ ಕ್ರೀಡೆ ಹಾಗೂ ಪ್ರವಾಸಿ ಟ್ಯಾಕ್ಸಿಗಳ ವಿತರಣೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಶುಭ ಹಾರೈಸಿದರು.
ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತಂದಿದ್ದು, 2020 ರಿಂದ 2025 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಅದರಲ್ಲಿ ಅನೇಕ ರೀತಿಯ ವಿನೂತನ ಸೇವೆಗಳು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡುವುದು ಈ ನೀತಿಯಲ್ಲಿ ಸೇರಿದೆ ಎಂದು ಅವರು ತಿಳಿಸಿದರು.
ಇಂದು ಮದ್ಯಮ ವರ್ಗದ ಆದಾಯ ಹೆಚ್ಚಾಗಿದ್ದು, ಹೆಚ್ಚಿನ ಜನರು ಮೋಟಾರ್ ಬೈಕ್ ಹಾಗೂ ಕಾರುಗಳನ್ನು ಕೊಳ್ಳುತ್ತಿದ್ದಾರೆ.ಹಾಗಾಗಿ ಪ್ರವಾಸೋದ್ಯಮವು ದೇಶದ ಜಿ.ಎಸ್.ಜಿ.ಟಿ.ಟಿ ಗೆ ಸುಮಾರು ಶೇ. 9.2 ರಷ್ಟು ಹಾಗೂ ರಾಜ್ಯದಲ್ಲಿ ಶೇ.14 ರಷ್ಟು ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
10 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಹಾಗೂ 5 ಸಾವಿರ ಕೋಟಿಯಷ್ಟು ಬಂಡವಾಳ ಹೂಡುವಂತಹ ಪಾಲಿಸಿಯನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ಹೊಸದಾಗಿ ಜಾರಿಗೆ ತಂದಿದ್ದು, ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಎಲ್ಲರೂ ಓದುವುದರ ಜೊತೆಗೆ ಹಲವಾರು ಕಡೆಗಳಲ್ಲಿ ಸುತ್ತಿ ಹಲವಾರು ಉತ್ತಮ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ದೇಶಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರವಾಸೋದ್ಯಮ ಇಲಾಖೆ ತುಂಬಾ ನಷ್ಟ ಅನುಭವಿಸುತ್ತಿದೆ. ಹಾಗಾಗಿ ಅದನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಜನರಿಗೆ ಧೈರ್ಯ ಹಾಗೂ ಅರಿವು ಮೂಡಿಸಬೇಕು ಎಂದರು.
ರಾಜ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಅವುಗಳ ವೀಕ್ಷಣೆಯಿಂದ ಪ್ರವಾಸೋದ್ಯಮ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದರಲ್ಲದೆ, ಕೋವಿಡ್ ಇರುವ ಕಾರಣ ಸಾಮಾಜಿ ಅಂತರ ಹಾಗೂ ಮಾಸ್ಕ್ ಧರಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಸಂಜಯ್ ಅವರು ಮಾತನಾಡಿ ಆರ್ಥಿಕತೆಯನ್ನು ವೈವಿಧ್ಯಗೊಳಿಸುವಲ್ಲಿ ಪ್ರವಾಸೋದ್ಯಮವು ಮುಖ್ಯ ಪಾತ್ರವಹಿಸುತ್ತದೆ ಹಾಗೂ ಸುಸ್ಥಿರ ಗ್ರಾಮೀಣಾಭಿವೃದ್ಧಿಯನ್ನು ಸಾಧಿಸಲು ಆಧಾರವನ್ನು ನೀಡುವುದರ ಜೊತೆಗೆ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣ, ಪ್ರವಾಸೋದ್ಯಮ ಅಧಿಕಾರಿ ನಾಗರಾಜು, ಜಿಲ್ಲಾ ಸಮಾಲೋಚಕರಾದ ನಾಗರಾಜು ಚಿಟ್ಟಿ, ಎಣಿಕೆದಾರರಾದ ಅಸ್ಲಾಂ ಉಲ್ಲಾ ಶರೀಫ್, ರಾಮಚಂದ್ರ ಹೆಗಡೆ ಹಾಗೂ ಪ್ರವಾಸಿ ಮಿತ್ರರು ಹಾಜರಿದ್ದರು.