ಹಾಸನ : ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗೂ ಇತರ ತೆರಿಗೆಗಳನ್ನು ನಗರಸಭೆ ಕಂದಾಯ ಅಧಿಕಾರಿಗಳು ಸಕಾಲದಲ್ಲಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಗರಸಭೆ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು ಪಾರದರ್ಶಕ ಕಾಯ್ದೆಯನ್ವಯ ಎಲ್ಲಾ ಕಾರ್ಯಗಳನ್ನು ನಡೆಸುವಂತೆ ಸೂಚನೆ ನೀಡಿದರು.
ಕಸ ಸಂಗ್ರಹ, ವರ್ಗಿಕರಣ ಮತ್ತು ವಿಲೇವಾರಿ ಸಮರ್ಪಕವಾಗಿ ನಡೆಯಬೇಕು ಇದರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ಪಡೆಯಿರಿ.ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಯ, ವೈಜ್ಞಾನಿಕ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಪ್ರತಿ ಮನೆಗೂ ಕರಪತ್ರ ಹಂಚಿ ಸ್ಟಿಕ್ಕರ್ಗಳನ್ನು ಮುದ್ರಿಸಿ ನೀಡಿ ಎಂದು ನಿರ್ದೇಶನ ನೀಡಿದರು.
ನಗರ ವ್ಯಾಪ್ತಿಯಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಪರಿವೀಕ್ಷಕರೂ,ಸಮುದಾಯ ಅಭಿವೃಧಿ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳನ್ನು ನಿಯೋಜಿಸಿ ಕಸ ಬೇರ್ಪಡಿಸುವ ಕುರಿತು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ವ್ಯವಸ್ಥೆ ಸಮರ್ಪಕವಾಗಿರಬೇಕು, ನೀರು ಪೋಲಾಗದಂತೆ ಗಮನಹರಿಸಿ. ನಗರ ವ್ಯಾಪ್ತಿಯ ವಿದ್ಯುತ್ ಸಂಪರ್ಕ ವ್ಯವಸ್ಥೆಗಳು ಹಾಗೂ ಇತರ ಕಾಮಗಾರಿಗಳನ್ನು ಟೆಂಡರ್ ಕರೆದು ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದರು.
ಇದೇ ವೇಳೆ ಸಭೆಯಲ್ಲಿ ನಗರಸಭೆ ವತಿಯಿಂದ ಕೈಗೊಂಡ ತುರ್ತು ಕಾಮಗಾರಿಗಳು ಹಾಗೂ ಸಾಂದರ್ಭಿಕ ವೆಚ್ಚಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಅಮೃತ ಯೋಜನೆ ತ್ವರಿತವಾಗಿ ಜಾರಿಯಾಗಬೇಕು, ಕೊಳವೆ ಬಾವಿ ಕೊರೆಯುವುದನ್ನು ತಪ್ಪಿಸಿ ಹೇಮಾವತಿ ನದಿ ನೀರು ಎಲ್ಲಾ ವಾರ್ಡ್ಗಳಿಗೆ ಪೂರೈಕೆಯಾಗುವಂತೆ ಯೋಜಿತ ಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದರು.
ಮನೆ, ವಾಣಿಜ್ಯ ಮಳಿಗೆಗಳ ನಿರ್ಮಾಣದ ವೇಳೆ ಪರವಾನಗಿ ಶುಲ್ಕವನ್ನು ಚದರಡಿ ಆಧಾರದ ಮೇಲೆ ನಿಯಾಮನುಸಾರ ನಿಗಧಿ ಪಡಿಸಿ. ಜೊತೆಗೆ ಅಪಾರ್ಟ್ಮೆಂಟ್ಗಳ ಒಟ್ಟು ನಿರ್ಮಾಣ ವಿಸ್ತಿರ್ಣದ ಅಳತೆ ಮೇಲೆ ತೆರಿಗೆ ಪಡೆಯಿರಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಎ.ಪಿ.ಎಂ.ಸಿ. ಯಾರ್ಡ್ ಬಳಿ ರಸ್ತೆ ಬದಿ ಕಸ ಸುರಿಯುತ್ತಿದ್ದು ತಪ್ಪಿತಸ್ತರನ್ನು ಪತ್ತೆ ಮಾಡಿ ದಂಡ ವಿಧಿಸಿ ನಗರ ವ್ಯಾಪ್ತಿಯನ್ನು ಸ್ವಚ್ಚವಾಗಿರಿಸಿ ಎಂದ ಅವರು ರಸ್ತೆ ದುರಸ್ತಿ ವಿಸ್ತೀರ್ಣವನ್ನು ಸರಿಯಾಗಿ ದಾಖಲಿಸಿ ಮತ್ತು ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು.
ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಹಾಗೂ ನಗರಸಭೆಯ ಇಂಜಿನಿಯರ್ಗಳು ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.