ಹಾಸನ.ಡಿ.12(ಹಾಸನ್_ನ್ಯೂಸ್):- ಕರ್ನಾಟಕ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಮೊದಲನೇ ಹಾಗೂ ಎರಡನೇ ಹಂತವು ಡಿ. 22 ಮತ್ತು ಡಿ.27 ರ ಚುನಾವಣೆ ನಡೆಯಲಿರುವ ಪ್ರದೇಶಗಳಲ್ಲಿ ಮತದಾನ ಪ್ರಾರಂಭವಾಗುವ ದಿನಾಂಕಕ್ಕೆ 48 ಗಂಟೆಗಳ ಮುಂಚಿತವಾಗಿ ಹಾಗೂ ಮತದಾನದ ದಿನ ಪೂರ್ತಿ, ಚುನಾವಣೆ ನಡೆಯಲಿರುವ ಪ್ರದೇಶಗಳಲ್ಲಿ ಪಾನ ನಿರೋಧ ದಿನ ಘೋಷಿಸಲು ಜಿಲ್ಲಾದಿಕಾರಿ ಆರ್. ಗಿರೀಶ್ ಆದೇಶಿಸಿದ್ದಾರೆ. ಆದೇಶಿಸಿದ್ದಾರೆ.
ಚುನಾವಣೆ ದಿನದಂದು ಮತದಾನ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಹಾಗೂ ಸುಗಮವಾಗಿ ಚುನಾವಣೆಗಳನ್ನು ನಡೆಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗಿರುತ್ತದೆ. ಆದುದರಿಂದ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಹೊರತುಪಡಿಸಿ ಉಳಿದ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಮದ್ಯ ಮಾರಾಟ ಮತ್ತು ಎಲ್ಲಾ ಬಗೆಯ ಬಾರುಗಳನ್ನು ಮುಚ್ಚುವುದು ಸೇರಿದಂತೆ ಚುನಾವಣೆ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಅಮಲು ಪಾನೀಯ ಹಾಗೂ ಮದ್ಯ ಶೇಖರಣೆ, ಮದ್ಯ ಮಾರಾಟ, ಮದ್ಯಸೇವೆ ಮಾಡುವಂತಹ ಎಲ್ಲಾ ಬಗೆಯ ಸ್ಟಾರ್ ಹೋಟೆಲ್‍ಗಳು, ಡಾಬಾಗಳು, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಸರಬರಾಜು ಮಾಡುವುದನ್ನು ನಿಷೇದಿಸಬೇಕೆಂದು ತಿಳಿಸಿದರು.
ಡಿ. 20 ಸಂಜೆಯಿಂದ ಡಿ. 22 ರ ಸಂಜೆ 5 ಗಂಟೆವರೆಗೆ ಹಾಸನ, ಚನ್ನರಾಯಪಟ್ಟಣ, ಸಕಲೇಶಪುರ ಹಾಗೂ ಅರಕಲಗೂಡು ಗ್ರಾಮ ಪಂಚಾಯಿತಿಯ ಹಾಗೂ ಡಿ.25 ಸಂಜೆ 5 ಗಂಟೆಯಿಂದ ಡಿ.27 ಸಂಜೆ 5 ರವೆರೆಗೆ ಅರಸೀಕೆರೆ, ಹೊಳೆನರಸೀಪುರ, ಆಲೂರು ಹಾಗೂ ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ನಿಷೇದಿಸಲಾಗಿದೆ ಎಂದು ಜಿಲ್ಲಾದಿಕಾರಿ ತಿಳಿಸಿದ್ದಾರೆ.