ಕಾಡೆಂಬ ಕಾಡಿನೊಳಗೆ ನಾಡಿನ ಜನ ತಲುಪಿ, ನಾಟಕದ ಅನುಭೂತಿ ಪಡೆದು, ಆಧುನಿಕ ಜೀವನ ಶೈಲಿಯ ಒತ್ತಡದ ಹೊರೆಗಳನ್ನೆಲ್ಲಾ ಅಲ್ಲೇ ಇಳಿಸಿ, ಉತ್ಸಾಹ,ಚೈತನ್ಯದ ಮೂಟೆಯನ್ನು ಹೊತ್ತು ಹೊರಬಂದಂತಹ ಒಂದು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯ್ತು ಮೊನ್ನೆ ಮಲೆನಾಡಿನ ಕಾಡಿನಲ್ಲಿ ‘ಜೇನುಗಿರಿ ಪತ್ರಿಕೆ’, ‘ಹಾಡ್ಲಹಳ್ಳಿ ಪ್ರಕಾಶನ’ ಮತ್ತು ರಂಗ ಹೃದಯ’ ತಂಡದವರು ನಡೆಸಿದ “ಎಮ್ಮೆಗುಂಡಿಯಲ್ ಒಂದು ದಿನ” ಎಂಬ ಚಾರಣ-ನಾಟಕ- ಕಾಡೂಟದ ಕಾರ್ಯಕ್ರಮ.
ಮಂಜಿಗೆ ಕಾಣಿಸದ ರಸ್ತೆಯ ಮಧ್ಯೆ ಕಾರು ಸಾಗುತ್ತಿದ್ದರೆ ನನಗಂತು ಮೋಡದ ಮೇಲೆ ರಸ್ತೆಯಾಯಿತೇನೋ ಅನ್ನಿಸುತಿತ್ತು …… ನಮ್ಮ ಎಡ ಬಲಗಳಲ್ಲಿ ಬಿಳಿಯ ಬಣ್ಣದ ಗೋಡೆ ಎದ್ದಿತ್ತು ……
ಇದರ ಮಧ್ಯೆ “ಯಾರ್ಗು ಹೇಳ್ಬೇಡಿ ನೆನ್ನೆ ನಾಟಕ ಮಾಡುವ ಜಾಗಕ್ಕೆ ಆನೆಗಳು ಬಂದಿದ್ವು ” ಅಂದಾಗ ಸ್ವಲ್ಪ ಕದಲಿದೆ …..ಹಾಗಾದರೆ ಆನೆಗಳು ಬಂದು ಸುಖವಾಗಿ ಸಂಡಾಸು ಮಾಡಿ ಹೋಗಿದ್ದರ ಜಾಗಕ್ಕೆ ನಾವು ಹೋಗಿ ನಾಟಕ ಮಾಡಿಸುವ ಸಾಹಸ ಮಾಡುತ್ತಿದ್ದೇವಲ್ಲ ಕಾಡ ಕಡವಳೆ ಅನ್ನಿಸಿತು ….
ಈ ಚಾರಣ , ಬೆಟ್ಟದ ಮೇಲೆ ನಾಟಕ , ಹೊಳೆಯಲ್ಲಿ ಮೀಯುವುದು ಕೊನೆಗೆ ಒಂದೊಳ್ಳೆ ಊಟ ಇವಿಷ್ಟು ಓದಲು ಸುಂದರವಾಗಿ ಕಂಡರೂ ಅದರ ಹಿಂದೆ ಇರುವ ರೌದ್ರಾನುಭವ ತೋರಿಸುವ ಹುನ್ನಾರವೆಂದೆಣಿಸಿದ್ದು ಅವರ ಕೊನೆಯ ಮಾತಿನಲ್ಲಿ ನಿಜವೆನಿಸಿತು …..
ಅಲ್ಲಿ ಹೋಗಿ ತಲುಪುವ ಮಾರ್ಗದುದ್ದಕ್ಕೂ ಸಿಗುವ ಪುಟ್ಟ ಪುಟ್ಟ ಹೆಂಚಿನ ಮನೆಗಳು , ಮನೆಯ ಮುಂದೆ ಒಣಗಿಸಲು ಹಾಕಿದ ಕಾಫಿ ಬೀಜ , ಅಲ್ಲಿನ ಪರಿಸರ ಎಲ್ಲವೂ ಸುಖಾನುಭೂತಿಯೆ…..ಆದರೆ ಚಾರಣ ಮಾಡಿ ನಾಟಕ ನಡೆಯುವ ಜಾಗಕ್ಕೆ ಬರುವಷ್ಟರಲ್ಲಿ ತ್ರಾಣವಾರಿತ್ತು ….ಆದರೂ ನಾಟಕ ನೋಡಲು ಸುಮಾರು ಹತ್ತಿರ ಹತ್ತಿರ ೪೦೦ ಜನರಷ್ಟು ಜನ ಬಂದಿದ್ದು ನನ್ನ ಕಣ್ಣರಳಿಸಿತು …..
ನಾಟಕ ಶುರುವಾದಂತೆ ಸಮೀಪದ ಹಾಡ್ಲಳ್ಳಿ , ಹೆತ್ತೂರು ,ಪಟ್ಲ ,ಸಕಲೇಶಪುರ ಹೀಗೆ ಅನೇಕನೇಕ ಜಾಗಗಳಿಂದ ಜನ ಬರುತ್ತಲೇ ಇದ್ದರು …..
‘ನಿಲುವಂಗಿಯ ಕನಸು’ ನಾಟಕ ಮೊದಲ ಬಾರಿ ನೋಡಿದ್ದರಿಂದ ನನಗಂತು ಇದೊಂದು ಅನನ್ಯ ಅನುಭವ …..
ನಾಟಕದ ಕತ್ತೆರಾಮ , ದಡಗ , ಸೀನಪ್ಪ ಪಾತ್ರಗಳ ನೈಜಾಭಿನಯ ಸಾಕಷ್ಟು ತೃಪ್ತಿದಾಯಕವಾದ್ದು ……
ಜನಸಂಖ್ಯಾ ನಿಯಂತ್ರಣ ಬಗ್ಗೆ ತೋರಿಸುವ ಒಂದು ದೃಶ್ಯವಂತು ನಮ್ಮಪ್ಪಾಜಿ ಹೇಳುತ್ತಿದ್ದ ಮತ್ತೊಂದು ಕತೆಗೆ ಲಿಂಕ್ ಕೊಟ್ಟಿತು
ಆಗ ನಮ್ಮಪ್ಪಾಜಿ ಚಿಕ್ಕ ವಯಸ್ಸಿನವರು ….ತಾತನ ಮನೆಗೆ ಗುಳ್ಳ ಎಂಬ ವ್ಯಕ್ತಿ ಬಂದು ಜನಸಂಖ್ಯಾ ನಿಯಂತ್ರಣಕ್ಕೆ ಹಳ್ಳಿಗೆ ವ್ಯಾನ್ ಬರುವ ವಿಚಾರ ಮತ್ತು ಅದರೊಳಗೆ ತನಗೆ ಆದ ಆಪರೇಷನ್ ವಿಚಾರ ತನ್ನದೇ ವೈಖರಿಯಲ್ಲೆ ಹೇಳಿದ್ದ “ಯಾಕ ಬಳ್ಳಯ್ಯ ಹೋಗಕಿಲ್ವ !!? ….ಏನು ಆಗಕಿಲ ಕನ …..ಚೊಳ್ಳೆ ಕಚ್ದಂಗಾಯ್ತದೆ ಕನ ……ಎಲ್ಲ ಮುಗಿದ್ ಮ್ಯಾಲೆ ಎಂಡ್ ಇಟ್ಲಿ ಕೂಟ್ಲೆ ಕಾಪಿ ಕೊಡ್ತರೆ ಕನ!!!! ಹೋಬೆಕರೆ ೨೫ಕೆಜಿ ಅಕ್ಕಿ ಕೊಡ್ತರೆ ನೋಡು ” ಅಂದಿದ್ದನಂತೆ …ಕೊನೆಗೆ ನಮ್ಮ ತಾತ ಮನೆ ಹತ್ತಿರ ಬಂದಾರು ಅಂತ ಏರಿ ಮೇಲೆ ಓಡಿ ೨ ದಿನ ಅವರತ್ತೆಯ ಮನೆ ಸೇರಿತ್ತಂತೆ …..
ಈ ತರದ ಅನೇಕ ವಿಷಯಗಳಿಗೆ ನಮ್ಮನ್ನ ಕನೆಕ್ಟ್ ಮಾಡಿತು ನಾಟಕ …..
ಜೊತೆಗೆ ಮಲೆನಾಡಿಗರ ಕಷ್ಟಗಳು , ಅಲ್ಲಿನ ರೈತರ ಬದುಕು ಅಲ್ಲಿನ ಪ್ರಕೃತಿಯಷ್ಟು ಸುಂದರವಾಗಿಲ್ಲ ಎಂಬುದು ನಾಟಕದ ನಂತರ ತಮ್ಮ ಅನುಭವ ಹೇಳಿದ ಸ್ಥಳೀಕರ ಮಾತಿನಿಂದಲೇ ನಿರೂಪಿತವಾಯ್ತು …..
ನಾಟಕದ ನಂತರ ಕೆಳಗಿನ ಹೊಳೆಯವರೆಗೆ ಹೋಗಿ ತಣ್ಣಗಿನ ನೀರಿನಲ್ಲಿ ಮೈತಾಗಿಸಿ ಒಂದೊಳ್ಳೆ ಊಟ ಮಾಡುವುದರ ಮೂಲಕ ಸಮಾಪ್ತಿಯಾಯ್ತು ……
ಕಾರ್ಯಕ್ರಮ ಅಂದಕೊಂಡದ್ದಕ್ಕಿಂತ ಒಂದೆಜ್ಜೆ ಹೆಚ್ಚಾಗೇ ಯಶಸ್ವಿಯಾಗಿದ್ದು ನೆನ್ನೆಯ ಸಾಧನೆ …….