ಹಾಸನ: ಜಿಎಸ್ಟಿಯ ಹಲವು ನೀತಿ ನಿಯಮ ಸರಿಪಡಿಸುವುದು, ಅವೈಜ್ಞಾನಿಕ ತೆರಿಗೆ ದರಗಳ ತಿದ್ದುಪಡಿ, 2019-20 ಮತ್ತು 2020-21 ನೇ ಸಾಲಿನಲ್ಲಿ ಜಿಎಸ್ಟಿ ದಂಡ ಪಾವತಿಯಿಂದ ವಿನಾಯಿತಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ವೆಸ್ಟ್ರನ್ ಮಹರಾಷ್ಟ್ರ ತೆರಿಗೆ ಸಲಹೆಗಾರರ ಸಂಘ ದೇಶಾದ್ಯಂತ ಜನವರಿ 29 ರಂದು ಕರೆ ನೀಡಿರುವ ಶಾಂತಿಯುತ ಪ್ರತಿಭಟನೆಗೆ ಹಾಸನ ತೆರಿಗೆ ಸಲಹೆಗಾರರ ಸಂಘವೂ ಬೆಂಬಲ ವ್ಯಕ್ತಪಡಿಸಿದೆ ಎಂದು ಉಪಾಧ್ಯಕ್ಷ ಎಚ್.ಆರ್.ಶಿವಕುಮಾರ್ ತಿಳಿಸಿದ್ದಾರೆ.
ಜ.29 ರಂದು ನಗರದ ಕೇಂದ್ರ ಜಿಎಸ್ಟಿ ಕಚೇರಿ ಮುಂಭಾಗ ವ್ಯಾಪಾರೋದ್ಯಮಿಗಳು, ತೆರಿಗೆ ಸಲಹೆಗಾರರು ಮತ್ತು ಸಾರ್ವಜನಿಕರ ಪರವಾಗಿ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು.
ಸರ್ಕಾರದ ಜಿಎಸ್ಟಿ ನೀತಿ ನಿಯಮಗಳಲ್ಲಿ ಹಲವು ತೊಂದರೆಗಳಿವೆ. ಜಿಎಸ್ಟಿ ವೆಬ್ಪೋರ್ಟಲ್ನಲ್ಲಿಯೂ ಸಮಸ್ಯೆಗಳಾಗುತ್ತಿದ್ದು, ತೆರಿಗೆ ಸಲಹೆಗಾರರು ಮತ್ತು ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳಿಗೆ ತೊಂದರೆಯಾಗುತ್ತಿದೆ. ನಿಗದಿತ ದಿನಾಂಕದಲ್ಲಿ ಜಿಎಸ್ಟಿ ರಿಟನ್ರ್ಸ್ ಮಾಡದಿದ್ದರೆ ವಿವಿಧ ರೀತಿಯ ದಂಡ ತೆರಬೇಕಿದ್ದು, ಮದ್ಯಮ ಮತ್ತು ಸಣ್ಣ ವ್ಯಾಪಾರಿ ಉದ್ಯಮಿಗಳಿಗೆ ತೊಂದರೆಯಾಗಿದೆ.
ತೆರಿಗೆ ಸಲಹೆಗಾರರಿಗೂ ಹೆಚ್ಚಿನ ಒತ್ತಡ ಬೀಳುತ್ತಿದ್ದು ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ಅಲ್ಲದೆ ಐಜಿಎಸ್ಟಿ, ಸಿಜಿಎಸ್ಟಿ, ಎಸ್ಜಿಎಸ್ಟಿ ತೆರಿಗೆಗಳನ್ನು ವಿಭಾಗ ಮಾಡಿ ಪಾವತಿಸಬೇಕು. ಕಣ್ತಪ್ಪಿನಿಂದ ಅಂಕಿ ಅಂಶಗಳನ್ನು ತಪ್ಪಾಗಿ ನಮೂದಿಸಿದರೆ ಅದನ್ನು ಬದಲಿಸಲು ಸಾಧ್ಯವಿಲ್ಲ. ಒಂದು ವೇಳೆ ತಪ್ಪಾದರೆ ಅದನ್ನು ಸರಿಪಡಿಸಲು ಅವಕಾಶ ನೀಡಬೇಕು.
ಜಿಎಸ್ ಟಿ ನಿಯಮಾವಳಿಯಲ್ಲಿ ಮತ್ತೆ ಮತ್ತೆ ತಿದ್ದುಪಡಿ ತರಲಾಗುತ್ತಿದೆ. ಇದನ್ನು ಬದಲಾಯಿಸಿ ನಿಯಮಾವಳಿ ಗಳನ್ನು ಸರಳೀಕರಿಸಬೇಕು. ಜೊತೆಗೆ ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕುಸಿದಿರುವುದರಿಂದ ತೆರಿಗೆ ವಿನಾಯಿತಿ ನೀಡಬೇಕು ಎಂದು ಸಾರ್ವಜನಿಕರ ಪರವಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಆದಾಯ ತೆರಿಗೆ ಪಾವತಿಸಲು ಹೆಚ್ಚುವರಿ ಕಾಲಾವಕಾಶ ನೀಡುವುದು, ಅವೈಜ್ಞಾನಿಕ ತೆರಿಗೆ ದರಗಳನ್ನು ಸರಿಪಡಿಸುವಂತೆಯೂ ಆಗ್ರಹಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.
ವಿಡಿಯೋ ನೋಡಿ 👇