ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಡವರ ಸೇವೆಯೇ ದೇವರ ಸೇವೆ ಎಂಬಂತೆ ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದು ನಿವೃತ್ತಿ ಅಂಚಿನಲ್ಲಿರುವ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿ ಗೋಪಾಲಕೃಷ್ಣ ಗೌಡರಿ (ನಿವೃತ್ತ ಸೇನಾನಿ) ಗೆ ಆತ್ಮೀಯ ‌ಸನ್ಮಾನ

0

ಹಾಸನ, ಮಾ.20- ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಡವರ ಸೇವೆಯೇ ದೇವರ ಸೇವೆ ಎಂಬಂತೆ ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದು ನಿವೃತ್ತಿ ಅಂಚಿನಲ್ಲಿರುವ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿ ಗೋಪಾಲಕೃಷ್ಣ ಗೌಡ ಅವರನ್ನು ಕೆ.ಪಿ.ಎಸ್.ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ ಅವರ ನೇತೃತ್ವದಲ್ಲಿ  ಸ್ನೇಹಿತರು, ಅಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಎಚ್.ಎನ್.ಕೃಷ್ಣ ಅವರು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಎಲ್ಲದಕ್ಕೂ ಕಾನೂನು ಎಂದು ಹೇಳಬಾರದು. ನೊಂದವರಿಗೆ, ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಕಾನೂನು ಚೌಕಟ್ಟಿನೊಳಗೆ ತಮ್ಮ ಪರಮಾಧಿಕಾರ ಬಳಸಿಕೊಂಡು ಅವರಿಗೆ ನೆರವು ನೀಡಬೇಕು.
ನೀವು ಇತರ ಅಧಿಕಾರಿಗಳಿಗೆ ಆದರ್ಶಪ್ರಾಯರಾಗಿರಬೇಕು. ನೀವು ಮಾಡುವ ಕೆಲಸವನ್ನು ಕಿರಿಯರು ಅನುಸರಿಸುತ್ತಾರೆ. ಜನ ಮೆಚ್ಚುವಂತಹ ಕೆಲಸ ಮಾಡಿ ನಾಡಿಗೆ, ತಂದೆ-ತಾಯಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಕನ್ನಡ ನಾಡಿನ ದಕ್ಷ ಅಧಿಕಾರಿಯಾಗಿರುವ ಗೋಪಾಲಕೃಷ್ಣ ಗೌಡ ಅವರ ನಿವೃತ್ತಿ ನಂತರದ ಜೀವನ ಸುಖಕರವಾಗಿರಲೆಂದು ಕೃಷ್ಣ ಅವರು ಹಾರೈಸಿದರು.

ಗೋಪಾಲಕೃಷ್ಣಗೌಡರು ನಡೆದು ಬಂದ ಹಾದಿ ಸರಳ ಜೀವನ, ಉನ್ನತ ವಿಚಾರ, ಸತ್ಯ, ಶುದ್ಧ ದುಡಿಮೆಗೆ ಶುದ್ಧ ಮನವೇ ಶಕ್ತಿ ಎಂಬ ಮಾತಿಗೆ ಪ್ರತೀಕ ಗೋಪಾಲಕೃಷ್ಣಗೌಡರು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕು ನೆಕ್ಕಿಲಾಡಿ ಗ್ರಾಮದ ಪುಯಿಲ ಮನೆಯ ಶಾಂತಪ್ಪಗೌಡ ಮತ್ತು ರುಕ್ಮಿಣಿ ಪುತ್ರನಾಗಿ 1961ರ ಮೇ 18ರಂದು ಜನಿಸಿದ ಗೋಪಾಲಕೃಷ್ಣಗೌಡರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿ, 8,9ನೇ ತರಗತಿಯನ್ನು ಅಜ್ಜಿ ಮನೆಯಲ್ಲಿದ್ದು ಕಲಿತ ಅವರು 10ನೇ ತರಗತಿ ಕಡಬದ ಪ್ರೌಢಶಾಲೆಯಲ್ಲಿ ಕಲಿಯುತ್ತಾರೆ.ಕಾಲೇಜು ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಕಲಿಯುವ ಅವರು ಬಿಡುವಿನ ಸಮಯದಲ್ಲಿ ಕೆಲಸಕ್ಕೆ ಸೇರಿ ವಿದ್ಯಾಭ್ಯಾಸದ ಖರ್ಚನ್ನು ತಾವೇ ಸಂಪಾದಿಸಿಕೊಳ್ಳುತ್ತಾರೆ. ಪಿ.ಯು.ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ ತಕ್ಷಣ ವಿದ್ಯಾಭ್ಯಾಸ ಸ್ಥಗಿತಗೊಳಿಸಿ ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತರಾಗಿ ಆರು ತಿಂಗಳು ಕರ್ತವ್ಯ ನಿರ್ವಹಿಸುತ್ತಾರೆ.

ಭಂಟ್ವಾಳದಲ್ಲಿ ನಡೆಯುತ್ತಿದ್ದ ಸೇನಾ ಅರ್ಹತಾ ಪರೀಕ್ಷೆಗೆ ಹಾಜರಾಗಿ ಸೇನೆಗೆ ಆಯ್ಕೆಗೊಂಡು ಸೇನೆಗೆ ಸೇರುತ್ತಾರೆ. ಪ್ರಯತ್ನದ ಬಲವಿಲ್ಲದೆ ಕೇವಲ ಮನೋಬಲದಿಂದ ಕಾರ್ಯಸಿದ್ದಿ ಸಾಧ್ಯವಿಲ್ಲ ಎಂಬಂತೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಪಂಜಾಬ್ ವಿಶ್ವವಿದ್ಯಾ ನಿಲಯದಲ್ಲಿ ಬಿ.ಎ. ಪದವಿಯನ್ನು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಾರೆ.
ಸೇನೆಯ ವಿವಿಧ ಸ್ತರಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಗೋಪಾಲಕೃಷ್ಣಗೌಡ ಅವರು ಬೆಂಗಳೂರಿಗೆ ವರ್ಗಾವಣೆಯಾಗುವುದು ಅವರ ಯಶೋಗಾಥೆಗೆ ದಕ್ಕಿದ ಆಮೂಲಾಗ್ರ ತಿರುವು. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ  ಎಂ.ಎ. ಸ್ನಾತಕೋತ್ತರ ಪದವಿ ಪಡೆದ ಅವರು, ಹಿರಿಯ ಅಧಿಕಾರಿ ಬ್ರಿಗೇಡಿಯನ್ ಮೋನಪ್ಪ ಸೇನೆಯಲ್ಲಿ ನಿವೃತ್ತರಾದವರಿಗೆ ಸರ್ಕಾರಿ ಕೆಲಸಗಳಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ನೀಡಿದ ಸಲಹೆಯಂತೆ ಕೆ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುತ್ತಾರೆ.
ಮುಂದೆ ಗುರಿಯೂ ಇತ್ತು. ಹಿಂದೆ ಗುರುವೂ ಇದ್ದರು ಎಂಬಂತೆ ಸೇನೆಯಲ್ಲಿದ್ದಾಗಲೇ ಪರೀಕ್ಷಾ ಸಿದ್ಧತೆಯನ್ನು ಪ್ರಾರಂಭಿಸಿದ ಗೋಪಾಲಕೃಷ್ಣಗೌಡರು ಸುದೀರ್ಘ ಸೇನಾ ಸೇವೆಯಿಂದ ಸ್ವಯಂ ನಿವೃತ್ತಿ  ಪಡೆದ ನಂತರ 1998ರ ಕೆ.ಎ.ಎಸ್ ಪರೀಕ್ಷೆ ಬರೆದು ಅಬಕಾರಿ  ಉಪ ಅಧೀಕ್ಷಕರಾಗಿ ಪ್ರಥಮ ಪ್ರಯತ್ನದಲ್ಲೇ ಆಯ್ಕೆಗೊಳ್ಳುತ್ತಾರೆ.

ಗೋಪಾಲಕೃಷ್ಣಗೌಡರ ಒಂದು ವಿಶೇಷವಾದ ಹಾಗೂ ವಿಶಿಷ್ಟವಾದ ಹವ್ಯಾಸವೆಂದರೆ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದು ಮತ್ತು ಅದರಲ್ಲಿ ಯಶಸ್ವಿಯಾಗುವುದು. ಈ ಮೂಲಕ ತಮ್ಮ ಜ್ಞಾನವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದೇ ಇವರ ನೆಚ್ಚಿನ ಹವ್ಯಾಸ.

2006ರಲ್ಲಿ ಅಬಕಾರಿ ಉಪ ಅಧೀಕ್ಷಕರಾಗಿ ಪೊಲೀಸ್ ಅಕಾಡೆಮಿಯಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿ ಸೇವೆ ಆರಂಭಿಸಿದ ಗೌಡರು, ಚಿಕ್ಕೋಡಿ ವಿಭಾಗದ ಉಪ ಅಧೀಕ್ಷಕರಾಗಿ ನೇಮಕವಾಗುತ್ತಾರೆ.
ಚಿಕ್ಕೋಡಿ-ಮಹಾರಾಷ್ಟ್ರದ  ಗಡಿ ಭಾಗದ ಅಬಕಾರಿ ಅಕ್ರಮಗಳು ಕಡಿಮೆ ಏನೂ ಇರಲಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸಮಾಜಘಾತುಕ  ಶಕ್ತಿಗಳು   ಅಕ್ರಮ ಮದ್ಯ ತಯಾರು ಮಾಡಿ ಸಮಾಜ ಸ್ವಾಸ್ತ್ಯ  ಹಾಳು ಮಾಡುತ್ತಾ ಸರ್ಕಾರದ ರಾಜಸ್ವಕ್ಕೆ ನಷ್ಟ ಉಂಟು ಮಾಡುತ್ತಿದ್ದವು. ಇದನ್ನು ಮನಗಂಡ ಗೌಡರು ತಮ್ಮ ಸಿಬ್ಬಂದಿಯ ಸಹಕಾರದಿಂದ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಿಂಹಸ್ವಪ್ನವಾಗಿ ದಿಟ್ಟತನದಿಂದ ಅವರನ್ನೆಲ್ಲಾ ಮಟ್ಟಹಾಕಿ ಸಮಾಜದ ಸ್ವಾಸ್ಥ್ಯ ಕಾಪಾಡಿದ್ದಲ್ಲದೆ ರಾಜ್ಯದ ರಾಜಸ್ವ ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2009ರ ಅಂತ್ಯದಲ್ಲಿ ಅಬಕಾರಿ ಅಧೀಕ್ಷಕರಾಗಿ ಮುಂಬಡ್ತಿ ಹೊಂದಿ ಬೆಂಗಳೂರಿನ ಖೋಡೆ ಬೆವರೆಸ್ (ಬಿಡಿ)ಗೆ ವರ್ಗಾವಣೆಯಾಗಿ ಅಲ್ಲಿ ಯಶಸ್ವಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ 2014ರಲ್ಲಿ ಸೇವಾ ಮುಂಬಡ್ತಿ ಹೊಂದಿ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿ ನೇಮಕವಾದರು. ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದೆಡೆ ಕೆಲಸ ನಿರ್ವಹಿಸಿದ ಗೋಪಾಲಕೃಷ್ಣ ಗೌಡರು ಹೆಚ್ಚಿನ ಸಮಯನ್ನು ಹಾಸನದಲ್ಲೇ ಉಪ ಆಯುಕ್ತರಾಗಿ ಸ್ಮರಣೀಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.

ಕಂದಾಯ ಆಧಾರಿತ ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿಯಾಗುತ್ತಿರುವುದು ಇವರ ಹಿರಿಮೆಯೇ ಸರಿ.  ಆದರ್ಶಗಳು ಹರಳುವುದು, ಹರಳುಗಟ್ಟುವುದು ಮನುಷ್ಯನಲ್ಲಿ  ಅಹಂಕಾರ , ಶ್ರೀಮಂತಿಕೆ, ಬುದ್ದಿವಂತಿಕೆ ಇಲ್ಲದಾಗ.  ಇವೆಲ್ಲ ಇದ್ದಾಗಲೂ ಕೇವಲ ಕೆಲವೇ ಕೆಲವರು ಮಾತ್ರ ಆದರ್ಶದ ಹಾದಿಯಲ್ಲಿ ನಡೆದು ಪ್ರಶಂಸನಾರ್ಹರಾಗುತ್ತಾರೆ. ಅಂತಹವರಲ್ಲಿ ವಿ.ಗೋಪಾಲಕೃಷ್ಣಗೌಡರು ಒಬ್ಬರು.

ಕವಿ ಈಶ್ವರ ಸಣಕಲ್ಲ ….
ಜಗವೆಲ್ಲ ನಗುತಿರಲು ಜಗದವು ನನಗಿರಲಿ. ನಾನು ಅಳುತ್ತಿರಲು ಜಗವನ್ನೊತ್ತಿಕೊಳ್ಳದೆ ನಾ ನಕ್ಕು ಜಗವನ್ನು ಅಳಲು ನೋಡಬಹುದೇ ? ಎಂಬ ಕವನದಿಂದ ಪ್ರೇರೆಪಿತರಾಗಿದ್ದ ಗೋಪಾಲಕೃಷ್ಣಗೌಡರು ತಮ್ಮ ವೇತನದ ಒಂದು ಭಾಗದಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.

ಅರ್ಹ ಅಭ್ಯರ್ಥಿಗಳಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ .ಎಸ್.ಎಲ್ .ಸಿ.ಮತ್ತು ಪಿ.ಯು.ಸಿ.ಯಲ್ಲಿ ಅತ್ಯುನ್ನತ ಸ್ಥಾನಗಳಿಸಿದ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,  ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಾರಸ್ವತ ಸಮಾಜದ ಸಕ್ರಿಯ ಸದಸ್ಯರಾಗಿ ಇವರು ಹಾಸನ ಜಿಲ್ಲೆ  ಒಕ್ಕಲಿಗ ವಿದ್ಯಾರ್ಥಿ ನಿಲಯ , ಸುಳ್ಯ ತಾಲ್ಲೂಕಿನ  ಒಕ್ಕಲಿಗ ವಿದ್ಯಾರ್ಥಿ ನಿಲಯ ಮತ್ತು ಸುಳ್ಯ ಒಕ್ಕಲಿಗ  ವಿದ್ಯಾರ್ಥಿನಿಲಯದ ಅರ್ಹ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯ, ಎಂ.ಬಿ.ಬಿ.ಎಸ್.ನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಆಟೋ ಡ್ರೈವರ್ ಮಗನ ಸ್ನಾತಕೋತ್ತರ ಪರೀಕ್ಷೆ ತರಬೇತಿಗೆ ಧನ ಸಹಾಯ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಾದ ಅರ್ಹ ಬಡ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಲು ನೆರವು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ವಿದ್ಯಾರ್ಥಿಗಳಿಗೆ ನೆರವು, ಕ್ಯಾನ್ಸರ್ ರೋಗಿಗಳಿಗೆ ನೆರವು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ  ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೆ ಕೆ.ಎ.ಎಸ್ ತರಬೇತಿಗೆ ನೆರವು ಹೀಗೆ ಹತ್ತು ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಜೀವನ ಸಾರ್ಥಕ ಪಡಿಸಿಕೊಳ್ಳುತ್ತಾ ಆತ್ಮ ತೃಪ್ತಿಹೊಂದುತ್ತಿರುವ ಗೋಪಾಲಕೃಷ್ಣಗೌಡರು ಮೆರೆಯಲು ಬಯಸದೆ ಮರೆಯಲ್ಲಿ ಉಳಿದು ಕೃತ ಕೃತ್ಯತೆಯನ್ನು ಪಡೆಯುವ ವನ ಸುಮದಂತೆ ಅರಳಿದ್ದಾರೆ.
ಮುಂದಿನ  ಮೇ ತಿಂಗಳಾಂತ್ಯದಲ್ಲಿ ನಿವೃತ್ತಿಯಾಗಲಿರುವ ಇವರ  ನಿವೃತ್ತ ಜೀವನವು ಸದಾ ಸಂತೃಪ್ತಿಯಿಂದ ಕೂಡಿರಲಿ ಎಂದು  ಅವರ ಸ್ನೇಹಿತರು, ಹಿತೈಷಿಗಳು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here