ಯುನೆಸ್ಕೋ ಪಟ್ಟಿಗೆ ಸೇರುವ ಸನಿಹದಲ್ಲಿ ಬೇಲೂರು-ಹಳೇಬೀಡು

0

ಹಾಸನ : ಐತಿಹಾಸಿಕ ಪ್ರವಾಸಿ ತಾಣಗಳ ಬೇಲೂರು – ಹಳೇಬೀಡುಗಳ ಮೂಲಕ ಜಗತ್ತಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಹಾಸನ ಜಿಲ್ಲೆ ಇದೀಗ ಮಗದೊಂದು ಮಹತ್ತರ ಮೈಲಿಗಲ್ಲು ಸ್ಥಾಪಿಸುವ ಸನಿಹಕ್ಕೆ ಬಂದು ನಿಂತಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಬೇಲೂರಿನ ಚನ್ನಕೇಶವ ಹಾಗು ಹಳೆಬೀಡಿನ ಹೊಯ್ಸಳೇಶ್ವರ ದೇಗುಲಗಳು ತಮ್ಮ ವಾಸ್ತು ಶಿಲ್ಪ, ಶಿಲ್ಪಕಲೆಗಳ ಮೂಲಕವೇ ಇಡೀ ಜಗತ್ತನ್ನ ಸೆಳೆಯುತ್ತಿದ್ದ ತಾಣಗಳು. ಇದೀಗ

ಈ ವಿಶ್ವ ವಿಖ್ಯಾತ ಸ್ಥಳಗಳು ಅಧಿಕೃತವಾಗಿ ಜಾಗತಿಕ ಪ್ರವಾಸಿ ಭೂಪಟ ಸೇರುವ ದಿನಗಳು ಸಮೀಪಿಸಿವೆ. ಬುಧವಾರ ಮತ್ತು ಗುರುವಾರ ಹಳೆಬೀಡು, ಬೇಲೂರಿನಲ್ಲಿ ಪ್ರವಾಸ ಮಾಡುತ್ತಿರುವ ಯುನೆಸ್ಕೋ ತಂಡ ಶೀಘ್ರವೇ ವರದಿ ನೀಡಲಿದ್ದು, ಮೈಸೂರು ಜಿಲ್ಲೆಯ ಸೋಮನಾಥಪುರ ಸೇರಿ ರಾಜ್ಯದ ಮೂರು ಐತಿಹಾಸಿಕ ಸ್ಥಳಗಳು ವಿಶ್ವ-ಸಂಸ್ಥೆಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಲಿವೆ.
ರಾಜ್ಯದ ಐತಿಹಾಸಿಕ ಪ್ರವಾಸಿತಾಣಗಳಲ್ಲಿ ವಿಶ್ವವನ್ನೇ ತನ್ನತ್ತ ಸೆಳೆಯುವ ಪ್ರಮುಖ ಸ್ಥಳಗಳಲ್ಲ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲ ಹಾಗೂ

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಅಗ್ರಗಣ್ಯವಾಗಿವೆ. ಸಾವಿರ ವರ್ಷಗಳ ಹಿಂದೆಯೇ ಇಡೀ ಜಗತ್ತು ಬೆರಗಾಗುವಂತಾ ಸೂಕ್ಷ್ಮ ಕೆತ್ತನೆಗಳ ಮೂಲಕ ನಿರ್ಮಿಸಿರುವ ಈ ಎರಡು ದೇಗುಲಗಳು ಇಂದಿಗೂ ಇತಿಹಾಸಕಾರರನ್ನು ಆಶ್ಚರ್ಯವನ್ನುಂಟು ಮಾಡುತ್ತಿವೆ. ಆಧುನಿಕ ಶಿಲ್ಪಿಗಳು ದಂಗಾಗುವಂತೆ ಇಲ್ಲಿನ ವಾಸ್ತು ಶಿಲ್ಪಗಳಿವೆ. ಹಾಗಾಗಿಯೇ ಈ ಎರಡು ದೇಗುಲಗಳು ವಿಶ್ವಪಾರಂಪರಿಕ ತಾಣಗಳ ಪಟ್ಟಿ ಅಂದ್ರೆ ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಆಗಬೇಕು ಎನ್ನುವುದು ಬಹುದಿನಗಳ ಕನಸಾಗಿತ್ತು.
ಕೇಂದ್ರ ಸರಕಾರ ಬೇಲೂರು, ಹಳೇಬೀಡು ಹಾಗೂ

ಸೋಮನಾಥಪುರದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ದೇವಾಲಯಗಳನ್ನು 2022–23ನೇ ಸಾಲಿನಲ್ಲಿ ವಿಶ್ವ-ಸಂಸ್ಥೆಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ (ಯುನೆಸ್ಕೊ)ಗೆ ಸೇರಿಸಬೇಕು ಎಂದು ಕೇಂದ್ರ ಫೆಬ್ರವರಿಯಲ್ಲಿ ಯುನೆಸ್ಕೊಗೆ ನಾಮನಿರ್ದೇಶನ ಮಾಡಿತ್ತು. ತಾಂತ್ರಿಕ ಪ್ರಕ್ರಿಯೆ ಮುಗಿದ ಬಳಿಕ ಇದೀಗ ಯುನೆಸ್ಕೋ ತಜ್ಞರ ಸಮಿತಿ ಪರಿಶೀಲನೆಗೆ ಆಗಮಿಸಿದೆ. ಬುಧವಾರ ಹಳೇಬೀಡಿಗೆ ಆಗಮಿಸಿದ್ದ ಮಲೇಷಿಯಾದ ಇತಿಹಾಸ ತಜ್ಞ ಟಿಯಾಂಗ್ ಕಿಯಾನ್ ಬೂನ್ ನೇತೃತ್ವದ ತಂಡ , ಇಡೀದಿನ ಹಳೆಬೀಡಿನಲ್ಲಿ ಪರಿಶೀಲನೆ ನಡೆಸಿತು. ದೇಗುಲದ

300 ಮೀಟರ್ ವ್ಯಾಪ್ತಿಯ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದಾರೆ, ಗುರುವಾರ ಬೇಲೂರು ಹಾಗೂ ಶುಕ್ರವಾರ ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿ ಪರಿಶೀಲನೆ ನಡೆಸಿ ಅಂತಿಮ ವರದಿ ಸಲ್ಲಿಸಲಿದ್ದಾರೆ.
ಮುಂದಿನ ವರ್ಷದ ವೇಳೆಗೆ ಈ ಮೂರು ಪ್ರಸಿದ್ಧ ಕ್ಷೇತ್ರಗಳು ಯುನೆಸ್ಕೋ ಪಟ್ಟಿ ಸೇರಲಿವೆ. 900 ವರ್ಷಗಳ ಹಿಂದೆ ಕರುನಾಡನ್ನು ಆಳಿದ ಹೊಯ್ಸಳರ ಅರಸರು ನಿರ್ಮಿಸಿದ ಹೊಯ್ಸಳ ಶೈಲಿಯ ದೇವಾಲಯಗಳು ಇಡೀ ಜಗತ್ತಿನಲ್ಲಿ ತಮ್ಮದೆಯಾದ ವಿಭಿನ್ನತೆಯನ್ನು ಹೊಂದಿವೆ. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಹಾಗೂ

ಬೇಲೂರಿನ ಚನ್ನಕೇಶವ ದೇವಾಲಯಗಳೆರಡು ಕೂಡ ನಕ್ಷತ್ರಾಕಾರದ ಜಗಯಲಿಯ ಮೇಲೆ ನಿರ್ಮಾಣವಾಗಿವೆ. ಸೂಕ್ಷ್ಮ ಕೆತ್ತನೆ, ಸುಂದರ ವಾಸ್ತುಶಿಲ್ಪಗಳ ಮೂಲಕ ಇತಿಹಾಸಕಾರರನ್ನು ಸದಾಕಾಲಕ್ಕೂ ಸೆಳೆಯುವ ವೈಶಿಷ್ಟ್ಯ ಪೂರ್ಣ ಸ್ಥಳಗಳಾಗಿವೆ. ಹಾಗಾಗಿಯೇ

ಈ ಎರಡು ಸ್ಥಳಗಳು ಬಹಳ ಹಿಂದೆಯೇ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಬೇಕಿತ್ತು. 2015ರಿಂದಲೂ ಇದು ತಾತ್ಕಾಲಿಕ ಪಟ್ಟಿಯಲ್ಲಿವೆ.
ಇದೀಗ ತಜ್ಞರ ಸಮಿತಿ ಜೊತೆಗೆ ಆಗಮಿಸಿದ್ದು, ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥರಾದ ಇನ್ಫೋಸಿಸ್ನ ಸುಧಾಮೂರ್ತಿಯವರು ಯುನೆಸ್ಕೋ ತಂಡಕ್ಕೆ ದೇಗುಲದ ವಿಶೇಷತೆ, ಹೊಯ್ಸಳರ ಲಾಂಛನದ ಬಗ್ಗೆ,

ಉಗ್ರ ನರಸಿಂಹ, ಲಕ್ಷ್ಮಿನರಸಿಂಹನ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ವಿವರಣೆ ನೀಡಿದರು.
ಕರ್ನಾಟಕದ ಮೂರು ಸ್ಥಳಗಳು ಯುನೆಸ್ಕೋ ಪಟ್ಟಿಗೆ ಸೇರುತ್ತಿರುವುದು ಖುಷಿ ವಿಚಾರ. ದೇಗುಲಗಳು ಯುನೆಸ್ಕೋ ಪಟ್ಟಿಗೆ ಸೇರಿದರೆ ವಿಶ್ವ ಭೂಪಟದಲ್ಲಿ ಕರುನಾಡು ಮಿಂಚಲಿದ್ದು, ಇಲ್ಲಿನ ಜನರ ಬದುಕು ಕೂಡ ಬದಲಾಗಲಿದೆ ಎಂದರು.
ಒಟ್ಟಿನಲ್ಲಿ

ಹಾಸನದ ಬೇಲೂರು ಹಳೆಬೀಡು ಯುನೆಸ್ಕೋ ಪಟ್ಟಿಗೆ ಸೇರಬೇಕು ಎನ್ನುವ ಕರುನಾಡ ಜನರ ಬಹುದಿನಗಳ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿದೆ, ಯುನೆಸ್ಕೊಪಟ್ಟಿ ಸೇರುವ ಜೊತೆಗೆ ರಾಜ್ಯ ಸರಕಾರ ಪ್ರವಾಸೋದ್ಯಮಕ್ಕೆ ಮೂಲಭೂತ ಸೌಲಭ್ಯಗಳನ್ನ ನೀಡಿದರೆ ಜಗತ್ತಿನ ಪ್ರವಾಸಿ ಭೂಪಟದಲ್ಲಿ ಹಾಸನ ಮಿಂಚುವುದರಲ್ಲಿ ಸಂದೇಹವಿಲ್ಲ.

LEAVE A REPLY

Please enter your comment!
Please enter your name here