ಹಾಸನ: ಜಿಲ್ಲೆಯಲ್ಲೂ ಆಕ್ಸಿಜನ್ ಸಮಸ್ಯೆ ಕೊರತೆಯಾಗಿ ಕಾಡುತ್ತಿರುವುದು ಸುಳ್ಳಲ್ಲ. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ದೊಡ್ಡಮಟ್ಟದ ಅಭಾವ ಇಲ್ಲದೇ ಇದ್ದರೂ, ಅನೇಕ ಖಾಸಗಿ ಆಸ್ಪತ್ರೆಗಳು ಪ್ರಾಣವಾಯುವಿಗಾಗಿ ನಾನಾ ರೀತಿಯ ತೊಂದರೆ ಅನುಭವಿಸುತ್ತಿವೆ. ಕೆಲ ದಿನಗಳ ಹಿಂದೆ ಆಮ್ಲಜನಕ ಇಲ್ಲ ಎಂಬ ಕಾರಣಕ್ಕೆ
ಹತ್ತಾರು ರೋಗಿಗಳನ್ನು ಬೇರೆಡೆಗೆ ಸ್ಥಳಾಂತರ ಸಹ ಮಾಡಲಾಗಿತ್ತು. ಜಿಲ್ಲೆಯಲ್ಲಿ ಆಕ್ಸಿಜನ್ ತತ್ವಾರದ ಬಗ್ಗೆ ವರದಿ ಪ್ರಕಟಿಸಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು. ನಂತರ ಹಂತ ಹಂತವಾಗಿ ಜಿಲ್ಲೆಗೆ ಆಮ್ಲಜನಕ ಪೂರೈಕೆಯಾಗುತ್ತಿರುವುದರಿಂದ ಇದರಿಂದಾಗುವ ಅಪಾಯ ತಪ್ಪಿದಂತಾಗಿದೆ.
ಜಿಲ್ಲೆಯಲ್ಲೂ ಆಕ್ಸಿಜನ್ ಬಸ್:
ಈ ಎಲ್ಲಾ ಎಡರು-ತೊಡರುಗಳ ನಡುವೆ ರಾಜಧಾನಿ ಬೆಂಗಳೂರು ನಂತರ ಚಿಕ್ಕಮಗಳೂರಿನಲ್ಲಿ ಆರಂಭವಾಗಿದ್ದ ಆಕ್ಸಿಜನ್ ಬಸ್ ಸೇವೆ ವಿಳಂಬವಾಗಿಯಾದರೂ ಆರಂಭವಾಗುತ್ತಿರುವುದು ಸಂತಸ ಮತ್ತು ಸಮಾಧಾನ ತರಿಸಿದೆ.
ಈಗಾಗಲೇ ನಗರದ ಕೆಎಸ್‌ಆರ್‌ಟಿಸಿ 1 ನೇ ಘಟಕದ ವತಿಯಿಂದ ಚಾರಿಟಬಲ್ ಟ್ರಸ್ಟ್ವೊಂದರ ನೆರವಿನೊಂದಿಗೆ ಮೂರು ಆಕ್ಸಿಜನ್ ಬಸ್‌ಗಳನ್ನು ಸಿದ್ಧಗೊಳಿಸಿ ಸೋಂಕಿತರ ಸೇವೆಗಾಗಿ ಬಿಡಲಾಗಿದೆ. ಇದೀಗ
ನಾಲ್ಕನೇ ಬಸ್‌ನ್ನು ಅಣಿಗೊಳಿಸಲಾಗಿದೆ. ಇವು ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಸಂಚರಿಸಲಿವೆ. ಈ ಸೌಲಭ್ಯವನ್ನು ಮತ್ತಷ್ಟು ಹೆಚ್ಚು ಮಾಡಲು ಪ್ರಾಯೋಜಕರು ಸಿಕ್ಕರೆ ಇನ್ನೂ ಹೆಚ್ಚಿನ ಆಮ್ಲಜನಕ ಬಸ್‌ಗಳನ್ನು ಸಿದ್ಧಗೊಳಿಸಲಾಗುವುದು ಎಂಬುದು ಅಧಿಕಾರಿಗಳ ಮಾತಾಗಿದೆ.
ಕೊರೊನಾ ರೋಗಿಗಳ ತುರ್ತು ಉಪಯೋಗಕ್ಕಾಗಿ ಜಿಲ್ಲೆಯಲ್ಲೂ ಆಕ್ಸಿಜನ್ ಸೇವೆಯುಳ್ಳ ಬಸ್ ಸೇವೆ ಆರಂಭವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಸ್ಥೆ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಗಿದೆ.
ಜಿಲ್ಲೆಯಲ್ಲೂ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 24*7 ಸೌಲಭ್ಯ ಸಿಗುವ ಆಕ್ಸಿಜನ್ ಬಸ್ ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಪ್ರಾಯವಾಯು ಸಿಕ್ಕರೆ ಅಮೂಲ್ಯ ಜೀವ ಉಳಿಯಲಿದೆ ಎಂಬ ವಿಶ್ವಾಸ ಹೊಂದಲಾಗಿದೆ.
ಬಸ್‌ನಲ್ಲಿ ಏನೆಲ್ಲಾ ಇರಲಿದೆ:
ತಾಂತ್ರಿಕವಾಗಿ ಸದೃಢವಾಗಿರುವ ವಿನೂತನ ಆಕ್ಸಿಜನ್ ಆನ್ ವ್ಹೀಲ್ಸ್ ಬಸ್‌ನಲ್ಲಿ ಒಟ್ಟು ಆರು ಲಿಕ್ವಿಡ್ ಆಕ್ಸಿಜನ್ ಜಂಬೋ ಸಿಲಿಂಡರ್‌ಗಳಿದ್ದು, ಹಾಸನ ಜಿಲ್ಲೆಯ ವಿವಿಧ ಗ್ರಾಮಗಳಿಗೂ ಆಮ್ಲಜನಕ ಹೊತ್ತ ಬಸ್ ಸಂಚಾರ ಮಾಡಲಿದೆ. ಅಷ್ಟೇ ಅಲ್ಲ ಹಿಮ್ಸ್ ಆಸ್ಪತ್ರೆ ಆವರಣದಲ್ಲಿಯೂ ತುರ್ತಾಗಿ ಅವಶ್ಯಕತೆ ಇರುವ ರೋಗಿಗಳಿಗೆ ತಾತ್ಕಾಲಿಕವಾಗಿ ಆಕ್ಸಿಜನ್ ಸೇವೆ ಸಿಗಲಿದೆ.
ಆಮ್ಲಜನಕ ಸಿಗದೆ ಎಷ್ಟೋ ಕಡೆಗಳಲ್ಲಿ ಕೊರೊನಾ ಸೋಂಕಿತರು ಜೀವ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸಲು, ಎಲ್ಲಕ್ಕಿಂತ ಮುಖ್ಯವಾಗಿ ಆಮ್ಲಜನಕ ಇರುವ ಬಸ್‌ನಿಂದ ಗ್ರಾಮೀಣ ಭಾಗಗಳ ಜನರಿಗೆ ಅನುಕೂಲ ಮಾಡಿಕೊಡಲು ಈ ಬಸ್ ಸಿದ್ಧಗೊಳಿಸಲಾಗಿದೆ. ಇಲ್ಲಿ ಸಾಮಾಜಿಕ ಅಂತರವೂ ಪಾಲನೆಗೂ ಗಮನ ಹರಿಸಲಾಗಿದ್ದು, ಒಂದು ಸಿಲಿಂಡರ್ ಖಾಲಿಯಾದರೆ ಮತ್ತೊಂದು ಸಿದ್ಧವಾಗಿರಲಿದೆ.
ಬಸ್‌ನಲ್ಲೇ ಎಮರ್ಜೆನ್ಸಿ ಆಮ್ಲನಜಕ ಸಿಗುವುದರಿಂದ ಉಸಿರಾಟದ ಸಮಸ್ಯೆ ಇರುವವರು ಆ್ಯಂಬುಲೆನ್ಸ್ಗಾಗಿ ಕಾಯಬೇಕಿಲ್ಲ. ದೂರ ದೂರದ ಊರುಗಳಿಂದ ಆಮ್ಲಜನಕದ ಸಹಾಯದಿಂದ ಈ ಬಸ್‌ಗಳಲ್ಲಿ ಆಸ್ಪತ್ರೆಗೆ ಬರಬಹುದಾಗಿದೆ. ಇದರಿಂದ ತುಂಬಾ ಅನುಕೂಲವಾಗಿದೆ ಎಂಬುದು ರೋಗಿಗಳ ಮಾತಾಗಿದೆ.
ಬಸ್‌ನಲ್ಲೇ ಚಿಕಿತ್ಸೆಗೆ ಅವಕಾಶ:
ಉಸಿರಾಟದ ಸಮಸ್ಯೆ ಇರುವ 6 ಜನರನ್ನು ಒಂದೇ ಬಾರಿಗೆ
ಆಮ್ಲಜನಕ ಸೌಲಭ್ಯ ಇರುವ ಈ ಸಾರಿಗೆ ಬಸ್‌ನಲ್ಲಿ ಕರೆತರಬಹುದಾಗಿದೆ. 2 ದೊಡ್ಡ ಆಕ್ಸಿಜನ್ ಸಿಲೆಂಡರ್ ಮತ್ತು 6 ಆಕ್ಸಿಜನ್ ರೂಟ್‌ಗಳನ್ನು ಬಸ್‌ನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಆರಾಮವಾಗಿ ಕುಳಿದು ನಿದ್ರಿಸಿಕೊಂಡು ಆಸ್ಪತ್ರೆಗೆ ಬರುವ ಸೌಲಭ್ಯ ಕಲ್ಪಿಸಲಾಗಿದೆ. ಒಂದು ವೇಳೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುವುದು ತಡವಾದರೂ ಅಲ್ಲಿವರೆಗೂ ಬಸ್‌ನ್ನು ಆಸ್ಪತ್ರೆ ಆವರಣದಲ್ಲಿ ನಿಲುಗಡೆ ಮಾಡಿ ಇಲ್ಲೇ ವೈದ್ಯರು ಚಿಕಿತ್ಸೆ ನೀಡಬಹುದಾಗಿದೆ.
ಆಕ್ಸಿಜನ್ ಸೌಲಭ್ಯವುಳ್ಳ ಬಸ್‌ನ್ನು ಜಿಲ್ಲಾಡಳಿತದ ಎಲ್ಲಿಗೆ ನಿಯೋಜನೆ ಮಾಡುತ್ತೋ ಅಲ್ಲಿ ಸೇವೆ ಆರಂಭಿಸಲಾಗುವುದು.
-ಕೆ.ನಂದಕುಮಾರ್, ವಿಭಾಗೀಯ ತಾಂತ್ರಿಕ ಅಧಿಕಾರಿ