ಪಾಸಿಟಿವಿಟಿ ದರ ಹಾಸನದ ಯಾವ ಪ್ರದೇಶದಲ್ಲಿ ಹೆಚ್ಚು ಕಂಡುಬಂದಂತಹ ಕಡೆ ಸಂಪೂರ್ಣ ಲಸಿಕೆ ನೀಡಲು ಸೂಚನೆ

0

ಹಾಸನ ಸೆ.09 : ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ಪ್ರದೇಶದ ಕಳೆದ 15 ದಿನಗಳಲ್ಲಿ  ಪಾಸಿಟಿವಿಟಿ ದರ ಹೆಚ್ಚು ಕಂಡುಬಂದಿರುವ ಸ್ಥಳಗಳಲ್ಲಿ ಸಂಪೂರ್ಣ ಲಸಿಕೆ ನೀಡಲು ಕ್ರಮವಹಿಸುವಂತೆ ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲ್ಲೂಕು ಅಧಿಕಾರಿಗಳೊಂದಿಗೂ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು 2 ಡೋಸ್ ಲಸಿಕೆ ಪಡೆಯಲು ಬಾಕಿ ಇರುವ 1.14ಲಕ್ಷ ಜನರಿಗೆ 10 ದಿನದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಹೋಮ್ ಐಸೋಲೇಶನ್‍ನಲ್ಲಿ ಇರುವವರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮನೆಗಳು ಐಸೋಲೇಷನ್‍ಗೆ ಸೂಕ್ತವಿಲ್ಲದೇ ಇರುವುದು ಕಂಡುಬಂದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅದೇಶಿಸಿದರು.

ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಿಗ ವರ್ಗಾವಣೆ ಮಾಡಲು ತಿಳಿಸಿದ ಅವರು ಆರೋಗ್ಯ ಸಿಬ್ಬಂದಿಗಳು ಲಸಿಕೆ ಹಾಕಲು ಮನೆಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಲಭ್ಯವಾಗದಂತಹ ಜನರ ಮನೆಗೆ ಮುಂಜಾನೆಯೇ  ತೆರಳಿ ಲಸಿಕೆ ನೀಡುವಂತೆ ತಿಳಿಸಿದರು.

ಲಸಿಕೆ ಪಡೆದವರಲ್ಲಿ ಸಾವಿನ ಪ್ರಮಾಣ ಕಡಿಮೆಯಿದ್ದು, ಕಡ್ಡಾಯವಾಗಿ ಎಲ್ಲರೂ  ಲಸಿಕೆ ಪಡೆಯುವಂತೆ ಮನವೋಲಿಸಿ ಶೇ.100 ರಷ್ಟು ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅರಕಲಗೂಡು ಆಮ್ಲಜನಕ ಘಟಕವನ್ನು ಶೀಘ್ರವಾಗಿ ವಿಧ್ಯುತ್ ಸಂಪರ್ಕ ಕಲ್ಪಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಅಧಿಕಾರಿಗಳ ಸಂಪೂರ್ಣ ಸಹಕಾರದಿಂದ ಮಾತ್ರ ಪಾಸಿಟಿವಿಟಿ ದರ ಕಡಿಮೆಗೊಳಿಸಲು ಸಾಧ್ಯ ಎಂದರು.

ರೈತರ ಆತ್ಮಹತ್ಯೆ ಪರಿಹಾರ ಧನದ ಚೆಕ್‍ಅನ್ನು ಸೆ.13ರೊಳಗೆ ಅರ್ಹ ಫಲಾನುಭವಿಗಳಿಗೆ ಕಡ್ಡಾಯವಾಗಿ ವಿತರಿಸುವಂತೆ ತಿಳಿಸಿದರಲ್ಲದೇ, ಜಿಲ್ಲೆಯ ಮುಂಗಾರು ಹಂಗಾಮಿನ ರಸಗೊಬ್ಬರ ದಾಸ್ತಾನಿನ ವಿವರ ಪಡೆದು ಕೊರತೆ ಇರುವ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರಗಳನ್ನು ಪೂರೈಸುವಂತೆ ತಿಳಿಸಿದರು.

ಕೃಷಿಕರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಫ್ರೂಟ್ ತಂತ್ರಾಂಶದಲ್ಲಿ ದಾಖಲಿಸುವಂತೆ ತಿಳಿಸಿದರು.

ಪ್ರೂಟ್ಸ್ ತಂತ್ರಾಂಶ ನೊಂದಣಿ ಮೂಲಕ ಅನರ್ಹರು ಬಿ.ಪಿ.ಎ ಕಾರ್ಡ್ ಹೊಂದಿರುವರನ್ನು ಗುರುತಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಹೆಚ್ಚಾಗಿ ಕಂಡುಬರುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ, ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 9 ಸಾವಿರ ಗರ್ಭಿಣಿ ಮಹಿಳೆಯರಿದ್ದು, ಅವರಿಗೆ 1ವಾರದೊಳಗೆ ಶೇ.100ರಷ್ಟು ಲಸಿಕೆ ನೀಡುವಂತೆ ಈಗಾಗಲೇ ತಿಳಿಸಲಾಗಿದೆ ಎಂದ ಅವರು ನಿಗದಿತ ಲಸಿಕಾ ಗುರಿ ತಲುಪÀದಂತಹ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳಿಗೆ ನೊಟೀಸ್ ಜಾರಿಗೊಳಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ, ಉಪವಿಭಾಗಾಧಿಕಾರಿಗಳಾದ ಬಿ.ಎ.ಜಗದೀಶ್, ಪ್ರತೀಕ್ ಬಾಯಲ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರವಿ, ಆರ್.ಸಿ. ಹೆಚ್ ಅಧಿಕಾರಿ ಡಾ|| ಕಾಂತ್‍ರಾಜ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here