ಸೈಕಲ್ ಯಾರಿಗೆ ಇಷ್ಟ ಇಲ್ಲ ಹೇಳಿ ? ಸೈಕಲ್ ಎಂದ ಕೂಡಲೇ ನಮಗೆ ನೆನಪಾಗುವುದು ನಮ್ಮ ಬಾಲ್ಯ. ಬಾಲ್ಯದಲ್ಲಿ ಪ್ರತಿಯೊಬ್ಬರು ಸೈಕಲ್ ತುಳಿದೆ ಇರುತ್ತಾರೆ. ಆದರೆ ನಾವು ಬೆಳೆದಂತೆ ಕೆಲಸ ಹಾಗೂ ಇನ್ನಿತರ ಬಿಡುವಿಲ್ಲದ ಒತ್ತಡದಲ್ಲಿ ಸಮಯದ ಅಭಾವದಿಂದಾಗಿ ಬೈಕ್ ಕಾರು ಹಾಗೂ ಇನ್ನಿತರ ವಾಹನಗಳ ಗೀಳಿಗೆ ಬೀಳುತ್ತೇವೆ.
ಆದರೆ ಕಾಲ ಬದಲಾಗುತ್ತಿದೆ ಸೈಕಲ್ ಹೆಚ್ಚಾಗಿ ಮತ್ತೆ ರೋಡಿಗೆ ಬರುತ್ತಿವೆ.
ಸೊಂಟದ ಕೊಬ್ಬು, ದಪ್ಪ ಹೊಟ್ಟೆ ಇರುವವರನ್ನು ಹೊಗಳುವವರು ಈ ಜಗತ್ತಿನಲ್ಲಿ ಅತಿ ಕಡಿಮೆ ಇರಬಹುದು. ವಾಸ್ತವವಾಗಿ ಉತ್ತಮದೇಹ ಹೊಂದಿದ್ದು ಉತ್ತಮ ಆರೋಗ್ಯ ಹೊಂದಿದ್ದರೆ ಈ ವ್ಯಕ್ತಿಗಳು ತಮ್ಮ ಬಗ್ಗೆ ಕೀಳರಿಮೆ ಬೆಳಸಿಕೊಳ್ಳಬೇಕಾಗಿಯೇ ಇಲ್ಲ. ಆದರೆ ಸೊಂಟದ ಕೊಬ್ಬು ಹೆಚ್ಚು ಸಂಗ್ರಹವಾದಷ್ಟೂ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಹಲವಾರು ! ಹಾಗಾಗಿ ಕೊಂಚ ಕಷ್ಟ ಆದರೂ ಸರಿ, ಈ ಕೊಬ್ಬನ್ನು ನಿವಾರಿಸಬೇಕೆಂಬ ಪ್ರಯತ್ನಗಳನ್ನಂತೂ ತಕ್ಷಣದಿಂದ ಪ್ರತಿನಿತ್ಯ ಮಾಡಲೇ ಬೇಕು. ಇಲ್ಲದಿದ್ದರೆ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಪ್ರತಿನಿತ್ಯ ಒಂದು ಗಂಟೆ ಸೈಕಲ್ ತುಳಿಯುವುದರಿಂದ 400 ರಿಂದ 1000 ಕ್ಯಾಲೊರಿ ಬರ್ನ್ ಮಾಡಬಹುದು ಎಂಬುದು ಈಗಾಗಲೇ ದೃಢಪಟ್ಟಿದೆ.
ವ್ಯಾಯಾಮಗಳಲ್ಲಿಯೇ ಅತಿ ಸುಲಭವಾದ ವ್ಯಾಯಾಮ ಸೈಕ್ಲಿಂಗ್. ಆದ್ದರಿಂದ ಇತ್ತೀಚೆಗೆ ಇದು ತುಂಬಾ ಜನಪ್ರಿಯಗೊಳ್ಳುತ್ತಿದೆ.
ಸೈಕಲ್ ತುಳಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಕ್ಯಾನ್ಸರ್ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಡಯಾಬಿಟಿಸ್ ಬರದಂತೆ ತಡೆಯಬಹುದು. ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ. ಬುದ್ಧಿಮಟ್ಟ ಚುರುಕುಗೊಳ್ಳುತ್ತದೆ. ನಿದ್ರಾಹೀನತೆಯಿಂದ ಮುಕ್ತಿ ಸಿಗುತ್ತದೆ.ಹಣ ಉಳಿತಾಯವಾಗುತ್ತದೆ. ಇಷ್ಟೆಲ್ಲಾ ಉಪಯೋಗಗಳು ನಮಗೆ ಪ್ರತಿನಿತ್ಯ ಕೇವಲ ಒಂದು ಗಂಟೆ ಸೈಕಲ್ ತುಳಿಯುವುದರಿಂದ ಸಿಗುವ ಉಪಯೋಗಗಳು.
ನಮ್ಮ ಹಾಸನದಲ್ಲಿಯೇ PEDAL DEMONS ಎಂಬ ಸೈಕ್ಲಿಂಗ್ ತಂಡವೊಂದು ಇದೆ. ವರ್ಷದ ಹಿಂದೆ ಮಹೇಂದ್ರ ಎಂಬ ಹಿರಿಯರೊಬ್ಬರ ಸ್ಪೂರ್ತಿಯಿಂದ
ಕೃಷ್ಣ ಸ್ವರೂಪ್,ಮದನ್,ರಾಜೀವ್ ಶರ್ಮ ಎಂಬ ಮೂವರು ಸೇರಿ ಆರಂಭಿಸಿದ ಈ ತಂಡದಲ್ಲಿ ಇಂದು 25 ಜನರಿದ್ದಾರೆ. ಇವರೆಲ್ಲ ಪ್ರತಿದಿನ ಸುಮಾರು 30 ಕಿಲೋಮೀಟರ್ ಸೈಕಲ್ ತುಳಿಯುತ್ತಾರೆ. ಪ್ರತಿದಿನ ಬೆಳಿಗ್ಗೆ 5:30ಕ್ಕೆ ನಗರದ ಹೊರವಲಯದ ಗುಂಡೇಗೌಡನ ಕೊಪ್ಪಲಿನಿಂದ ಶುರುವಾಗುವ ಇವರ ಸೈಕ್ಲಿಂಗ್ ಜೋಡಿ ಕೃಷ್ಣಾಪುರ,ಕಬ್ಬಳ್ಳಿವರೆಗೂ ಸಾಗಿ ನಂತರ 7:15ಕ್ಕೆ ಹಿಂತಿರುಗಿ ಬಂದು ಸೇರುತ್ತಾರೆ.
ಇವರ ಪ್ರಯಾಣದ ನಡುವೆ ತಂಡದಲ್ಲಿರುವ ವಕೀಲರಾಗಿರುವ ಮಂಜುನಾಥ್ ರವರು ವ್ಯಾಯಾಮ ಅಭ್ಯಾಸ ಮಾಡಿಸುತ್ತಾರೆ.
ಪ್ರತಿ ಭಾನುವಾರ ಸ್ವಲ್ಪ ದೂರ ಸಾಗುವ ಇವರ ಪ್ರಯಾಣ ಶೆಟ್ಟಿಹಳ್ಳಿ,ಹಳೇಬೀಡು,ಕೋರವಂಗಲದ ದೇವಸ್ಥಾನದವರೆಗೂ ಸಾಗುತ್ತದೆ.
ಇದರಿಂದ ನಮಗೆ ಕೇವಲ ಉತ್ತಮ ಆರೋಗ್ಯವಲ್ಲದೆ ಸುಂದರ ಪ್ರಯಾಣದ ಅನುಭವ ಸಿಗುತ್ತದೆ ಎನ್ನುತ್ತಾರೆ ಕೃಷ್ಣ ಸ್ವರೂಪ್.
ಕೆಲವು ದೇಶಗಳಲ್ಲಂತೂ ಕೊಲಂಬಿಯಾ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಚೀನಾ, ಜಪಾನ್ ಸೈಕಲ್ ಗಳೇ ನಿತ್ಯ ಸಂಚಾರದ ಮುಖ್ಯ ವಾಹನಗಳಾಗಿವೆ. ನಮ್ಮ ಭಾರತದಲ್ಲಿಯೂ ಸೈಕಲ್ಲುಗಳಿಗೆಂದೇ ವಿಶೇಷ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಮೊದಲಿಗೆ ಪೂನಾದಲ್ಲಿ, ಈಗ ನಮ್ಮ ಮೈಸೂರಿನಲ್ಲಿಯೂ ಈ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತಿದೆ.
ಉತ್ತಮ ಜನಸ್ನೇಹಿ ಮತ್ತು ಆರೋಗ್ಯ ಸ್ನೇಹಿ ಆಗಿರುವ ಸೈಕ್ಲಿಂಗ್ ಅನ್ನು ಉತ್ತೇಜಿಸಿ ಇದರ ಬಗ್ಗೆ ಜನಕ್ಕೆ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವಂತೆ ಸರ್ಕಾರವೇ ಮಾಡಬೇಕು.
ದಯವಿಟ್ಟು ಎಲ್ಲರೂ ಆದಷ್ಟು ಸೈಕಲ್ ಬಳಸಿ ನೀವು ಆರೋಗ್ಯವಾಗಿರಿ ಮತ್ತು ವಾಹನದಟ್ಟಣೆ ,ಹೊಗೆ ಎಲ್ಲವನ್ನು ತಗ್ಗಿಸಿ ಪರಿಸರಕ್ಕೆ ನಾವು ಕೂಡ ಈ ರೀತಿಯಾಗಿ ಕೊಡುಗೆ ನೀಡಬಹುದು.
ಬರಹ – ಜಗರಾಜ್