ಡಾ.ರಾಜೀವ್ ಸವಿ ನೆನಪು! ಅಪ್ಪಾ…ಶೂನ್ಯದಿಂದ ಸಾಮ್ರಾಜ್ಯವನ್ನು ಕಟ್ಟಿದ ಧೈರ್ಯವಂತ ನೀನು…

0

ಇತ್ತೀಚೆಗೆ ನಿಧನರಾದ ಹಾಸನದ ಹೆಸರಾಂತ ಮಕ್ಕಳ ವೈದ್ಯ ಡಾ. ರಾಜೀವ್ ಬಗ್ಗೆ ಅವರ ಮಗಳು ಡಾ. ರಚನಾ ರಾಜೀವ್ ಫೇಸ್ ಬುಕ್ ನಲ್ಲಿ ಬರೆದಿರುವ ಫೋಸ್ಟ್ ನ ಕನ್ನಡ ಅನುವಾದ
ಅಶೋಕ್ ಬಸವನಹಳ್ಳಿ ಅವರಿಂದ.

ಅಪ್ಪಾ…ಶೂನ್ಯದಿಂದ ಸಾಮ್ರಾಜ್ಯವನ್ನು ಕಟ್ಟಿದ ಧೈರ್ಯವಂತ ನೀನು…

ನನ್ನ ಅಪ್ಪ, ಹೆಸರಾಂತ ಮಕ್ಕಳ ವೈದ್ಯ ಮತ್ತು ಬಡ ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ದೂರದೃಷ್ಟಿಯ ಉದ್ಯಮಿ. ಜಿಟ್ಟೇನಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಅಪ್ಪ, ಬಹಳ ಕಷ್ಟದಿಂದಲೇ ಎಂಬಿಬಿಎಸ್ ಮಾಡಿದರು. ಎಂಬಿಬಿಎಸ್ ನಂತರ ತಮ್ಮದೇ ಕ್ಲಿನಿಕ್ ಆರಂಭಿಸಿದರು. ನಂತರ ಪೀಡಿಯಾಟ್ರಿಕ್ಸ್‌ನಲ್ಲಿ ಎಂಡಿ ಪಡೆದು, ಹಾಸನದ ಹೆಸರಾಂತ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು.

1986 ರಲ್ಲಿ ಒಂದು ಸಣ್ಣ ವ್ಯವಸ್ಥೆಯೊಂದಿಗೆ ತಮ್ಮ ಸ್ವಂತ ವೃತ್ತಿ ಬದುಕು ಆರಂಭಿಸಿದ ಅಪ್ಪ, ಉತ್ತಮ ಹೆಸರು ಮತ್ತು ಖ್ಯಾತಿ ಗಳಿಸಿದರು. ಕ್ರಮೇಣ ಅವರ ಪುಟ್ಟ ವ್ಯವಸ್ಥೆಯು 160 ಹಾಸಿಗೆಯ ಆಸ್ಪತ್ರೆಯಾಗಿ ವಿಸ್ತರಿಸಿತು. ಕೆಲಸದ ಬಗೆಗಿನ ಅವರ ಸಮರ್ಪಣಾ ಮನೋಭಾವವನ್ನು ಯಾರೂ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಪ್ರತಿದಿನವೂ 250-350 ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದರು. ನನ್ನ ಅಮ್ಮ ನೀಡಿದ ಬೆಂಬಲದೊಂದಿಗೆ ನಗರದಲ್ಲಿ ಹೆಸರಾಂತ ಮಕ್ಕಳ ವೈದ್ಯರಾದರು. ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಚಿಕಿತ್ಸೆ ನೀಡಿದ ಗೌರವದ ಇತಿಹಾಸ ಅಪ್ಪನಿಗಿದೆ.

ಅಪ್ಪ 1999 ರಲ್ಲಿ, 40 ವಿದ್ಯಾರ್ಥಿಗಳ ಸಾಮರ್ಥ್ಯದ ನರ್ಸಿಂಗ್ ಕಾಲೇಜನ್ನು ಪ್ರಾರಂಭಿಸಿದರು. ಕ್ರಮೇಣ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಮತ್ತು ಅದರ ಪಟ್ಟಿಯೂ ದೊಡ್ಡದಾಗಿದೆ …. ರಾಜೀವ್ ಕಾಲೇಜ್ ಅಂಡ್ ಸ್ಕೂಲ್ ಆಫ್ ನರ್ಸಿಂಗ್, ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಜೀವ್ ಪಾಲಿಟೆಕ್ನಿಕ್ ಕಾಲೇಜು, ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್, ರಾಜೀವ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ರಾಜೀವ್ ಕಾಲೇಜ್ ಆಫ್ ಫಿಸಿಯೋಥೆರಪಿ, ರಾಜೀವ್ ಎಜುಕೇಶನ್ ಕಾಲೇಜ್, ಕಳೆದ ಶೈಕ್ಷಣಿಕ ವರ್ಷದಲ್ಲಿ ಆರಂಭವಾದ ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಮತ್ತು ಈ ಶೈಕ್ಷಣಿಕ ವರ್ಷದಿಂದ ಆರಂಭವಾಗಬೇಕಿರುವ ರಾಜೀವ್ ಕಾಲೇಜ್ ಆಫ್ ಫಾರ್ಮಸಿ. 20 ವರ್ಷಗಳ ಅವಧಿಯಲ್ಲಿ 4000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡಿದರು.
ಇತರರ ಬಗ್ಗೆ ಸದಾ ಸಹಾನುಭೂತಿ ಹೊಂದಿದ್ದ ಪರಿಶುದ್ಧ ಮನಸ್ಸಿನ ಮನುಷ್ಯ ಅಪ್ಪ. ಇನ್ನೊಬ್ಬರ ಕಷ್ಟಗಳಿಗೆ ಮಿಡಿಯುವ, ಅವರಿಗೆ ತನ್ನ ನೆರವಿನ ಹಸ್ತವನ್ನು ಚಾಚುತ್ತಿದ್ದ ಅಪ್ಪ ಎಂದಿಗೂ ತನ್ನ ಬಗ್ಗೆ ಮಾತ್ರ ಆಸ್ಥೆ ವಹಿಸಲಿಲ್ಲ. ತನ್ನ ತಾಳ್ಮೆ ಮತ್ತು ಒಳ್ಳೆಯತನಕ್ಕೆ ಹೆಸರುವಾಸಿಯಾದ ಅವರು, ಸರಳ ಉಡುಪು ಮತ್ತು ಹವಾಯಿ ಚಪ್ಪಲಿಗಳನ್ನು ಧರಿಸುತ್ತಿದ್ದರು. ಕೋಟ್ಯಧಿಪತಿಯಾಗಿದ್ದರೂ ಐಷಾರಾಮಿ ಜೀವನದ ಹಿಂದೆ ಹೋಗಲಿಲ್ಲ. ಹವಾಯಿ ಚಪ್ಪಲಿಗಳನ್ನು ಹಾಕುವುದೇ ಅವರಿಗೆ ಹಿತಕರವಾಗಿರುತ್ತಿತ್ತು.

Rachana Rajeev

ಅವರು ಧೈರ್ಯ ಮತ್ತು ಬುದ್ಧಿವಂತಿಕೆಯ ಪ್ರತೀಕವಾಗಿದ್ದರು. “ಕಠಿಣ ಪರಿಶ್ರಮವೇ ಯಶಸ್ಸಿನ ಕೀಲಿ ಕೈ” ಎಂದು ನಮಗೆ ಜೀವನ ಪಾಠಗಳನ್ನು ಹೇಳುತ್ತಿದ್ದರು. ಅವರು ಯಾವಾಗಲೂ ತಾನು ಐಎಎಸ್ (ಇಂಡಿಯನ್ ಅಗ್ರಿಕಲ್ಚರ್ ಸರ್ವೀಸ್) ಹಿನ್ನೆಲೆಯಿಂದ ಬಂದಿರುವವನು ಎಂದು ಹೇಳುತ್ತಿದ್ದರು. ಪ್ರತಿಯೊಬ್ಬರಿಂದಲೂ ಪ್ರೀತಿಸಲ್ಪಡುತ್ತಿದ್ದ ಅವರು ಸಹೋದ್ಯೋಗಿಗಳು ಮತ್ತು ಸಿಬ್ಬಂದಿಗೆ ಅತ್ಯಂತ ಶಾಂತಿಯುತ ಮತ್ತು ಹಿತಕರವಾದ ವಾತಾವರಣವನ್ನು ಒದಗಿಸಿದ್ದರು. ತನ್ನ ಏಳಿಗೆಗೆ ನೆರವಾದ ಯಾರನ್ನೂ ಅವರು ಮರೆಯಲಿಲ್ಲ. ಯಾವಾಗಲೂ ತಮ್ಮ ವೃತ್ತಿಜೀವನದ ಮೊದಲ ದಿನದಲ್ಲಿದ್ದಂತೆಯೇ ಇದ್ದರು. ಸದಾ ಶಾಂತ ಮನಸ್ಸು ಮತ್ತು ಮುಗ್ಧ ನಗು… ಇದು ಅವರ ವ್ಯಕ್ತಿತ್ವವನ್ನು ವಿವರಿಸುವ ಪದಗಳು. ಅವರಿಗೆ ಗೊತ್ತಿರುವವರು ಮತ್ತು ಅವರೊಂದಿಗೆ ಕೆಲಸ ಮಾಡಿರುವವರು ಅವರು ಖಂಡಿತವಾಗಿಯೂ ಸಮಾಜಕ್ಕೆ ಸಂತೋಷವನ್ನು ಮಾತ್ರ ನೀಡುವ ಅಪರೂಪದ ಮನುಷ್ಯ ಎಂಬುದನ್ನು ಒಪ್ಪುತ್ತಾರೆ… ತಮಗೇ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೂ ಕೋವಿಡ್ ಸಾಂಕ್ರಾಮಿಕಕ್ಕೆ ಹೆದರದೆ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಅವರು ಮುಂದುವರೆಸಿದರು… ಅವರ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿ ವೈದ್ಯರೂ ಸಹ ಅವರು ಚಿಕಿತ್ಸೆ ನೀಡುವುದರಿಂದ ಹಿಂದೆ ಸರಿಯುವಂತೆ ಮಾಡಲಾಗಲಿಲ್ಲ.
ಕೆಲವೊಮ್ಮೆ ತುರ್ತು ಸ್ಥಿತಿಯಲ್ಲಿ ತನ್ನ ರೋಗಿಗಳನ್ನು ನೋಡಲು ಮಾಸ್ಕ್ ಇಲ್ಲದೇ ಓಡಿಹೋಗುತ್ತಿದ್ದರು… ಕೊರೊನಾ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ತನ್ನ ಸಿಬ್ಬಂದಿಗೆ ಪೂರ್ಣ ವೇತನವನ್ನು ನೀಡಲು ಪ್ರಯತ್ನಿಸಿದರು. ಈ ಸಂಕಷ್ಟದಲ್ಲಿ ನಾವು ಆ ಕುಟುಂಬಗಳಿಗೆ ತೊಂದರೆ ಕೊಡಬಾರದು ಎಂದು ನಮಗೆ ಹೇಳಿದರು. ಸರ್ಕಾರದ ನಿಯಮಗಳಂತೆ ನಮ್ಮ ಆಸ್ಪತ್ರೆಯ ಕಟ್ಟಡವೊಂದನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಯಿತು… ಹಾಗೆ ನೊಡಿದರೆ, ಜಿಲ್ಲೆಯಲ್ಲಿ ಕೋವಿಡ್ ಘಟಕವನ್ನು ಸ್ಥಾಪಿಸಲು ಒಪ್ಪಿಕೊಂಡ ಮೊದಲ ಆಸ್ಪತ್ರೆ ನಮ್ಮದು.

ದುರದೃಷ್ಟವಶಾತ್ ನಮ್ಮ ಕುಟುಂಬದ ಎಲ್ಲರಿಗೂ -ಅಪ್ಪ, ಅಮ್ಮ, ಅಣ್ಣ ಮತ್ತು ಅತ್ತಿಗೆ- ಕೋವಿಡ್-19 ವೈರಸ್‌ ಸೋಂಕು ತಗುಲಿತು. ನನ್ನ ಅಪ್ಪ ಮತ್ತು ಅಮ್ಮ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾದರು. ಅಪ್ಪನ ಎದೆಯ ಸಿಟಿ ಸ್ಕ್ಯಾನ್ ಶ್ವಾಸಕೋಶದ ಊತ ಮತ್ತು ಕೋವಿಡ್ ನ್ಯುಮೋನಿಯಾವನ್ನು ತೋರಿಸಿತು. ಅವರಿಗೆ ಹಠಾತ್ತನೆ ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅವರನ್ನು ಐಸಿಯುಗೆ ವರ್ಗಾಯಿಸಿ ಎನ್‌ಐವಿ (Non Invasive Ventilation) ಯಲ್ಲಿಟ್ಟು ಡಯಾಲಿಸಿಸ್‌ ಪ್ರಾರಂಭಿಸಲಾಯಿತು. ಅವರು ಜೀವಕ್ಕಾಗಿ ಹೋರಾಡುತ್ತಿದ್ದ ಸ್ಥಿತಿಯಲ್ಲಿ ನಾನು ಅವರನ್ನು ನೋಡಿದೆ, ನೀನು ಸದ್ಯದಲ್ಲೇ ಗುಣಮುಖನಾಗುವೆ ಎಂದು ಅವರಿಗೆ ಆತ್ಮವಿಶ್ವಾಸ ಮತ್ತು ಭರವಸೆ ತುಂಬಿದೆ. ಆದರೆ ವೈರಾಣು ಹೃದಯದ ಉರಿಯೂತದ ಕಾರಣದಿಂದಾಗಿ ರಕ್ತ ಸಂಚಾರದಲ್ಲಿ ತೀವ್ರ ಕುಸಿತ ಕಂಡುಬಂದಾಗ ಮತ್ತು ಬಹು ಅಂಗಾಂಗ ವೈಫಲ್ಯ ಕುರುಹುಗಳು ಕಾಣಿಸಿದಾಗ ನಾನು ಒಳಗೊಳಗೇ ಭರವಸೆ ಕಳೆದುಕೊಳ್ಳತೊಡಗಿದೆ. ಎರಡು ದಿನಗಳ ನಂತರ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಗತ್ಯವಾಯಿತು.

ನಾನು ಎಂದಿಗೂ ದೇವರನ್ನು ನಂಬಿದವಳಲ್ಲ. ಆದರೆ ಕರ್ಮದಲ್ಲಿ ನಂಬಿಕೆ ಇಟ್ಟವಳು. ಆದರೆ ಈಗ ಪ್ರತಿದಿನ ದೇವಸ್ಥಾನಗಳಿಗೆ ಓಡಾಡಿದೆ. ಹಲವಾರು ಹರಕೆಗಳನ್ನು ಹೊತ್ತುಕೊಂಡೆ. ಜಿಲ್ಲೆಯ ಪ್ರತಿಯೊಬ್ಬರೂ ಅವರಿಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು, ಅವರ ಚೇತರಿಕೆಗಾಗಿ ಹೋಮ ಹವನಗಳನ್ನು ಮಾಡಿದರು. ಎರಡು ದಿನಗಳ ನಂತರ ಅಪ್ಪ ಅದ್ಭುತ ಚೇತರಿಕೆ ಕಂಡರು… ಎದೆ ಸರಾಗವಾಗಿತ್ತು. ರಕ್ತ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿತ್ತು ಮತ್ತು ಡಯಾಲಿಸಿಸ್ ಅಗತ್ಯವನ್ನು ಹೊರತುಪಡಿಸಿ ಅವರು ಬಹು ಅಂಗಾಂಗ ವೈಫಲ್ಯ ಕುರುಹು (MODS) ಗಳಿಂದ ಬಹುತೇಕ ಚೇತರಿಸಿಕೊಂಡರು. ಒಂದೆರಡು ದಿನಗಳಲ್ಲಿ ವಾರ್ಡ್‌ಗೆ ಸ್ಥಳಾಂತರಗೊಳ್ಳುತ್ತಿದ್ದರು… ಅವರು ಚೇತರಿಸಿಕೊಂಡರೆಂಬ ವಿಷಯವನ್ನು ಕೇಳಿದ ಆ ಕ್ಷಣವೇ ನಮ್ಮ ಜೀವನದಲ್ಲಿ ಅತ್ಯಂತ ಸಂತೋಷದ ಕ್ಷಣವಾಗಿತ್ತು…. ಪ್ರತಿಯೊಬ್ಬರೂ ಅವರ ಒಳ್ಳೆಯ ಕೆಲಸಗಳು ಅವರನ್ನು ಉಳಿಸಿದವು ಎಂದರು. ಎಲ್ಲರ ಪ್ರಾರ್ಥನೆಗಳು ಫಲಕೊಟ್ಟಿದ್ದವು… ನಾನು ಅವರೊಂದಿಗೆ ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತಿದ್ದೆ, ವೈದ್ಯರು ನನ್ನ ಜೀವವನ್ನು ಉಳಿಸಿದರು ಎಂದು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಒಂದೆರಡು ದಿನಗಳಲ್ಲಿ ವಾರ್ಡ್‌ಗೆ ಸ್ಥಳಾಂತರಗೊಳ್ಳುವುದಾಗಿ ಹೇಳಿದರು. ಅಷ್ಟೇ ಅವರಿಗೆ ಗೊತ್ತಿದ್ದು…!!!

ಒಂದು ಸಂಜೆ ಅವರು ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡರು. ಎಂ ಆರ್ ಐ ಮೆದುಳಿನ ಮೇಲ್ಮೈ ಮತ್ತು ತಲೆಬುರುಡೆಯ ನಡುವೆ ರಕ್ತ ಹೆಪ್ಪುಗಟ್ಟಿರುವುದನ್ನು ಮತ್ತು ಮೆದುಳಿನಲ್ಲಿ ರಕ್ತಸ್ರಾವವಾಗಿರುವುದನ್ನು ತೋರಿಸಿತು, ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗದ ಸ್ಥಿತಿಗೆ ಅದು ತಲುಪಿತ್ತು. ಇದು ಬಹುಶಃ ಕಳೆದ ಹತ್ತು ದಿನಗಳಿಂದ ಅವರು ಅನಿವಾರ್ಯವಾಗಿ ಪಡೆದುಕೊಳ್ಳುತ್ತಿದ್ದ ಔಷಧಿಗಳ ದುಷ್ಪರಿಣಾಮವಿರಬಹುದು…. ಅವರು ಮತ್ತೊಂದು ದಿನ ವೆಂಟಿಲೇಟರ್ ಬೆಂಬಲದಲ್ಲಿದ್ದರು ಅಷ್ಟೇ…. ಈಗ ಅವರು ನಮ್ಮ ಹೃದಯದಲ್ಲಿದ್ದಾರೆ ಮತ್ತು ಅಲ್ಲಿಯೇ ಶಾಶ್ವತವಾಗಿರುತ್ತಾರೆ…!!! ಅಪ್ಪಾ, ನಿನಗೆ ಕೊನೆಯಿಲ್ಲ…ನೀನು ಸದಾ ಅಮರ…
ಎರಡು ಅಲಗಿನ ಕತ್ತಿಯ ಮೇಲಿನ ನಡಿಗೆ… ಎಲ್ಲವೂ ಚೆನ್ನಾಗಿದ್ದಾಗ ನಾವೆಷ್ಟು ಸಂತೋಷವಾಗಿರುತ್ತೇವೆ. ಆದರೆ ಅದು ಹಾಳಾಗಲು ಹೆಚ್ಚು ಕಾಲ ಬೇಕಾಗುವುದಿಲ್ಲ…ಇದಂತೂ ತೀರಾ ಅನ್ಯಾಯ…ಅವರು ನನ್ನ ಅಪ್ಪ ಎಂದು ನಾನು ಇದನ್ನು ಹೇಳುತ್ತಿಲ್ಲ. ಅವರ ವ್ಯಕ್ತಿತ್ವವು ಸಮಾಜಕ್ಕೆ ಅನಿವಾರ್ಯವಾಗಿತ್ತು… ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಕೆಲಸದಿಂದ ಮತ್ತು ಕೋವಿಡ್ ಪರಿಹಾರ ನಿಧಿಗೆ ಅವರು ನೀಡಿದ ಭಾರೀ ಕೊಡುಗೆಯಿಂದ ಮತ್ತು ಹಲವಾರು ಕೋವಿಡ್ ರೋಗಿಗಳಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಈ ನಿರ್ಭೀತ ಮನುಷ್ಯನಿಗೆ ಹೀಗಾಗಬಾರದಿತ್ತು… ಅಪ್ಪಾ.. ನಿನ್ನ 64 ವರ್ಷಗಳ ಪ್ರಯಾಣದಲ್ಲಿ ಅನೇಕರ ಜೀವನದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣನಾಗಿದ್ದೀಯಾ… ಇದು ಸಮಾಜದಲ್ಲಿ ಮತ್ತು ಅವರ ಜೀವಿತಾವಧಿಯಲ್ಲಿ ನೆನಪಿನಲ್ಲಿ ಉಳಿಯುತ್ತದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಾಜಕ್ಕೆ ನೀನು ನೀಡಿದ ಕೊಡುಗೆ ಮೆಚ್ಚುವಂಥದ್ದು… ಶೂನ್ಯದಿಂದ ಸಾಮ್ರಾಜ್ಯವನ್ನು ಕಟ್ಟಿದ ಧೈರ್ಯವಂತ ನೀನು…. ನೀನೊಬ್ಬ ಸ್ಫೂರ್ತಿದಾಯಕ ತಂದೆ… ನಿನ್ನ ಬಗ್ಗೆ ಹೇಳುವುದು ಬೇಕಾದಷ್ಟಿದೆ. ಮುಂದಿನ ದಿನಗಳಲ್ಲಿ ನಾನು ಅದೆಲ್ಲವನ್ನೂ ಬರೆಯುತ್ತೇನೆ. ಸಮಾಜದಲ್ಲಿ ನಿನ್ನ ಒಳ್ಳೆಯ ಕೆಲಸವನ್ನು ಮುಂದುವರಿಸಲು ಮತ್ತು ಎಂದೆಂದಿಗೂ ಮುಗಿಯದ ನಿನ್ನ ಕೆಲಸಗಳ ಪಟ್ಟಿಯನ್ನು ಪೂರೈಸಲು ನಮಗೆ ಶಕ್ತಿ ಕೊಡು… ಆಶೀರ್ವಾದ ಮಾಡು… ನಾನು ನಿನ್ನ ಮಗಳು ಎಂದು ಹೆಮ್ಮೆಪಡುತ್ತೇನೆ … ಅಪ್ಪಾ… ಐ ಲವ್ ಯೂ…

ಕನ್ನಡ ಅನುವಾದ: ಅಶೋಕ್ ಬಸವನಹಳ್ಳಿ
ಮೂಲ ಬರಹ : ರಚನಾ ರಾಜೀವ್

LEAVE A REPLY

Please enter your comment!
Please enter your name here