ಚುನಾವಣೆಯಿಂದ ದೂರ ಉಳಿದ ಹಾಸನದ 22 ಗ್ರಾಪಂಚಾಯಿತಿಗಳ್ಯಾವುದು ಗೊತ್ತಾ ?

0

ಹಾಸನ: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಸೋಮವಾರ ಅಧಿಸೂಚನೆ ಹೊರಡಿಸಿದ್ದು ಜಿಲ್ಲೆಯ 267 ಗ್ರಾಪಂಗಳ ಪೈಕಿ 245ಕ್ಕೆ ಚುನಾವಣೆ ನಡೆಯಲಿದೆ.

5 ವರ್ಷ ಆಡಳಿತಾವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 12 ಪಂಚಾಯಿತಿ ಹಾಗೂ ಹಾಸನ ಸುತ್ತಲಿನ 10 ಗ್ರಾಪಂಗಳು ನಗರಸಭೆಗೆ ಸೇರ್ಪಡೆಯಾಗಿರುವ ಕಾರಣ ಇಲ್ಲಿ ಚುನಾವಣೆ ನಡೆಯುತ್ತಿಲ್ಲ.

ಮೊದಲ ಹಂತದ ಮತದಾನ ನಡೆಯುವ ಡಿ. 22 ರಂದು ಹಾಸನ ತಾಲೂಕಿನ 26, ಅರಕಲಗೂಡು 35, ಚನ್ನರಾಯಪಟ್ಟಣ 40, ಸಕಲೇಶಪುರದ 24 ಗ್ರಾಪಂಗೆ ಮತ್ತು ಡಿ. 27ರ ಎರಡನೇ ಹಂತದಲ್ಲಿ ಅರಸೀಕೆರೆಯ 43, ಬೇಲೂರು 37, ಆಲೂರು 14 ಹಾಗೂ ಹೊಳೆನರಸೀಪುರ ತಾಲೂಕಿನ 26 ಗ್ರಾಪಂಗೆ ಚುನಾವಣೆ ನಿಗದಿಯಾಗಿದೆ. ಜಿಲ್ಲಾದ್ಯಂತ 10,70545 ಮತದಾರರಿದ್ದಾರೆ.

ಐದು ವರ್ಷ ಪೂರ್ಣಗೊಳ್ಳದ ಹಾಸನ ತಾಲೂಕಿನ ಅಂಬುಗ, ಅಂಕಪುರ, ಹನುಮಂತಪುರ, ಚನ್ನಂಗಿಹಳ್ಳಿ, ಕಟ್ಟಾಯ, ಸಕಲೇಶಪುರ ತಾಲೂಕಿನ ವಣಗೂರು, ಉಚ್ಚಂಗಿ, ಅರಸೀಕೆರೆಯ ನೇರ್ಲಿಗೆ, ಬಾಣಾವರ, ಆಲೂರು ತಾಲೂಕಿನ ಹಂಚೂರು, ಅರಕಲಗೂಡಿನ ಕೊಣನೂರು ಹಾಗೂ ಚನ್ನರಾಯಪಟ್ಟಣದ ಶ್ರವಣಬೆಳಗೊಳ ಗ್ರಾಪಂ ಚುನಾವಣೆ ನಡೆಯುತ್ತಿಲ್ಲ.

ಹಾಸನ ಸುತ್ತಲಿನ 10 ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರ್ಪಡೆಗೊಳಿಸಿ ಸಚಿವ ಸಂಪುಟ ಅನುಮೋದನೆ ದೊರೆತಿರುವ ಕಾರಣದಿಂದ ಜಿಲ್ಲಾ ಕೇಂದ್ರ ಸಮೀಪದ ಬಿ. ಕಾಟಿಹಳ್ಳಿ, ಬೂವನಹಳ್ಳಿ, ಹರಳಹಳ್ಳಿ, ಕಂದಲಿ, ಹಂದಿನಕೆರೆ, ಸತ್ಯವಂಗಲ, ತಟ್ಟೆಕೆರೆ, ತೇಜೂರು, ಹೂವಿನಹಳ್ಳಿ ಕಾವಲು ಹಾಗೂ ದೊಡ್ಡಗೇಣಿಗೆರೆ ಗ್ರಾಪಂ ಚುನಾವಣೆಯಿಂದ ದೂರ ಉಳಿದಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here