ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿ ಫುಡ್‌ಸ್ಟ್ರೀಟ್

0

ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿ ಮಹಾರಾಜ ಉದ್ಯಾನದ ಕಾಂಪೌಂಡ್‌ಗೆ ಹೊಂದಿಕೊಂಡತೆ ಫುಡ್ ಸ್ಟ್ರೀಟ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಸಾಲಗಾಮೆ ರಸ್ತೆಯಲ್ಲಿ ಫುಡ್‌ಸ್ಟ್ರೀಟ್ ನಿರ್ಮಾಣ ನಡೆಯುತ್ತಿದ್ದು, ಕಾಂಪೌಡ್‌ ನಿರ್ಮಾಣ, ನೆಲ ಹಾಸಿಗೆ ಕಾಂಕ್ರಿಟ್‌ ಹಾಕಲಾಗಿದೆ.

50 ಲಕ್ಷ ರೂ. ಶಾಸಕರ ಅನುದಾನದಲ್ಲಿ ಮೊದಲ ಹಂತದ ಕಾಮಗಾರಿ,ಸಾಲಗಾಮೆ ರಸ್ತೆಯಲ್ಲಿ ಫುಡ್‌ ಸ್ಟ್ರೀಟ್‌ ನಿರ್ಮಾಣ

ಹಾಸನ ಹೆಚ್ಚು ಜನ ಸಂದಣಿಯಿಂದ ಕೂಡಿರುವ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ವೃತ್ತದಲ್ಲಿ ಸುಸಜ್ಜಿತ ಫುಡ್ ಸ್ಟ್ರೀಟ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಮುಗಿದು ವ್ಯಾಪಾರಸ್ಥರಿಗೆ ಹಸ್ತಾಂತರಗೊಳ್ಳಲಿದೆ.

ಮಹಾರಾಜ ಉದ್ಯಾನಕ್ಕೆ ಹೊಂದಿಕೊಂಡಂತೆ ಕಾಂಪೌಂಡ್ ನಿರ್ಮಾಣವಾಗಲಿದೆ. ಕಾಂಪೌಡ್‌ಗೆ ಹೊಂದಿಕೊಂಡಂತೆ ಇಂತಿಷ್ಟು ಪ್ರದೇಶ ಗುರುತು ಮಾಡಿ ಶೆಲ್ಟರ್ ನಿರ್ಮಿಸಿ ಅದರ ಮೇಲೆ ಛಾವಣಿ ಹಾಕಲಾಗುತ್ತದೆ. ಇದರಿಂದ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಸಿಗಲಿದೆ. ನೆಲಹಾಸಿನಲ್ಲಿ ಕಾಂಕ್ರೀಟ್‌ ಹಾಕಿ, ಟೈಲ್ಸ್ ಅಳವಡಿಸಲಾಗುತ್ತದೆ. ಪ್ರತಿ ಶೆಲ್ಟರ್ ಮಧ್ಯೆ ಪ್ರತ್ಯೇಕಿಸುವ ಯಾವುದೇ ಗೋಡೆ ಅಥವಾ ತಡೆ ಇರುವುದಿಲ್ಲ. ಇಲ್ಲಿ ಈ ಮೊದಲು ವ್ಯಾಪಾರ ಮಾಡುತ್ತಿದ್ದ ಎಲ್ಲರಿಗೂ ಸಮಾಜವಾಗಿ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ.

ಶಾಸಕ ಪ್ರೀತಂ ಜೆ.ಗೌಡ ಅವರ 50 ಲಕ್ಷ ರೂ. ಶಾಸಕರ ಅನುದಾನದಲ್ಲಿ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಲೋಕೋಪಯೋಗಿ ಇಲಾಖೆ ಫುಡ್‌ ಸ್ಟ್ರೀಟ್‌ ನಿರ್ಮಾಣದ ಹೊಣೆ ಹೊತ್ತಿದೆ. ನಗರಸಭೆ ಒಳ ಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈಗಾಗಲೇ ಒಳ ಚರಂಡಿ ಹಾಗೂ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ನೆಲಹಾಸಿಗೆ ಕಾಂಕ್ರಿಟ್‌ ಹಾಕುವ ಕಾರ್ಯ ಪ್ರಗತಿಯಲ್ಲಿದೆ.

ಒಳ ಚರಂಡಿ ನಿರ್ಮಾಣ ಮಾಡಿದ ಬಳಿಕ ಫುಟ್‌ಪಾತ್ ನಿರ್ಮಾಣ ಜೊತೆಗೆ ರಸ್ತೆಗೆ ತುಸು ಎತ್ತರದಲ್ಲಿ ಕಾಂಕ್ರೀಟ್ ಹಾಕಿ ಫುಡ್ ಸ್ಟ್ರೀಟ್ ನಿರ್ಮಾಣ ಮಾಡುತ್ತಿರುವುದರಿಂದ ಹಿಂದಿನ ಸಮಸ್ಯೆ ತಪ್ಪಲಿವೆ. ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಯಾವುದೇ ತಡೆಯಾಗುವುದಿಲ್ಲ. ಗ್ರಾಹಕರು ನಿಂತು ಆಹಾರ ಸೇವಿಸಲು ಫುಡ್ ಸ್ಟ್ರೀಟ್ ನಡುವೆಯೇ ಅಂತರ ಇರಲಿದ್ದು, ಯಾರೂ ರಸ್ತೆ ಕಡೆ ನಿಲ್ಲುವ ಸನ್ನಿವೇಶ ಬರುವುದಿಲ್ಲ. ಫುಡ್‌ಸ್ಟ್ರೀಟ್ ಎದುರು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಒಳ ಚರಂಡಿ ನಿರ್ಮಾಣವಾಗಿರುವುದರಿಂದ ರಸ್ತೆಯಲ್ಲಿ ಬಿದ್ದ ಮಳೆ ನೀರು ಹಾಗೂ ತ್ಯಾಜ್ಯ ನೀರೂ ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗಲಿದೆ.

ಅಮೃತ್ ಯೋಜನೆಯಿಂದ ಶುದ್ಧ ಕುಡಿಯುವ ನೀರು ಸಹ ಪೂರೈಕೆ ಮಾಡಲಾಗುತ್ತಿದೆ. ಇದಕ್ಕಾಗಿ ಎರಡು ಶೆಲ್ಟರ್ ಗೆ ಒಂದರಂತೆ ನೀರಿನ ಟ್ಯಾಪ್ ಅಳವಡಿಸಲಾಗುವುದು. ಈ ಎಲ್ಲಾ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ.
– ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ

ಹಿಂದೆ ಇದ್ದ ಸಾಕಷ್ಟು ಸಮಸ್ಯೆಗಳನ್ನು ಮನಗಂಡು ಸುಸಜ್ಜಿತ ಫುಡ್‌ ಸ್ಟ್ರೀಟ್‌ ನಿರ್ಮಿಲಾಗುತ್ತಿದೆ. ಇದರಿಂದ ನಗರದ ಹೃದಯ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿದೆ. ಇಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಸಂಜೆ ವೇಳೆ ಬೇಕಾದ ಆಹಾರದ ರುಚಿ ಸವಿಯಲು ಬರುವವರಿಗೆ ಸ್ವಚ್ಛ ವಾತಾವರಣ ನಿರ್ಮಾಣವಾಗಬೇಕು ಎಂಬುದು ನನ್ನ ಉದ್ದೇಶ.
– ಪ್ರೀತಂಜೆ.ಗೌಡ, ಶಾಸಕ

ಅನೈರ್ಮಲ್ಯ ತಾಣವಾಗಿತ್ತು
ಇದೇ ಸ್ಥಳದಲ್ಲಿ ಕಳೆದ ಎರಡು-ಮೂರು ದಶಕಗಳಿಂದ ಆಟೋ, ತಳ್ಳುವ ಗಾಡಿಗಳಲ್ಲಿ ಹತ್ತಾರು ಜನ ಪಾನಿಪುರಿ, ಗೋಬಿ, ಎಗ್ ರೈಸ್, ಖುಷ್ಕ, ಕಬಾಬ್, ದೋಸೆ, ಇಡ್ಲಿ ಸಾಂಬಾರ್, ಅನ್ನ ಸಾಂಬಾರ್, ಪವಾವ್, ಐಸ್‌ಕ್ರೀಮ್‌ ಸೇರಿದಂತೆ ವಿವಿಧ ರೀತಿಯ ಆಹಾರ ಪದಾರ್ಥಗಳ ಮಾರಾಟ ಮಾಡುತ್ತಿದ್ದರು. ವ್ಯಾಪಾರ ಮುಗಿದ ನಂತರ ತ್ಯಾಜ್ಯ ಹಾಗೂ ತೊಳೆದ ಗಲೀಜು ನೀರನ್ನು ರಸ್ತೆಗೆ ಸುರಿಯಲಾಗುತ್ತಿತ್ತು. ಇದರಿಂದ ರಸ್ತೆ ಯಾವಾಗಲೂ ಅನೈರ್ಮಲ್ಯದ ತಾಣವಾಗಿತ್ತು. ನಗರಸಭೆ ಅಧಿಕಾರಿಗಳು ಅನೇಕರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದರು. ಅಂಗಡಿಗಳ ಮುಂದೆ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದರಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು. ಅಪಘಾತಗಳು ಸಹ ಸಂಭವಿಸಿದ್ದವು.

LEAVE A REPLY

Please enter your comment!
Please enter your name here