ಹಾಸನ: ಜಿಲ್ಲೆಯಲ್ಲಿ ಕಾಡಾನೆ ಗಳ ಉಪಟಳ ಮಿತಿಮೀರಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡು ಬಾಗಿಲನ್ನು ಒಡೆದು ಅಕ್ಕಿ ತಿಂದು ಹೋಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ, ಅರೇಹಳ್ಳಿ ಹೋಬಳಿ, ಅನುಘಟ್ಟ ಗ್ರಾಮದಲ್ಲಿ ನಡೆದಿದೆ.
ಇಂದು ಮುಂಜಾನೆ 4.15ರ ಸಮಯದಲ್ಲಿ ಗ್ರಾಮಕ್ಕೆ ಬಂದಿರುವ ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆ, ಮುಂದಿನ ಹಾಗೂ
ಹಿಂದಿನ ಬಾಗಿಲನ್ನು ಹೊಡೆದು 13 ಚೀಲ ಅಕ್ಕಿ (Rice) ಎಳೆದಾಡಿ ತಿಂದು ಹೋಗಿದೆ. ಸೋಮವಾರವಷ್ಟೇ ಸೊಸೈಟಿಗೆ ಅಕ್ಕಿ ಲೋಡ್ ಬಂದಿತ್ತು. ಇಂದು ಬೆಳಗ್ಗೆ ಸೊಸೈಟಿ ಸೆಕ್ರೆಟರಿ ಸತೀಶ್ ಎಂಬವರು ಅಕ್ಕಿ ವಿತರಣೆಗೆ ಹೋದ ವೇಳೆ ಸೊಸೈಟಿಯ ಬಾಗಿಲುಗಳು ಮುರಿದಿದ್ದವು. ಈ ವೇಳೆ ಗಾಬರಿಗೊಂಡು ಸಿಸಿಟಿವಿ ಪರಿಶೀಲಿಸಿದಾಗ ಕಾಡಾನೆ ದಾಂಧಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಕಳೆದ ಹತ್ತು ತಿಂಗಳ ಹಿಂದೆ 2022ರ ಏಪ್ರಿಲ್ 22ರಂದು ಇದೇ ಕಾಡಾನೆ ಇದೇ ಸೊಸೈಟಿ ಬಾಗಿಲು ಮುರಿದು ನಾಲ್ಕು ಕ್ವಿಂಟಾಲ್ ಅಕ್ಕಿ ತಿಂದು ಹೋಗಿತ್ತು. ಇಂದು ಮುಂಜಾನೆ ಮತ್ತೆ
ಅದೇ ಅನುಘಟ್ಟ ಗ್ರಾಮದ ಸೊಸೈಟಿಗೆ ಬಂದಿರುವ ಕಾಡಾನೆ ಅಕ್ಕಿ ತಿಂದು ಹೋಗಿದೆ. ಕಾಡಾನೆ ಬಾಗಿಲು ಮುರಿದು ಅಕ್ಕಿ ತಿನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದರು. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.