ಕಾಡಾನೆ ದಾಳಿ ಘಟನೆ…ಗಾಯಾಳು
ಹಳೆಕೆರೆ ಚಂದ್ರು ಆರೋಗ್ಯ ವಿಚಾರಿಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ..

0

ಕಾಡಾನೆ ದಾಳಿ ಘಟನೆ…
ಹಳೆಕೆರೆ ಚಂದ್ರು ಆರೋಗ್ಯ ವಿಚಾರಿಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ..

ಹಾಸನ: ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕಲೇಶಪುರ ತಾಲೂಕು ಹಳೇಕೆರೆ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ಅವರ ಆರೋಗ್ಯವನ್ನು ಶಾಸಕ ಎಚ್.ಕೆ. ಕುಮಾರಸ್ವಾಮಿ ವಿಚಾರಿಸಿದರು.
ನಗರದ ಖಾಸಗಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಚಂದ್ರಶೇಖರ್ ಅವರ ಯೋಗಕ್ಷೇಮ ವಿಚಾರಿಸಿದ ಶಾಸಕರು ನಂತರ ವೈದ್ಯರಿಂದ ಆರೋಗ್ಯದ ಕುರಿತು ಮಾಹಿತಿ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕಲೇಶಪುರ ತಾಲೂಕು ಹಳೇಕೆರೆ ಗ್ರಾಮದಲ್ಲಿ ಕಳೆದ ೧೫ ದಿನಗಳ ಹಿಂದೆ ಶಿವಣ್ಣ ಎಂಬುವರ ಮೇಲೆ ಆನೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದೀಗ ಅದೇ ಗ್ರಾಮದ ದಲಿತ ಮುಖಂಡ ಹಾಗೂ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ಅವರ ಮೇಲೆ ಆನೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಅವರ ಆರೋಗ್ಯ ಕುರಿತು ವೈದ್ಯರೊಂದಿಗೆ ಮಾಹಿತಿ ಪಡೆದಿದ್ದು ಆಸ್ಪತ್ರೆ ಖರ್ಚು ವೆಚ್ಚ ಎಷ್ಟೇ ಬಂದರೂ ಸರ್ಕಾರರಿಂದಲೇ ಚಿಕಿತ್ಸಾ ವೆಚ್ಚಭರಿಸಲು ಕ್ರಮ ವಹಿಸಲಾಗುವುದು ಎಂದರು.
ಮೂರು ಪುಂಡಾನೆ ಸೆರೆಗೆ ಪ್ರಸ್ತಾವನೆ:
ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ಕಾಡಾನೆ-ಮಾನವ ಸಂಘರ್ಷ ಮಿತಿ ಮೀರಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಇತ್ತೀಚೆಗೆ ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲಾ ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮಾನವರ ಮೇಲೆ ದಾಳಿ ನಡೆಸುತ್ತಿರುವ ಮೂರು ಪುಂಡಾನೆಗಳನ್ನು ಸೆರೆಹಿಡಿಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಆನೆ ಸೆರೆಗೆ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.
ಇನ್ನೆರಡು ದಿನಗಳಲ್ಲಿ ಸಭೆ:
ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಬೇಸತ್ತಿರುವ ಜನರ ಸಹನೆ ಮೀರಿದೆ. ಹಗಲು ವೇಳೆ ನಿರ್ಭೀತಿಯಿಂದ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಇನ್ನೆರಡು ದಿನಗಳಲ್ಲಿ ಕಾರ್ಮಿಕ ಸಂಘಟನೆ ಬೆಳೆಗಾರರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರದ ಗಮನಸೆಳೆಯಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮದ ಕುರಿತು ಚರ್ಚಿಸಲಾಗುವುದು ಎಂದರು.
ಕಳೆದ ನಾಲ್ಕು ದಿನಗಳ ಹಿಂದೆ ತಮ್ಮ ಮಗನೊಂದಿಗೆ ಗದ್ದೆಗೆ ಹೋಗಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಚಂದ್ರಶೇಖರ್ ಅವರ ಮೇಲೆ ಆನೆ ದೀಢೀರ್ ದಾಳಿ ನಡೆಸಿತ್ತು. ಆನೆ ದಾಳಿಯಿಂದಾಗಿ ಚಂದ್ರಶೇಖರ್ ಅವರ ಬೆನ್ನುಮೂಳೆ, ಪಕ್ಕೆಲುಬು ಹಾಗೂ ಎಡ ಭುಜದ ಮೂಳೆ ಮುರಿದು ಹೋಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here