ಹಾಸನ: ಬಾಲ್ಯ ವಿವಾಹಗಳು ನಡೆಯದಂತೆ ಸಂಪೂರ್ಣ ಎಚ್ಚರಿಕೆ ವಹಿಸುವುದರ ಜತೆಗೆ ಪ್ರೋತ್ಸಾಹಿಸುವ ಪೋಷಕರು ಹಾಗೂ ಪ್ರೇರೇಪಿಸುವವರ ವಿರುದ್ಧವೂ ಕಡ್ಡಾಯವಾಗಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ಹೆಚ್ಚಿನ ನಿಗಾವಹಿಸಿ, ಅವರನ್ನು ರಕ್ಷಿಸಬೇಕು, ಕೋವಿಡ್ ಕಾಯಿಲೆಯಿಂದ ತಂದೆ, ತಾಯಿ ಇಬ್ಬರೂ ಮೃತಪಟ್ಟ ಮಕ್ಕಳಿಗೆ 13,500 ಹಾಗೂ ತಂದೆ ಅಥವಾ ತಾಯಿ ಮೃತಪಟ್ಟ ಬಡ ಕುಟುಂಬದ ಮಕ್ಕಳನ್ನು ಗುರುತಿಸಿ ಒಂದು ಸಾವಿರ ರೂಪಾಯಿ ಸಹಾಯ ಧನ ನೀಡಬೇಕು ಎಂದು ಸೂಚಿಸಿದರು.
ಬಾಲಮಂದಿರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೋಂಕಿನ ಯಾವುದೇ ರೀತಿಯ ಲಕ್ಷಣಗಳು ಇಲ್ಲದಿದ್ದರೂ ಕಡ್ಡಾಯವಾಗಿ 15 ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆ ಮಾಡುವಂತೆ ನಿರ್ದೇಶನ ನೀಡಿದರು.
ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ ಹಾಗೂ ಬಾಧಿತ ಕುಟುಂಬಗಳ ಮಕ್ಕಳಿಗೆ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ ಮತ್ತಿತರ ವೆಚ್ಚಗಳಿಗೆ ಮಾಸಿಕ 11000 ಆರ್ಥಿಕ ಸಹಾಯಧನವನ್ನು ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಹೇಳಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟ ಮಕ್ಕಳ ಪ್ರಕರಣಗಳನ್ನು ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಗುರುತಿಸಿ, ಮಕ್ಕಳ ಅಭಯ ನಿಧಿಯಿಂದ ಅಗತ್ಯವಿರುವವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡಬೇಕು ಎಂದು ತಿಳಿಸಿದರು.
18 ವರ್ಷದೊಳಗಿರುವ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ಹಲವಾರು ಪ್ರಕರಣ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕ ದಿಲೀಪ್, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಉಷಾ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಕೋಮಲತಾ ಹಾಜರಿದ್ದರು.