ಹಾಸನ ಫೆ.10 (ಹಾಸನ್_ನ್ಯೂಸ್ !, ಕರ್ನಾಟಕ ಅಂತರ್ಜಲ ಪ್ರಾದಿಕಾರದಲ್ಲಿ ನೋಂದಾಯಿಸದೆ ಹಾಗೆಯೇ ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ರಿಗ್ ಯಂತ್ರಗಳ ವಿರುದ್ದ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆ ಕುರಿತು ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅನುಮತಿ ಪಡೆದೇ ಕೊಳವೆ ಬಾವಿಯನ್ನು ಕೊರೆಯಬೇಕಿದ್ದು ನಿಯಮ ಉಲ್ಲಂಘಿಸಿದವರ ವಿರುದ್ದ ಕ್ರಮ ಜರುಗಿಸಬೇಕು ಎಂದರು.
ಕೈಗಾರಿಕೆ ಉದ್ದೇಶಕ್ಕೆ ಬಳಸುವ ಕೊಳವೆಬಾವಿಯನ್ನು ಕೊರೆಸಲು ಅನುಮತಿ ನೀಡುವ ಮುನ್ನ ಕರ್ನಾಟಕ ಕೈಗಾರಿಕಾ ಪ್ರಾದಿಕಾರ ಮಂಡಳಿ ಅಭಿಪ್ರಾಯ , ಶಿಫಾರಸ್ಸಿನ ಪತ್ರ ವತಿಯಿಂದ ಅನುಮತಿಯನ್ನು ಪಡೆದು ನಂತರ ಕೊರೆಯಲು ಸಮ್ಮತಿ ನೀಡುವುದು ಎಂದು ಹೇಳಿದರು.
ಅರಸೀಕೆರೆ ತಾಲ್ಲೂಕು ಅತಿ ಹೆಚ್ಚಿನ ಅಂತರ್ಜಲ ಬಳಕೆ ಪ್ರದೇಶವಾಗಿದ್ದು ಅಲ್ಲಿ ಕೊಳವೆ ಬಾವಿಯನ್ನು ತೆರೆಯಲು ಅಂತರ್ಜಲ ಪ್ರಾದಿಕಾರದಿಂದ ಅನುಮತಿ ಪಡೆಯಬೇಕು ಹಾಗೂ ಅರಸೀಕೆರೆ ತಾಲ್ಲೂಕಿನ ನಿಯೋಜಿತ ಸಮಿತಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.
ಅಂತರ್ಜಲ ಸಂರಕ್ಷಣೆ, ಅಭಿವೃದ್ದಿ ಮತ್ತು ಸದ್ಬಳಕೆ ಹಾಗೂ ನರ್ವಹಣೆಯನ್ನು ಪ್ರಮುಖ ಉದ್ದೇಶವಾಗಿಟ್ಟುಕೊಂಡು ಕರ್ನಾಟಕ ಅಂತರ್ಜಲ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ ಎಂದರು.
ಮೌಲೀಕರಣದನ್ವಯ ಅತಿಬಳಕೆ, ಕ್ಲಿಷ್ಟಕರ ಮತ್ತು ಸುರಕ್ಷಿತ ಪ್ರದೇಶಗಳಲ್ಲಿ ಅಂತರ್ಜಲ ತೆಗೆಯಲು ಅರ್ಜಿಗಳನ್ನು ಪರಿಶೀಲಿಸಿ ಅಂತರ್ಜಲ ನೀರಾಕ್ಷೇಪಣಾ ನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಹಿರಿಯ ಭೂ ವಿಜ್ಞಾನಿ ಸದಸ್ಯ ಕಾರ್ಯದರ್ಶಿ ಸುಧಾ ಅವರು ಮಾತನಾಡಿ ಈಗಾಗಲೇ ಜಿಲ್ಲಾ ಅಂತರ್ಜಲ ಪ್ರಾಧಿಕಾರ ಅಸ್ತಿತ್ವದಲ್ಲಿರುವುದರಿಂದ ಕೈಗಾರಿಕ ಮೂಲ ಸೌಕರ್ಯ ಅಭಿವೃದ್ದಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಪ್ರಸ್ತುತ ಅಂತರ್ಜಲ ಬಳಕೆದಾರರು ನೀರಾಕ್ಷೇಪಣ ಪತ್ರವನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ಪಡೆಯಬೇಕು ಎಂದರು.
ಜಿಲ್ಲಾ ವ್ಯಾಪ್ತಿಗೆ ಸಂಬಂದ ಪಟ್ಟ ಎಲ್ಲಾ ಕೈಗಾರಿಕ ಮೂಲ ಸೌಕರ್ಯ ಅಭಿವೃದ್ದಿ, ಗಣಿಗಾರಿಕೆ ಮನರಂಜನೆ ಯೋಜನೆಗಳಲ್ಲಿನ ಪ್ರಸ್ತುತ ಅಂತರ್ಜಲ ಬಳಕೆದಾರರು https://kgwaskala.karnataka.gov.in ಅಥವಾ https://antharajla.karnataka.govt.in ವೆಬ್ ಸೈಟ್‍ನ ಆನ್ ಲೈನ್ ಸೇವೆಗಳಡಿಯಲ್ಲಿ ಏಪ್ರಿಲ್ 4 ರೊಳಗೆ ಅಂತರ್ಜಲವನ್ನು ಬಳಸಲು ನಿರಾಕ್ಷೇಪಣಾ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಸಭೆಯಲ್ಲಿ ಡಿ.ವೈ.ಎಸ್.ಪಿ ಪುಟ್ಟಸ್ವಾಮಿ ಗೌಡ, ಉಪ ಪರಿಸರ ಅಧಿಕಾರಿ ರವಿಚಂದ್ರನ್, ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ಮತ್ತಿತರರು ಹಾಜರಿದ್ದರು.