ಮಾ.11 (ಹಾಸನ್_ನ್ಯೂಸ್ !, ಯುವ ಪೀಳಿಗೆ ಶರಣರ ವಚನಗಳನ್ನು ಅಧ್ಯಯನ ಮಾಡಲು ಮುಂದಾಗುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ .,
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಕಾಯಕ ಶರಣರಾದ ಮಾದರ ಚೆನ್ನಯ್ಯ,ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಜಯಂತಿಯಲ್ಲಿ ಪುಷ್ಪ ಅರ್ಪಿಸಿ ನಮನ ಸಲ್ಲಿಸಿ ಮಾತನಾಡಿದ ಅವರು ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ಮೂಡಿಸಿದ ಮಹನೀಯರು ಎಂದು ತಿಳಿಸಿದರು.
ದೇಶದಲ್ಲಿ ಹಲವಾರು ಜಾತಿ, ಜನಾಂಗ, ಧರ್ಮದವರನ್ನು ಒಂದುಗೂಡಿಸಿ ಅಖಂಡವಾಗಿ ಸಮಾಜದಲ್ಲಿ ಬೆಳೆಯಲು ತಮ್ಮ ವಚನಗಳ ಮೂಲಕ ಎಲ್ಲೆಡೆ ಸಾರಿದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ. ಸುದರ್ಶನ್ ಅವರು ಮಾತನಾಡಿ ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಶರಣರು ವಚನ ಚಳುವಳಿಯ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಿದರು.
ಶೋಷಣೆಗೊಳಗಾದವರನ್ನು ಒಗ್ಗೂಡಿಸಿ, ಏಣಿ ಶ್ರೇಣಿ ಪದ್ಧತಿ ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರು ಶ್ರಮಿಸಿದ್ದಾರೆ ಎಂದು ಹೇಳಿದರು.
ದಲಿತ ಮುಖಂಡರಾದ ಆರ್. ಪಿ. ಸತೀಶ್ ಮಾತನಾಡಿ ವಚನಕಾರರು ಅಸ್ಪೃಶ್ಯತೆ, ಮೂಡನಂಬಿಕೆಗಳಿಂದ ಜನರನ್ನು ಹೊರತಂದು ಉತ್ತಮ ನಾಗರಿಕರನ್ನಾಗಿ ಮಾಡಲು ಶ್ರಮಿಸಿದರು ಎಂದು ಹೇಳಿದರು.
ತಮ್ಮ ಹಲವಾರು ವಚನಗಳ ಮೂಲಕ ಜನರಲ್ಲಿ ಅಸಮಾನತೆ ತೊಡೆದು ಹಾಕಿ ನಾವೆಲ್ಲಾ ಒಂದೇ ಎಂಬಂಥ ಭಾವನೆ ಮೂಡಿಸಿದರು ಎಂದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಬಿ. ಎ ಜಗದೀಶ್, ತಹಶೀಲ್ದಾರ್ ಶಿವ ಶಂಕರಪ್ಪ, ಹಿರಿಯ ಸ್ವಾತ್ರಂತ್ರ್ಯ ಹೋರಾಟಗಾರರಾದ ಹೆಚ್ ಎಂ. ಶಿವಣ್ಣ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹಾಂತಪ್ಪ ಮತ್ತಿತರರು ಹಾಜರಿದ್ದರು.