ಬೆಂಗಳೂರು: ಈ ವರ್ಷದ ಬಜೆಟ್ನಪಲ್ಲಿ ಘೋಷಣೆ ಮಾಡಲಾಗಿದ್ದ ಹಾಸನ ವಿಶ್ವವಿದ್ಯಾಲಯ ಸ್ಥಾಪನೆಗೆ ಅಡ್ಡಿಯಾಗಿದ್ದ ‘ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇದರಿಂದ ಹಾಸನ ವಿವಿ ಜೊತೆಗೆ ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿವಿಗಳ ಸ್ಥಾಪನೆಗೆ ಹಾದಿ ಸುಗಮವಾಗಿದೆ.
ಈ ಕುರಿತು
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಕಾಯ್ದೆ ತಿದ್ದುಪಡಿಯಿಂದ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಕೂಲವಾಗಿದೆ. ಚಾಮರಾಜನಗರ ವಿವಿಯಲ್ಲಿ 18, ಹಾಸನ ವಿವಿಯಲ್ಲಿ 36, ಹಾವೇರಿ 40, ಬೀದರ್ 140, ಕೊಡಗು 24, ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿಗಳು 71 ಕಾಲೇಜುಗಳನ್ನು ಹೊಂದಿರಲಿವೆ. ವಿವಿಗಳ ಆರಂಭವನ್ನು ಈ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ ತಲಾ 2 ಕೋಟಿ ರೂ.ಗಳಂತೆ ಒಟ್ಟು 14 ಕೋಟಿ ರೂಪಾಯಿ ಒದಗಿಸಲಾಗಿದೆ. ಜಿಲ್ಲೆಗೊಂದು ವಿವಿ ಇರಬೇಕು ಎನ್ನುವುದು ಸರಕಾರದ ತೀರ್ಮಾನವಾಗಿದೆ. ಈ ಮೂಲಕ ಶೈಕ್ಷಣಿಕ ಅಸಮತೋಲನ ನಿವಾರಣೆ ಮಾಡಲಾಗುವುದು. ಜೊತೆಗೆ, ಯುವಜನರಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಸದಾಶಯ ಇದರ ಹಿಂದಿದೆ ಎಂದು ಸಚಿವರು ಹೇಳಿದರು.
ನೂತನ ವಿ.ವಿ.ಗಳ ಸ್ಥಾಪನೆಗೆ ಆರ್ಥಿಕ ಮತ್ತು ಯೋಜನಾ ಇಲಾಖೆಗಳು ಒಪ್ಪಿಗೆ ನೀಡಿವೆ. ಇವು ಕಡಿಮೆ ಸ್ಥಳ, ಕಡಿಮೆ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದೊಂದಿಗೆ ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಅವರು ಹೇಳಿದರು.
ಈ ವರ್ಷದ ಬಜೆಟ್ ನಲ್ಲಿ
ಹಾಸನ ವಿವಿ ಸ್ಥಾಪನೆ ಘೋಷಣೆ ಮಾಡಲಾಗಿತ್ತು. ಈ ಸಂಬಂಧ ಏ.26ರಂದು ಉನ್ನತ ಶಿಕ್ಷಣ ಸಚಿವ ಆಶ್ವಥನಾರಾಯಣ, ಮೈಸೂರು ವಿವಿ ಕುಲಪತಿ ಡಾ. ಹೇಮಂತಕುಮಾರ್, ಹಾಸನ ಶಾಸಕ ಪ್ರೀತಂಗೌಡ ಮತ್ತಿತರರು ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿಯಲ್ಲಿ ಪರಿಶೀಲನೆ ನಡೆಸಿದ್ದರು.
ಜಿಲ್ಲೆಯ ಎರಡು ಕೆರೆಗಳಿಗೆ ನೀರು
25 ಕೋಟಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ: ಕಾರಜೋಳ
ಬೆಂಗಳೂರು: ನಾಗಮಂಗಲ ಶಾಖಾ ನಾಲೆಯ ನೀರನ್ನು ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯ ಕೆಲವು ಕೆರೆಗಳಿಗೆ ಕುಡಿಯುವ ನೀರಿನ ಯೋಜನೆಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಾಗಮಂಗಲ ಶಾಖಾ ನಾಲೆಯ ಸರಪಳಿ 5.100 ಕಿಮೀ ಯಿಂದ ಲಿಫ್ಟ್ ಮೂಲಕ ನೀರನ್ನು ಎತ್ತಿ ನುಗ್ಗೇಹಳ್ಳಿ ಹೋಬಳಿಯ ಸಂತೆ ಶಿವರ ಹಾಗೂ
ಇತರೆ ಎರಡು ಕೆರೆಗಳನ್ನು ಕುಡಿಯುವ ನೀರಿಗಾಗಿ ತುಂಬಿಸಲು ಯೋಜನೆ ರೂಪಿಸಲಾಗಿದ್ದು, 25 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದರು.
ಸಂತೆಶಿವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸಂತೆ ಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳೇ ಆಶ್ರಯವಾಗಿವೆ. ಈ ಕೆರೆಗಳಿಗೆ ಮಳೆಯ ನೀರೇ ಆಧಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ
ಮಳೆಯ ಅನಿಶ್ಚಿತತೆಯಿಂದ ನೀರಿನ ಒಳಹರಿವು ಕಡಿಮೆಯಾಗಿ ಈ ಕೆರೆಗಳು ಬಹಳ ವರ್ಷಗಳಿಂದ ತುಂಬುತ್ತಿಲ್ಲ. ಮಳೆ ಮಾಪನ ಕೇಂದ್ರದ ಮಾಹಿತಿ ಪ್ರಕಾರ ಮಳೆ ಸರಾಸರಿ ಮಟ್ಟಕ್ಕಿಂತ ಕಡಿಮೆ ಇದೆ. ಇದರಿಂದ ಸುತ್ತಮುತ್ತಲ ಪ್ರದೇಶಗಳ ವ್ಯಾಪ್ತಿಯ ಅಂತರ್ಜಲ ಮಟ್ಟವೂ ಕಡಿಮೆಯಾಗಿದೆ.
ಮಳೆಯ ಅಭಾವದಿಂದ ಬಹುತೇಕ ಗ್ರಾಮಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿವೆ. ಈ ಪ್ರದೇಶದಲ್ಲಿ ಬಹಳಷ್ಟು ಕೊಳವೆ ಬಾವಿ ಕೊರೆಯಲಾಗಿದ್ದು, ಕೆಲವೇ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿ ಉಳಿದ ಕೊಳವೆ ಬಾವಿಗಳಲ್ಲಿ ನೀರು ದೊರೆತಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮೇಲ್ಕಂಡ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದಾರೆ.