ಹಾಸನ ನಗರಸಭೆ ; ಪೋಸ್ಟ್ಮಾಟಂ ಬಿಡಿ, ಅಭಿವೃದ್ಧಿಗೆ ಒತ್ತುಕೊಡಿ: ಪ್ರೀತಂ ಪರ ಪ್ರಜ್ವಲ್ ರೇವಣ್ಣ ಬ್ಯಾಟಿಂಗ್

0

ಹಾಸನ: ಹಳೆಯ ವಿಷಯಗಳ ಪೋಸ್ಟ್ಮಾರ್ಟಂ ಬಿಡಿ, ನಿಮ್ಮ ವಾರ್ಡಿಗೆ ಏನು ಕೆಲಸವಾಗಬೇಕು ಅದನ್ನು ಆರೋಗ್ಯಕರ ಚರ್ಚೆ ಮಾಡಿ. ಯೋಜನಾಬದ್ಧವಾಗಿ ಕೆಲಸಮಾಡಿ ಎಂದು ಶಾಸಕ ಪ್ರೀತಂ ಜೆ.ಗೌಡ ನೀತಿಪಾಠ ಬೋಧಿಸಿದರೆ,

ಸದಸ್ಯರು ಸಭಾಂಗಣದ ಒಳಕ್ಕೆ ಬಂದ ಬಳಿಕ ಪಕ್ಷಾತೀತವಾಗಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಇಲ್ಲಿ ಯಾರೂ ತಾಕತ್ತು ತೋರಿಸುವ ಅಗತ್ಯವಿಲ್ಲಎಂದು ಸಂಸದ ಪ್ರಜ್ವಲ್ ರೇವಣ್ಣ ಸದಸ್ಯರಿಗೆ ನೀತಿ ಪಾಠ ಬೋಧಿಸಿದರು.
ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ನಗರಸಭೆಯ ಸಾಮಾನ್ಯ ಸಭೆಯಲ್ಲಿಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಜೆಡಿಎಸ್ ಸದಸ್ಯರು ಹಿಂದಿನ ಸಭೆಯ ನಡಾವಳಿ, ನಗರದ ಅಭಿವೃದ್ಧಿ ವಿಷಯದಲ್ಲಿ ಪರಸ್ಪರ ಸಮರಕ್ಕೆ ನಿಂತರು. ಈ ವೇಳೆ ಮಧ್ಯೆ ಪ್ರವೇಶಿಸಿ ಶಾಸಕ ಪ್ರೀತಂ ಜೆ.ಗೌಡ ಮತನಾಡಿ,

”ಅಭಿವೃದ್ಧಿ ಮುಖ್ಯವೇ ಹೊರತು ಪರಸ್ಪರ ಆರೋಪ-ಪ್ರತ್ಯೇರೋಪದಿಂದ ಯಾವ ಪ್ರಯೋಜನವೂ ಇಲ್ಲ. ಇನ್ನು ಒಂದು ದಿನ ಹೆಚ್ಚುವರಿ ಸಮಯ ತೆಗೆದುಕೊಂಡು ಚರ್ಚಿಸಿ, ಪ್ರತಿ ವಾರ್ಡಿಗೆ 20 ಅಲ್ಲ 30 ಲಕ್ಷದ ಕಾಮಗಾರಿ ಆಗಬೇಕೆ, ಚರ್ಚೆಮಾಡಿ ವಿಷಯವನ್ನು ರಬ್ಬರ್ಬ್ಯಾಂಡ್ನಂತೆ ಎಳೆಯಬೇಡಿ,” ಎಂದು ಸಲಹೆ ನೀಡಿದರು.
ಜೆಡಿಎಸ್ ಸದಸ್ಯ ಗಿರೀಶ್ ಚನ್ನವೀರಪ್ಪ ಮಾತನಾಡಿ, ”ಹಿಂದಿನ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ವಿಷಯಕ್ಕೆಲ್ಲ ಸರ್ವಾನುಮತದ ನಿರ್ಣಯ ಅಂದು ಕಡತದಲ್ಲಿ ಬರೆದುಕೊಳ್ಳಲಾಗಿದೆ. ಸಭೆಯ ನಡುವೆಯೇ ಅಧ್ಯಕ್ಷರು ಹೊರನಡೆದಿದ್ದರು. ಎರಡು ಗಂಟೆ ಕಾದ ಬಳಿಕ ಸಭೆ ಮೊಟಕುಗೊಳಿಸಲಾಗಿದೆ ಎಂಬ ಉತ್ತರ ಬಂತು. ಆಯುಕ್ತರೇ ಕಡತ ತೆಗೆದುನೋಡಿ ಏನು ಬರೆದಿದೆ ಎಂದು. ಮುಂದಿನವರಿಗೆ ಮಾದರಿಯಾಗಬೇಕಾದವರೇ ಹೀಗೆ ತಪ್ಪು ಮಾಡಿದರೆ ದೇವರು ಕ್ಷಮಿಸುವುದಿಲ್ಲ. ನಿಮಗೆ ಒಳ್ಳೆಯದಾಗುವುದಿಲ್ಲ,” ಎಂದು

ಆಯುಕ್ತ ಪರಮೇಶ್ವರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಹಿರಿಯ ಸದಸ್ಯ ಸಯ್ಯದ್ ಅಕ್ಬರ್ ಕೂಡ ದನಿಗೂಡಿಸಿರು. ಈ ವೇಳೆ ಮಾತನಾಡಿದ ಶಾಸಕ ಪ್ರೀತಂ ಜೆ.ಗೌಡ, ”ಹಿಂದಿನ ಸಭೆಯ ಹಿನ್ನೆಲೆ ಗಮನಿಸಿದರೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲಎಂದು ಸದಸ್ಯರು ಆರೋಪಿಸುತ್ತಿದ್ದಾರೆ. ನಗರದ ಅಭಿವೃದ್ಧಿ ಮುಖ್ಯವೇ ಹೊರತು ಕಿತ್ತಾಟ ಮುಖ್ಯವಲ್ಲ,” ಎಂದು ಸಲಹೆ ನೀಡಿದರು.

ಶಾಸಕರ ಪರ ಎಂಪಿ ಬ್ಯಾಟಿಂಗ್
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ”ಶಾಸಕ ಪ್ರೀತಂ ಜೆ.ಗೌಡ ಉತ್ತಮ ಸಲಹೆ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ,. ವಿಷಯವಾರು ಚರ್ಚೆ ಮಾಡಿ. ಯಾರು, ಯಾರ ತಾಕತ್ತನ್ನು ತೋರಿಸಬೇಕಿಲ್ಲ. ಆರೋಗ್ಯಕರವಾಗಿರಬೇಕು,” ಎಂದು ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು.

ಜೆಡಿಎಸ್ ಸದಸ್ಯ ಯೋಗೇಂದ್ರಬಾಬು ಮಾತನಾಡಿ, ”ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜು 40 ಎಕರೆ ವಿಸ್ತೀರ್ಣಹೊಂದಿದ್ದು, ತೆರಿಗೆ ಪಾವತಿಸುತ್ತಿಲ್ಲ. ಆ ಸಂಸ್ಥೆ ಶುಲ್ಕ, ಡೊನೇಷನ್ ಪಡೆದೇ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದು. ಸಾಮಾನ್ಯ ಜನ ನೀರಿಗೆ ತೆರಿಗೆ ಕಟ್ಟದಿದ್ದರೆ ಸಂಪರ್ಕ ಕಡಿದು ಹಾಕುತ್ತೀರಲ್ಲಕಾಲೇಜಿನವರು ಪ್ರಭಾವಿಗಳು ಎಂದು ಬಿಟ್ಟಿದ್ದೀರಾ,” ಎಂದು ಆಯುಕ್ತರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ”ಈ ಕೂಡಲೇ ಅಧಿಕಾರಿಗಳು ಉತ್ತರ ನೀಡಬೇಕು,” ಎಂದು ಪಟ್ಟುಹಿಡಿದರು.

ಈ ವೇಳೆ ಕಂದಾಯ ಅಧಿಕಾರಿ ಮಾತನಾಡಿ, ”ತೆರಿಗೆ ರಿಯಾಯಿತಿ ಕೋರಿ ನ್ಯಾಯಾಲಯಕ್ಕೆ ಕಾಲೇಜಿನವರು ಹೋಗಿದ್ದಾರೆ,” ಎಂದು ತಿಳಿಸಿದರು. ”ಆಕ್ಷೇಪಣೆ ಸಲ್ಲಿಸಿ ತೆರಿಗೆ ವಸೂಲಿ ಮಾಡಿ,” ಎಂದು ಯೋಗೇಂದ್ರಬಾಬು ಒತ್ತಾಯಿಸಿದರು.

”ನಗರದ ಉದಯಗಿರಿ ಬಡಾವಣೆಯಲ್ಲಿ ನಿಯಮ ಉಲ್ಲಂಘಿಘಿಸಿ ಕಟ್ಟಡ ಕಟ್ಟಿದ್ದಾರೆ ಎಂದು ಒಂದು ಕಟ್ಟಡ ಮಾಲೀಕರಿಗೆ ದಂಡ ವಿಧಿಸುವುದು, ಮತ್ತೊಬ್ಬರ ವಿರುದ್ಧ ಕ್ರಮವಿಲ್ಲ. ಇದ್ಯಾವ ನ್ಯಾಯ,” ಎಂದು ಯೋಗೇಂದ್ರಬಾಬು ಪ್ರಶ್ನಿಸಿದರು. ”ನಿಖರವಾದ ಮಾಹಿತಿ ನೀಡಿ ಕ್ರಮ ಕೈಗೊಳ್ಳುತ್ತೇವೆ,” ಎಂದು ಅಧ್ಯಕ್ಷ ಮೋಹನ್ ಹಾಗೂ ಆಯುಕ್ತರು ಭರವಸೆ ನೀಡಿದರು.

ಸದಸ್ಯರು ಏನೇ ಪ್ರಶ್ನೆ ಕೇಳಿದರೂ ಅಧ್ಯಕ್ಷರು ಉತ್ತರ ನೀಡುತ್ತಿಲ್ಲ. ಶಾಸಕ ಪ್ರೀತಂ ಜೆ.ಗೌಡ ಮುಗುಳ್ನಗುತ್ತಿದ್ದಾರೆ. ಹೀಗಾದ್ರೆ ಏನು ಮಾಡೋದು ಎಂದು ಜೆಡಿಎಸ್ ಸದಸ್ಯ ಗಿರೀಶ್ ಚನ್ನವೀರಪ್ಪ ಹೇಳಿದರು.

LEAVE A REPLY

Please enter your comment!
Please enter your name here