ಹಾಸನಾಂಬ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶ:ಕೆ,ಗೋಪಾಲಯ್ಯ

0

ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಈ ಬಾರಿ ಸಾರ್ವಜನಿಕರಿಗೆ ಅವಕಾಶ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ನಂತರ ನಗರದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸಾರ್ವಜನಿಕ ಭಾವನೆಗಳನ್ನು ಗೌರವಿಸಿ ದೇವಾಲಯದ ಬಾಗಿಲು ತೆರೆಯುವ ಅಕ್ಟೋಬರ್28 ರಂದು ಹಾಗೂ ಬಾಗಿಲು ಮುಚ್ಚುವ ದಿನವಾದ ನವೆಂಬರ್ 6ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಸಾರ್ವಜನಿಕರು ಸಹ ಸಹಕರಿಸಬೇಕು. ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಹೇಳಿದರು

ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ ಮತ್ತು ಈ ಬಗ್ಗೆ ಚಿಕಿತ್ಸೆ ದಾಖಲೆ ಇರಿಸಿಕೊಂಡು ತಪಾಸಣಾ ತಂಡ ಕೇಳಿದಾಗ ತೋರ್ಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಈ ಹಿಂದಿನ ಪದ್ಧತಿ ಗಳಂತೆ ಈ ವರ್ಷವೂ ವಿಶೇಷ ದರ್ಶನದ ಅವಕಾಶಗಳು ಇರಲಿವೆ 1000 ರೂ ಹಾಗೂ 300ರೂ ಗಳ ಪಾಸುಗಳನ್ನು ವಿತರಿಸಲಾಗುವುದು ಹಾಗೂ ಸಾಮಾನ್ಯ ದರ್ಶನಕ್ಕೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಲು ಅವಕಾಶ ನೀಡಲಾಗುವುದು ಎಂದು ಕೆ ಗೋಪಾಲಯ್ಯ ಹೇಳಿದರು.

ಆಸ್ಪತ್ರೆ ಆವರಣದಲ್ಲಿ ಕೋವಿಡ್ ಲಸಿಕೆ ಹಾಕದವರನ್ನು ಪರಿಶೀಲಿಸಲು ಹಲವು ತಂಡಗಳನ್ನು ರಚಿಸಲಾಗುವುದು ಯಾವುದೇ ಗೊಂದಲಗಳಿಲ್ಲದೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಕೋವಿಡ್-19 ಹಿನ್ನೆಲೆಯಲ್ಲಿ ಭಕ್ತಾದಿಗಳು ಮಕ್ಕಳನ್ನು ಕರೆತರಲು ಇರುವುದು ಸೂಕ್ತ ಎಂದು ತಿಳಿಸಿದರು.

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಾತಾಡ್ ಮಾತಾಡ್ ಕನ್ನಡ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಇದೇ 24ನೇ ತಾರೀಖಿನಿಂದ 30ನೇ ತಾರೀಖಿನವರೆಗೆ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕುಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಭಾಗವಾಗಿ ಅಕ್ಟೋಬರ್ 28ನೇ ತಾರೀಖು ಬೆಳಗ್ಗೆ 11 ಗಂಟೆಗೆ ಹಾಸನ ಜಿಲ್ಲೆಯಾದ್ಯಂತ ಮೂರು ಕನ್ನಡ ಗೀತೆಗಳನ್ನು ಹಾಡುವ ಲಕ್ಷ ಕಂಠ ಗಾಯನ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕುಗಳ ಪ್ರಮುಖ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳು ಒಳಗೊಂಡು ಸುಮಾರು 15 ವಿವಿಧ ಸ್ಥಳಗಳಲ್ಲಿ ಆಯೋಜಿಸಿದ್ದು ಸುಮಾರು 25 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯಿಂದ ಭಾಗವಹಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಕಡ್ಡಾಯವಾಗಿ ಮೊದಲ ಮತ್ತು ಎರಡನೇ ಡೋಸ್ ಕೋವಿಡ್ ತೆಗೆದುಕೊಂಡಿರಬೇಕು ಹಾಗೂ ಈ ಬಗ್ಗೆ ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸುವುದರ ಜೊತೆಗೆ ಆಧಾರ್ ಕಾರ್ಡ್, ಐಡಿ ಕಾರ್ಡ್ ತೋರಿಸಿ ಪ್ರವೇಶ ಪಡೆಯಬಹುದು ಎಮದು ಅವರು ಹೇಳಿದರು.

ಇದೇ ವೇಳೆ ಶಾಸಕರಾದ ಪ್ರೀತಮ್ ಜೆ ಗೌಡ, ನಗರಸಭೆಯ ಅಧ್ಯಕ್ಷರಾದ ಮೋಹನ್ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‍ಗೌಡ ಅವರು ಮಾತನಾಡಿ ಹಾಸನಾಂಬ ದೇವಾಲಯದ ವಿಧಿಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here