ಐಪಿಎಲ್ ಎಂದರೇ ಭಾರತದ ಕ್ರೀಡಾಭಿಮಾನಿಗಳಿಗೆ ಹಬ್ಬ. ಐಪಿಎಲ್ ಭಾರತವಷ್ಟೇ ಅಲ್ಲದೆ ಇಡೀ ಪ್ರಪಂಚದ ಒಂದು ಉತ್ತಮ ದೇಶಿಯ ಕ್ರಿಕೆಟ್ ಲೀಗ್ ಎಂಬ ಬಿರುದನ್ನು ಪಡೆದಿದೆ. ಈ ಲೀಗ್ ಆಡಲು ಎಲ್ಲಾ ದೇಶದ ಪ್ರಮುಖ ಆಟಗಾರರು ಸಹ ಕಾತುರದಿಂದ ಪ್ರತಿವರ್ಷ ಕಾಯುತ್ತಿರುತ್ತಾರೆ.
ಪ್ರಪಂಚದ ಚುಟುಕು ಕ್ರಿಕೆಟ್ನ ಉತ್ತಮ ಬ್ಯಾಟ್ಸ್‌ಮನ್,ಬೌಲರ್,ಫೀಲ್ಡರ್ ಎಲ್ಲರನ್ನೂ ಸಹ ನಾವು ಈ ಲೀಗ್ನಲ್ಲಿ ಕಾಣಬಹುದು. ಆದರೆ ಐಪಿಎಲ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ ಬದಲಾಗಿ ಬೆಟ್ಟಿಂಗ್ ಎಂಬ ಭೂತವಾಗಿ ಕಾಡುತ್ತಿದೆ.ಭಾರತದಲ್ಲಿ 45 ಕ್ಕೂ ಹೆಚ್ಚು ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ಗಳಿವೆ. ಜೊತೆಗೆ ವ್ಯಕ್ತಿಯಿಂದ ವ್ಯಕ್ತಿಗೆ ಹಣ ನೀಡುವುದು ಹಣ ವರ್ಗಾವಣೆ ಮಾಡುವುದು ಹೀಗೆ ಹಲವಾರು ರೀತಿಯ ಬೆಟ್ಟಿಂಗ್ ನಡೆಯುತ್ತದೆ. ಐಪಿಎಲ್ ಶುರುವಾದರೆ ಸಾಕು ಕ್ರಿಕೆಟ್ ಬೆಟ್ಟಿಂಗ್ ಶುರು ಪ್ರತಿ ಹಳ್ಳಿಯಿಂದ ಶುರುವಾಗಿ ದೊಡ್ಡ ದೊಡ್ದ ನಗರಗಳವರೆಗೂ ಹಬ್ಬಿದೆ.
ಐಪಿಎಲ್ ಬೆಟ್ಟಿಂಗ್ ಎಂಬುದು ಭಾರತದಲ್ಲಿ ವ್ಯವಸ್ಥಿತ ಮತ್ತು ಸಂಘಟಿತವಾಗಿ ಬೆಳೆದುನಿಂತಿದೆ. ಭಾರತದಲ್ಲಿ ಬೆಟ್ಟಿಂಗ್ ಕಾನೂನುಬಾಹಿರವಾಗಿದ್ದರು ಕೆಲವು ಆ್ಯಪ್ ಗಳು ಮನರಂಜನೆ(entertainment) ಮತ್ತು ಕೌಶಲ್ಯ(Skill) ಎಂಬ ಸುಳ್ಳು ಹಣೆಪಟ್ಟಿಯೊಂದಿಗೆ ಅನುಮತಿ ಪಡೆದು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ದೊಡ್ಡ ದೊಡ್ಡ ನಟರು,ಕ್ರಿಕೆಟರ್ ಗಳು,ಸೆಲೆಬ್ರಿಟಿಗಳು ಮುಂತಾದವರು ಕ್ರಿಕೆಟ್ ಬೆಟ್ಟಿಂಗ್ ಜಾಹೀರಾತು ನೀಡುವ ಮೂಲಕ ಯುವಪೀಳಿಗೆಯನ್ನು ಮತ್ತಷ್ಟು ತಪ್ಪು ದಾರಿಗೆ ತರಲು ಉತ್ತೇಜನ ನೀಡುತ್ತಿದ್ದಾರೆ.
ಪ್ರತಿಯೊಬ್ಬ ಸಾಮಾನ್ಯ ಜ್ಞಾನವಿರುವವನಿಗೂ ಜೂಜು ಎಂಬುದು ಕೆಟ್ಟದ್ದು ಎಂಬ ಅರಿವಿರುತ್ತದೆ. ಆದರೆ ಯಾವುದೋ ಕ್ಷಣಿಕ ಅಥವಾ ಸ್ವಲ್ಪ ದಿನದ ಖುಷಿಗಾಗಿ ಬೆಟ್ಟಿಂಗ್ ಮಾಡಲು ಮುಂದಾಗುತ್ತಾನೆ. ಇವತ್ತು 100 ರೂಪಾಯಿ ಗೆದ್ದರೆ ನಾಳೆ ಅದೇ ಆಸೆಗೆ 200 ರೂಪಾಯಿ ಬೆಟ್ ಮಾಡುತ್ತಾನೆ. ಆದರೆ ಮುಂದೊಂದು ದಿನ ಸೋಲುತ್ತಾನೆ ಎಷ್ಟರಮಟ್ಟಿಗೆ ಎಂದರೆ ಮನೆಯಲ್ಲಿರುವ ವಸ್ತು ಕೊನೆಗೆ ಮನೆಯೂ ಸಹ ಇಲ್ಲದಂತೆ ಮಾರಿ ಬೆಟ್ಟಿಂಗ್ ಆಡಬೇಕೆಂಬ ಹುಚ್ಚು ಹಿಡಿದಿರುತ್ತದೆ.
ಇದಲ್ಲದೆ ಸೋತ ಹಣಕ್ಕಾಗಿ ಅಥವಾ ಬೆಟ್ಟಿಂಗ್ ಕಟ್ಟಬೇಕೆಂಬ ಆಸೆಗೆ ಕೊಲೆ ಮಾಡುವುದು, ಕಳ್ಳತನ ಮಾಡುವುದು ಎಲ್ಲಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜೊತೆಗೆ ಸೋತ ಹಣ ನೀಡಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದು ಕೂಡ ಹೆಚ್ಚುತ್ತಿದೆ. ಬದುಕಿನಲ್ಲಿ ಒಂದು ಉತ್ತಮ ಘಟ್ಟದಲ್ಲಿ ಇರುವಾಗ ಅಥವಾ ಮುಂದಿನ ಜೀವನವನ್ನು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಇರುವ ಯುವಕರೇ ಹೆಚ್ಚು ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು ನಿಜವಾಗಿಯೂ ಸಮಾಜಕ್ಕೆ,ದೇಶಕ್ಕೆ ಹಾನಿಕಾರಕ.
ಬೆಂಗಳೂರು ಒಂದರಲ್ಲೇ ಪ್ರತಿವರ್ಷ ಐಪಿಎಲ್ ನಲ್ಲಿ ಸರಾಸರಿ 12000 ಕೋಟಿಯಷ್ಟು ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.
2008 ರಲ್ಲಿ ಮುಂಬೈನಲ್ಲಿ ಮೂವರು ಸೇರಿ ಶುರುಮಾಡಿದ ಡ್ರೀಮ್೧೧(Dream11) ಬೆಟ್ಟಿಂಗ್ ಕಂಪನಿ ಇಂದು ಐಪಿಎಲ್ ಸ್ಪಾನ್ಸರ್ ಮಾಡುವಷ್ಟು ಬೆಳೆದಿದೆ. ಇದಕ್ಕೆ ಕಾರಣ ಬೆಟ್ಟಿಂಗ್ ಮಾಡುವವರು ದಿನೇದಿನೇ ಹೆಚ್ಚಾಗುತ್ತಿರುವುದು.
ಜೂಜು ಬೆಳೆಯುತ್ತಿರುವ ವೇಗ ನೋಡುತ್ತಿದ್ದರೆ ಅಘಾತವಾಗುತ್ತದೆ. ದಯವಿಟ್ಟು ಯುವಪೀಳಿಗೆ ಇದರಿಂದ ದೂರವಿದ್ದು ತಮ್ಮ ಬದುಕನ್ನು ರೂಪಿಸಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಬ ಹಾಗೂ ನಂಬಿದವರನ್ನು ಚೆನ್ನಾಗಿ ನೋಡಿಕೊಂಡು ತಾವು ಕೂಡ ಉತ್ತಮ ಹಾದಿಯಲ್ಲಿ ನಡೆಯಲಿ ಎಂಬುದು ನಮ್ಮ ಕಳಕಳಿ.