ವಿಜೃಂಭಣೆಯಿಂದ ಜರುಗಿದ ಮಡಿಕೇರಿ ದಸರಾ;

0

ವಿಶ್ವವಿಖ್ಯಾತ ಮೈಸೂರು ದಸರಾ 2021ಕ್ಕೆ ಹೆಚ್ಚಿನ ಸಂಖ್ಯೆಯ ವೀಕ್ಷಕರಿಗೆ ಭಾಗವಹಿಸಲು ಅವಕಾಶ ಇಲ್ಲದಿದ್ದರಿಂದ ಬಹುತೇಕ ಜನರು ಮಡಿಕೇರಿಯ ದಸರಾ ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದರು.

ಕೊಡಗು: ಕೋವಿಡ್19 ಹಿನ್ನಲೆಯಲ್ಲಿ ಸಾಕಷ್ಟು ನಿರ್ಬಂಧಗಳ ಹಾಕಿ ಸರಳ ರೀತಿಯಾಗಿ ಆಚರಣೆಗೆ ಅವಕಾಶ ನೀಡಿದ್ದ ಮಡಿಕೇರಿ ದಸರಾ ಸಾವಿರಾರು ಪ್ರವಾಸಿಗರೊಂದಿಗೆ ಅದ್ಧೂರಿಯಾಗಿಯೇ ನಡೆದಿದೆ. ಶುಕ್ರವಾರ ರಾತ್ರಿಯಿಡೀ ನಡೆದ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆ ಜನರ ಮನಸೂರೆಗೊಂಡಿತು.

ಡಿಜೆ ಸೌಂಡ್ ಜೊತೆಗೆ ಬಣ್ಣದ ಓಕುಳಿ, ವಿವಿಧ ಪೌರಾಣಿಕ ಕಥೆಗಳು, ರಾಕ್ಷಸರ ನರ್ತನಗಳು ಜನರನ್ನು ಆ ಕ್ಷಣಕ್ಕೆ ದೇವಲೋಕಕ್ಕೆ ಕರೆದೊಯ್ದಿದ್ದವು ಎಂದರೆ ತಪ್ಪಲ್ಲ. ದುಷ್ಟರ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪಗಳ ಶೋಭಾಯಾತ್ರೆ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ, ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರದರ್ಶನಗೊಂಡ ಆಂಜನೇಯ ದರ್ಶನ, ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ, ಗಣಪತಿಯಿಂದ ಗಜಾಸುರನವಧೆ, ಚಂಡ ಮುಂಡರ ವಧೆ ಸೇರಿದಂತೆ ಹಲವು ಪೌರಾಣಿಕ ಕಥಾವಸ್ತುವನ್ನು ಆಧರಿಸಿದ ನೃತ್ಯ ಪ್ರದರ್ಶನಗಳನ್ನು, ಯುದ್ಧದ ದೃಶ್ಯಗಳನ್ನು ಮಂಟಪಗಳು ಸಾದರಪಡಿಸಿದವು. ಶುಕ್ರವಾರ ರಾತ್ರಿ 11 ಗಂಟೆಗೆ ಶುರುವಾದ ದಶಮಂಟಪಗಳ ಶೋಭಾಯಾತ್ರೆ ಬೆಳಿಗ್ಗೆ 5 ಗಂಟೆವರೆಗೂ ನಡೆಯಿತು.

ಮಾಸ್ಕ್ ಹಾಕುವುದನ್ನು ಕೊಡಗು ಜಿಲ್ಲಾಡಳಿತ ಕಡ್ಡಾಯಗೊಳಿಸಿತ್ತು. ಆದರೂ ಬಹುತೇಕರು ಮಾಸ್ಕ್ ಹಾಕಿಯೇ ಇರಲಿಲ್ಲ. ಅಲ್ಲಲ್ಲಿಯೇ ನಿಂತಿದ್ದ ಪೊಲೀಸರು ಲಾಠಿ ರುಚಿ ತೋರಿಸಿ ಮಾಸ್ಕ್ ಹಾಕಿಸಬೇಕಾಯಿತು.

ವರದಿ: ಅಜೇಯ್ ಕೌಶಿಕ್

LEAVE A REPLY

Please enter your comment!
Please enter your name here