ರೋಟರಿ ಸಂಸ್ಥೆ, ಭಾರತೀಯ ಮಕ್ಕಳ ತಜ್ಞರ ಸಂಸ್ಥೆ ಹಾಗೂ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಗುರುವಾರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ನಡೆದ ಸ್ತನ್ಯ ಪಾನ ಸಪ್ತಾಹದಲ್ಲಿ ತಾಯಿ ಎದೆ ಹಾಲು ಮಹತ್ವ ಕುರಿತು ಮಾಹಿತಿ
ಸಕಲೇಶಪುರ: ಶಿಶುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ತಾಯಿಯ ಎದೆ ಹಾಲು ಅಮೃತ ಎಂದು ಪಟ್ಟಣದ ಮಕ್ಕಳ ತಜ್ಞ ಡಾ. ಅಲೋಕ್ ಎಂ. ಜನಾರ್ಧನ್ ಹೇಳಿದರು.
ಇಲ್ಲಿಯ ರೋಟರಿ ಸಂಸ್ಥೆ, ಭಾರತೀಯ ಮಕ್ಕಳ ತಜ್ಞರ ಸಂಸ್ಥೆ ಹಾಗೂ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಗುರುವಾರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ನಡೆದ ಸ್ತನ್ಯ ಪಾನ ಸಪ್ತಾಹದಲ್ಲಿ ತಾಯಿ ಎದೆ ಹಾಲು ಮಹತ್ವ ಕುರಿತು ಮಾಹಿತಿ ನೀಡದರು. ಮಗುವಿಗೆ ತಾಯಿ ಹೆಚ್ಚು ಕಾಲ ಎದೆ ಹಾಲು ಉಣಿಸುವುದರಿಂದ ಮಗು ಮತ್ತು ತಾಯಿಯ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು ತಾಯಿಯ ಎದೆ ಹಾಲಿನಲ್ಲಿ ಇರುತ್ತದೆ. ತಾಯಿ ತನ್ನ ಮಗುವಿಗೆ ಎದೆ ಹಾಲು ಕಡಿಮೆ ಆಗುವ ವರೆಗೂ ಪ್ರಕೃತಿ ಸಹಜವಾಗಿ ಹಾಲುಣಿಸುವುದರಿಂದ ತಾಯಿಯ ಸ್ತನ ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯದ ಸಮಸ್ಯೆಗಳು ಬರುವುದನ್ನು ತಡೆಯುತ್ತದೆ ಎಂದರು.
ತಾಯಿ ಎದೆ ಹಾಲು ಹೆಚ್ಚಿಸಿಕೊಳ್ಳುವುದಕ್ಕೆ ವೈದ್ಯರ ಸಲಹೆ ಮೇರೆಗೆ ಆಹಾರ ಸೇವನೆ ಮಾಡುವ ಅಗತ್ಯವಿದೆ. ಅಜ್ಜಿ ಇರುವಂತಹ ಮನೆಗಳಲ್ಲಿ ಬಾಣಂತಿಯರಿಗೆ ಮೆಂತೆ ಹಿಟ್ಟು ಹಾಗೂ ಇನ್ನಿತರ ಆಹಾರ ನೀಡುತ್ತಾರೆ ಇದರಿಂದ ಸಹ ಎದೆ ಹಾಲು ಹೆಚ್ಚಾಗುತ್ತದೆ ಎಂದರು.
ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅರುಣ್ ಮಾತನಾಡಿ, ಆಗಸ್ಟ್ 1ರಿಂದ 7ರ ವರೆಗೆ ವಿಶ್ವದಾಧ್ಯಂತ ಸ್ತನ್ಯಪಾನ ವಾರ ಆಚರಣೆ ಮಾಡಲಾಗುತ್ತದೆ. ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಈ ಒಂದು ಆಚರಣೆ ನಡೆಸಲಾಗುವುದು ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಸಹನಾ ಶಶಿಧರ್ ಮಾತನಾಡಿ, ಭಾರತೀಯ ಮಕ್ಕಳ ತಜ್ಞರ ಸಂಸ್ಥೆಯೊಂದಿಗೆ ರೋಟರಿ ಸಂಸ್ಥೆ ಒಗ್ಗೂಡಿ ಹಲವು ವರ್ಷಗಳಿಂದಲೂ ಸ್ತನ್ಯಪಾನ ಸಪ್ತಾಯ ಆಚರಣೆ ಮಾಡಲಾಗುತ್ತಿದೆ. ಹಿಂದೆಲ್ಲಾ ಮನೆಗಳಲ್ಲಿ ಹಿರಿಯರ ಸಲಹೆ ಆರೈಕೆಯಿಂದ ಮಗುವಿಗೆ ತಾಯಿ ಕ್ರಮಬದ್ಧವಾಗಿ ಎದೆಹಾಲು ಉಣಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರೇ ಖುದ್ದಾಗಿ ಇಂತಹ ಜಾಗೃತಿ ಮಾಡಬೇಕಾದ ಅಗತ್ಯತೆ ಇದೆ ಎಂದರು.
ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸುನಿಲ್, ಸರ್ಜನ್ ಡಾ. ಮಧುಸೂದನ್, ಮೂಳೆ ತಜ್ಞ ಡಾ. ರತ್ನಾಕರ ಕಿಣಿ, ಫಿಜಿಷಿಯನ್ ಡಾ. ನಿಶ್ಚಿತಾ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಜಾನೇಕೆರೆ ಆರ್. ಪರಮೇಶ್ ಇದ್ದರು. ಹಿರಿಯ ಶುಶೂಷಕ ಅಧಿಕಾರಿ ಮಧುರಾ ಕಾರ್ಯಕ್ರಮ ನಿರೂಪಿಸಿದರು. ಚನ್ನವೇಣಿ ಎಂ. ಶೆಟ್ಟಿ ಪ್ರಾರ್ಥಿಸಿದರು ರೋಟರಿ ಸಂಸ್ಥೆಯ ಸದಸ್ಯರು, ತಾಯಂದೀರು, ಶುಶೂಷಕ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಸಿಬ್ಬಂದಿ ಇದ್ದರು.