ಸಿಎಂ ಆದ ಕೂಡಲೆ ದೇವೇಗೌಡರ ಭೇಟಿಯ ಅಗತ್ಯವೇನಿತ್ತು?; ಪ್ರೀತಮ್ ಗೌಡ

0

ಹಾಸನ: ಬಿಜೆಪಿ ಶಾಸಕ ಪ್ರೀತಮ್ ಗೌಡ ಹಾಗೂ ಅವರ ಬೆಂಬಲಿಗರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿ 24 ಗಂಟೆಯೊಳಗೆ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದಿರುವುದು ಭಾರೀ ಅಸಮಾಧಾನ ತರಿಸಿದೆ. ಈ ವಿಷಯವಾಗಿ ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ನಾವು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ವಿರೋಧಿಯಾಗಿ ರಾಜಕಾರಣ ಮಾಡುತ್ತಿದ್ದೇವೆ. ಈ ಭಾಗಕ್ಕೆ ಸಚಿವ ಸ್ಥಾನ ಕೊಡದಿದ್ದರೂ ಪರವಾಗಿಲ್ಲ, ಕನಿಷ್ಠ ಇಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಮಾನಸಿಕ ಸ್ಥೈರ್ಯ ತುಂಬೋ ಕೆಲಸ ಮಾಡಬೇಕು. ನೀವು ಬೊಮ್ಮಾಯಿವರು ಆಗಿ 24 ಗಂಟೆ ಒಳಗೆ ದೇವೇಗೌಡರ ಮನೆಗೆ ಹೋಗೊ ಅವಶ್ಯಕತೆ ಏನಿತ್ತು? ಹೀಗೆಂದು ಕಾರ್ಯಕರ್ತರು ನನ್ನ ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾನು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಕ್ಷರು ಹಾಗೂ ಸಂಘ ಪರಿವಾರದ ಜೊತೆಯೂ ಈ ವಿಚಾರವಾಗಿ ನಾನು ಚರ್ಚೆ ಮಾಡುತ್ತೇನೆ ಎಂದು ಹಾಸನದಲ್ಲಿ ಬಿಜೆಪಿ ಯುವ ಶಾಸಕ ಪ್ರೀತಮ್ ಗೌಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಇದೆ. ಆ ಚುನಾವಣೆ ಕಾರ್ಯಕರ್ತರ ಚುನಾವಣೆಯೆಂಬುದು ಎಲ್ಲರಿಗೂ ಗೊತ್ತಿದೆ. ನಾವು ಜನತಾದಳದ ವಿರುದ್ಧವೇ ಚುನಾವಣೆ ಮಾಡಬೇಕು. ಅದನ್ನು ಮಾಡಬೇಕಾದರೆ ರಾಜಕೀಯದ ಹೇಳಿಕೆ ಕೊಡಬೇಕು. ಈಗಿನ ನಾಯಕರು ಆ ರೀತಿಯ ರಾಜಕೀಯ ಹೇಳಿಕೆಗಳನ್ನು ಕೊಡುತ್ತಾರೋ ಇಲ್ಲವೋ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿದೆ. ನಾನು ಬಿಜೆಪಿ ಕಾರ್ಯಕರ್ತರ ನೋವಿಗೆ ಸ್ಪಂದಿಸೋ ಕೆಲಸ ಮಾಡುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ನಮ್ಮ ಎದುರಾಳಿಯಾದ ಜೆಡಿಎಸ್ ಅವರೊಂದಿಗೆ ಅವರೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ನನಗನಿಸುತ್ತಿದೆ ಎಂದು ಪ್ರೀತಮ್ ಗೌಡ ಹೇಳಿದ್ದಾರೆ.
ನಾವು 125 ಜನ ಜನ ಬಿಜೆಪಿ ಶಾಸಕರು ಸಿಎಂ ಬೊಮ್ಮಾಯಿ ಅವರ ಬೆನ್ನಿಗಿದ್ದೇವೆ. ಹಾಗಾಗಿ ಯಾವುದೇ ಕಾರಣಕ್ಕೂ ಒಂದು ಅವಕಾಶ ಸಿಕ್ಕರೆ ಅಡ್ಜೆಸ್ಟ್ಮೆಂಟ್ ಮಾಡಿಕೊಳ್ತೀವಿ ಎಂದು ಜೆಡಿಎಸ್ನವರು ಕಾಯುತ್ತಿದ್ದಾರೆ.

ಅವರಿಗೆ ಅದಕ್ಕೆ ಅವಕಾಶ ಸಿಗುವುದಿಲ್ಲ. ಈ ಬಗ್ಗೆ ನಾನು ಸಿಎಂ ಬಸವರಾಜ ಬೊಮ್ಮಾಯಿಯವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಜೆಡಿಎಸ್ ವಿರುದ್ಧವೂ ಶಾಸಕ ಪ್ರೀತಮ್ ಗೌಡ ಹರಿಹಾಯ್ದಿದ್ದಾರೆ.
ನಿಮ್ಮ ಮನೆಗೆ ನುಗ್ಗಿ ಕಲ್ಲು ಹೊಡೆದವರ ಮನೆಗೆ ಸಂಪುಟ ರಚನೆ ಆಗುವ ಮೊದಲೇ ಮುಖ್ಯಮಂತ್ರಿಗಳು ಭೇಟಿ ನೀಡಿದರೆ ನಮ್ಮಂತಹ ಕಾರ್ಯಕರ್ತರನ್ನು ಯಾರು ಉಳಿಸಿಕೊಳ್ಳುತ್ತಾರೆ? ಎಂದು ಹಾಸನದ ಬಿಜೆಪಿ ಕಾರ್ಯಕರ್ತರು ನನ್ನನ್ನು ಕೇಳುತ್ತಿದ್ದಾರೆ. ಅವರಿಗೆ ನಾನು ಏನು ಉತ್ತರ ಕೊಡಲಿ? ಹಳೆ ಮೈಸೂರು ಭಾಗದ ಕಾರ್ಯಕರ್ತರು ಹಾಗೂ ಮುಖಂಡರು ಹೋರಾಟದ ಮೂಲಕ ಬಿಜೆಪಿ ಪಕ್ಷ ಹಾಗೂ ಸಂಘಟನೆ ಕಟ್ಟಿದ್ದೀರಿ.

ಆ ಸಂಘಟನೆ ಮುಂದುವರೆಯುತ್ತದೆ. ಕಾರ್ಯಕರ್ತರು ಇದ್ದರೆ ಮಾತ್ರ ಪಕ್ಷ ಉಳಿಯುತ್ತದೆ. ಪಕ್ಷ ಇದ್ದರೆ ನನ್ನಂತವರು ಶಾಸಕರಾಗಬಹುದು, ಮುಖ್ಯಮಂತ್ರಿಯೂ ಆಗಬಹುದು. ಕಾರ್ಯಕರ್ತರೇ ಇಲ್ಲದೇ ಏನೂ ಆಗಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೇನೆ ಎಂದು ಶಾಸಕ ಪ್ರೀತಮ್ ಗೌಡ ಹೇಳಿದ್ದಾರೆ.

LEAVE A REPLY

Please enter your comment!
Please enter your name here