ಪ್ರಜ್ವಲ್ 40 ನೇ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನ
ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಅನೌನ್ಸ್: ಗುರುದತ್ ಗಾಣಿಗ ಆಕ್ಷನ್ ಕಟ್
ನಟ ಪ್ರಜ್ವಲ್ ದೇವರಾಜ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ನವರಾತ್ರಿಯ ಮೊದಲ ದಿನ ಬಿಡುಗಡೆಯಾಗಿದೆ. ಇದು ಪ್ರಜ್ವಲ್ ನಟನೆಯ 40ನೇ ಸಿನಿಮಾ. ಈಗಾಲೇ ಪ್ರಜ್ವಲ್ ಬಳಿ ‘ಮಾಫಿಯಾ’ ಸೇರಿದಂತೆ ಇನ್ನೂ ಹೆಸರಿಡದ ಎರಡು ಚಿತ್ರಗಳಿವೆ. ಇದೀಗ 40ನೇ ಸಿನಿಮಾ ಅನೌನ್ಸ್ ಆಗಿದೆ. ಸದ್ಯ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಪ್ರಜ್ವಲ್ ಹೊಸ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಭರ್ಜರಿ ಆಗಿದ್ದು ಕುತೂಹಲ ಹೆಚ್ಚಿಸಿದೆ. ಪ್ರಜ್ವಲ್ ಸಿನಿ ಜೀವನದಲ್ಲೇ ಇದೊಂದು ವಿಭಿನ್ನವಾದ ಸಿನಿಮಾವಾಗಲಿದೆ. ಇದುವರೆಗೂ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಅವರ 40ನೇ ಸಿನಿಮಾಗೆ ‘ಅಂಬಿ ನಿಂಗೆ ವಯಸಾಯ್ತೋ’ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಗುರುದತ್ ನಿರ್ದೇಶನದ ಎರಡನೇ ಸಿನಿಮಾವಾಗಿದೆ. ಮೊದಲ ಸಿನಿಮಾ ‘ಅಂಬಿ ನಿಂಗೆ ವಯಸಾಯ್ತೋ’ 2018 ರಲ್ಲಿ ಬಿಡುಗಡೆಯಾಗಿತ್ತು. ಬಳಿಕ ಗುರುದತ್ ಯಾವುದೇ ಸಿನಿಮಾ ಮಾಡಿರಲಿಲ್ಲ. ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ಸುಹಾಸಿನಿ ಅಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರಿಗೆ ನಿರ್ದೇಶನ ಮಾಡಿದ್ದ ಗುರು ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಎಲ್ಲಾ ಕುತೂಹಲ ಮತ್ತು ಪ್ರಶ್ನೆಗಳಿಗೆ ತೆರೆಬಿದ್ದಿದೆ.
ಸಿನಿಮಾದ ಪೋಸ್ಟರ್ ನೋಡಿದ್ದರೆ ಇದು ಕಂಬಳದ ಬಗ್ಗೆ ಇರುವ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಈ ಮೂಲಕ ಕರಾವಳಿ ಭಾಗದ ಮತ್ತೊಂದು ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರಲು ಸಜ್ಜಾಗುತ್ತಿದೆ. ಈ ಸಿನಿಮಾ ವಿಕೆ ಫಿಲ್ಮ್ಸ್ ಹಾಗೂ ಗುರುದತ್ ಗಾಣಿಗ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಗುರು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತವಿದೆ. ಅಭಿಮನ್ಯು ಸಧಾನಂದ್ ಅವರ ಕ್ಯಾಮರಾ ವರ್ಕ್ ಸಿನಿಮಾಗಿದೆ. ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಸದ್ಯದಲ್ಲೇ ಟೈಟಲ್ ಮತ್ತು ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ.