ಸಕಲೇಶಪುರ: ವಕೀಲರಾದ ಕಲ್ಪನಾ ಕೀರ್ತಿ ಅವರು ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಯಶ್ವಂತ್ ಮಾಜಿ ಕಾರ್ಯದರ್ಶಿ ಜ್ಯೋತಿ ಹಾಗೂ ಸಂಘದ ಚುನಾವಣಾ ಅಧಿಕಾರಿ ಬಿ. ಪರಮೇಶ್ವರ ವಿರುದ್ದ ಸುಳ್ಳು ಜಾತಿ ನಿಂದನೆ ದೂರು ನೀಡಿದ್ದಾರೆ ಎಂದು ಆರೋಪಿಸಿ ಸೋಮವಾರ ವಕೀಲರು ನ್ಯಾಯಾಲಯದ ಮುಂದೆ ಧರಣಿ ನಡೆಸಿದರು.
ಈ ಮೂವರ ವಿರುದ್ದ ಕಲ್ಪನಾ ಪಟ್ಟಣ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದರೂ, ಪೊಲೀಸರು ಪರಿಶೀಲಿಸದೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಮೂವರಿಗೆ ಜಾಮೀನು ದೊರೆಯುವ ಬರೆಗೂ ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಹಿಷ್ಕರಿಸಲಾಗುವುದು ಎಂದು ವಕೀಲರು ನ್ಯಾಯಾಲಯದ ಮುಂದೆ ಶಾಮಿಯಾನ ಹಾಕಿಕೊಂಡು ಧರಣಿ ನಡೆಸಿದರು.
ಸುಳ್ಳು ದೂರು ನೀಡಿರುವ ವಕೀಲರಾದ ಕಲ್ಪನಾ 2017–18ನೇ ಸಾಲಿನಲ್ಲಿ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ದಿಸಿ ಪರಾಭವಗೊಂಡಿದ್ದು. ಆ ಸಂದರ್ಭದಲ್ಲಿ ಸಂಘದ ವಿರುದ್ದವೇ ಸಿವಿಲ್ ದಾವಾ ಹೂಡಿದ್ದರು. ಕಳೆದ ಮೂರು ವರ್ಷಗಳಿಂದ ಸಂಘದ ಸದಸ್ಯರಾಗಿಲ್ಲ. ಆದರೂ ಸಂಘದ ಪ್ರಸಕ್ತ ಸಾಲಿನ ಚುನಾವಣೆ ನಿಲ್ಲಿಸಬೇಕು ಎಂಬ ದುರುದ್ದೇಶದಿಂದ ಮೂವರು ವಕೀಲರ ಮೇಲೆ ಜಾತಿ ನಿಂದನೆಯ ಸುಳ್ಳು ದೂರು ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಲ್ಪನಾ ಹೇಳಿಕೆ: ನಾನು ಪರಿಶಿಷ್ಟ ಜಾತಿಗೆ ಸೇರಿದ ಒಂದೇ ಕಾರಣಕ್ಕೆ ಸಂಘದಿಂದ ನನ್ನನ್ನು ದೂರ ಇಟ್ಟಿದ್ದಾರೆ. ಚುನಾವಣಾ ಚರ್ಚೆಯ ಸಭೆಯಿಂದ ಹೊರಗೆ ಕಳಿಸಿ ಅವಮಾನ ಮಾಡಿದ್ದಾರೆ ಆದ್ದರಿಂದ ಮೂವರ ವಿರುದ್ದ ದೂರು ನೀಡಿದ್ದೇನೆ. ಕಲ್ಪನಾ ಕೀರ್ತಿ