ಹಾಸನ: ಭಾರೀ ಮಳೆ ಕಾರಣದಿಂದ ಮಡಿಕೇರಿ ಸಂಪಾಜೆ ನಡುವಿನ
ಕೊಯನಾಡು ಸಮೀಪ ರಸ್ತೆ ಬಿರುಕು ಬಿಟ್ಟಿದ್ದು, ಸದರಿ ರಸ್ತೆಯಲ್ಲಿ ಲಘು ವಾಹನ ಸಂಚಾರ ಹೊರತು ಪಡಿಸಿ ಉಳಿದ ವಾಹನ ಸಂಚಾರಕ್ಕೆ ಸುರಕ್ಷಿತೆ ಇಲ್ಲದ ಕಾರಣ ಬೆಂಗಳೂರಿನಿಂದ ಮಂಗಳೂರಿಗೆ ತಲುಪುವ ವಾಹನಗಳ ಮಾರ್ಗ ಸ್ಥಗಿತವಾಗಿದೆ.
ಈ ಹಿನ್ನೆಲೆಯಲ್ಲಿ
ಸಕಲೇಶಪುರ ತಾಲೂಕು ಮಾರನಹಳ್ಳಿ-ದೋಣಿಗಾಲ್ ನಡುವಿನ ಶಿರಾಡಿಮಾರ್ಗದ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಈ ಕುರಿತು ಗುರುವಾರ ಹೊಸ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಆರ್.ಗಿರೀಶ್, ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರು ಸಂಚರಿಸುವ ಖಾಸಗಿ ಮತ್ತು
ಸರ್ಕಾರಿ ಬಸ್‌ಗಳು, ರಾಜಹಂಸ, ಐರಾವತ, ಅಂಬಾರಿ, ಡ್ರೀಮ್ ಕ್ಲಾಸ್ ಸ್ಲೀಪರ್, ನಾನ್ ಎಸಿ ಸ್ಪೀಪರ್, ಸ್ಕ್ಯಾನಿಯಾ ಮತ್ತು ಮಲ್ಟಿ ಆಕ್ಸೆಲ್ ವೋಲ್ವೋ ವಾಹನಗಳು ಓಡಾಡಬಹುದು ಎಂದು ತಿಳಿಸಿದ್ದಾರೆ.
ಮೇಲ್ಕಂಡ ವಾಹನಗಳು ಹಾಗೂ ತುರ್ತು ವಾಹನ ಹೊರತು ಪಡಿಸಿ ಇತರೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ.
ಒಂದು ವೇಳೆ ಮಳೆ ಹೆಚ್ಚಾದರೆ
ಪೊಲೀಸ್ ಇಲಾಖೆಯವರು ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲು ಸೂಕ್ತ ಕ್ರಮವಹಿಸಲು ತಿಳಿಸಿದ್ದಾರೆ.
ಈ ಆದೇಶದ ಅನ್ವಯ ಮೇಲ್ಕಂಡ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಸದರಿ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಿಬ್ಬಂದಿ ನೇಮಕ ಮಾಡುವಂತೆ ಎಸ್ಪಿ ಅವರಿಗೆ ನಿರ್ದೇಶನ ನೀಡಿದ್ದಾರೆ.
ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ವಾಹನ ಸಂಚಾರಕ್ಕಾಗಿ ಅವಶ್ಯವಿರುವ
ಸೂಚನಾ ಫಲಕ ಅಳವಡಿಸಲು ಮತ್ತು ಸಂಚಾರ ದಟ್ಟಣೆ ಆಗದಂತೆ ನಿಯಂತ್ರಿಸಲು ಅವಶ್ಯವಿರುವ ಚೆಕ್ ಪೋಸ್ಟ್ ನಿರ್ಮಿಸಲು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲು ತಿಳಿಸಿದ್ದಾರೆ.
ರಾಷ್ಟಿಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮತ್ತು ಪಿಐಯು ಯೋಜನಾ ನಿರ್ದೇಶಕರನ್ನು ರಸ್ತೆ ಸಂಚಾರದ ತಾಂತ್ರಿಕ ವ್ಯವಸ್ಥೆಯ ಜವಾಬ್ದಾರಿ ವಹಿಸಲಾಗಿದೆ. ಜೋರು ಮಳೆಗೆ ದೋಣಿಗಾಲ್ ಬಳಿ ಕೆಲ ದಿನಗಳ ಹಿಂದೆ ಹೆದ್ದಾರಿ ಕುಸಿದಿದ್ದರಿಂದ ಮೊದಲು ಎಲ್ಲಾ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ನಂತರ
ಅಗತ್ಯ ವಾಹನಗಳಿಗೆ ಹಗಲು ವೇಳೆ ಸಂಚರಿಸಲು ಅನುಮತಿ ನೀಡಲಾಗಿತ್ತು. ಇದೀಗ ರಾತ್ರಿ ವೇಳೆಯೂ ಅವಕಾಶ ನೀಡಿರುವುದರಿಂದ ದಿನದ 24 ಗಂಟೆಯೂ ಅಗತ್ಯ ವಾಹನ ಓಡಾಡಬಹುದಾಗಿದೆ.