ಅಂಗಾಂಗ ದಾನಮಾಡಿ
ಜೀವ ಸಾರ್ಥಕತೆ ಮೆರೆದ ಉಮೇಶ್ ಹರ್ಷಿತಾ ದಂಪತಿಗಳು…

0

ಹಾಸನ / ಸಕಲೇಶಪುರ : “ಜಗತ್ತಿನಲ್ಲಿ ಇನ್ನೂ ಮಳೆ ಬೆಳೆ ಚೆನ್ನಾಗಿ ಆಗ್ತಾ ಇದೆ ಅಂದ್ರೆ, ದಾನ ಧರ್ಮ ಮಾಡೊ ಜನ ಭೂಮಿ ಮೇಲೆ ಇದ್ದಾರೆ” ಈ ಮಾತನ್ನ ಎಲ್ಲರೂ ಕೇಳಿರ್ತೀವಿ. ಧರ್ಮಕ್ಕೆ ಅದರದ್ದೆ ಆದ ವ್ಯಾಖ್ಯಾನ ಇದೆ, ಅದು ಈಗ್ಲೂ ವಾದ ವಿವಾದದಲ್ಲೆ ಸಾಗ್ತಿದೆ. ದಾನ ಮಾತ್ರ ನಿರ್ವಿವಾದವಾಗಿ ಅರ್ಥ ಪಡೆದುಕೊಂಡಿದೆ. ನಾವು ಮನಸ್ಪೂರ್ತಿಯಾಗಿ ಏನೇ ಕೊಟ್ಟರೂ ಅದು ದಾನವೇ. ಆದರೆ ಯಾವ ದಾನ ದೊಡ್ಡದು? ಶೈಕ್ಷಣಿಕ ಸಂಸ್ಥೆಯ ಕ್ಷೇತ್ರದಲ್ಲಿ ಹೇಳುವುದು “ಎಲ್ಲಾ ದಾನಕ್ಕಿಂತ ವಿದ್ಯಾ ದಾನ ಶ್ರೇಷ್ಠ”. ದಾಸೋಹ ನೆಡೆಯುವ ಧರ್ಮ ಕ್ಷೇತ್ರಗಳಲ್ಲಿ ಕೇಳುವುದು “ಅನ್ನ ದಾನಕ್ಕಿಂತ ಮಿಗಿಲಾದ ದಾನವಿಲ್ಲ”. ಮದುವೆ ಆಮಂತ್ರಣ ಕೊಡಲು ಹೋದ ಕನ್ಯೆಯ ತಂದೆಗೆ ಹೇಳುವರು “ನೂರು ದೇವಸ್ಥಾನವನ್ನು ಕಟ್ಟಿಸಿದ ಪುಣ್ಯ ಒಂದು ಕನ್ಯಾ ದಾನಕ್ಕೆ ಸಮ”. ಕಷ್ಟದ ಸಮಯದಲ್ಲಿ ದಾನ ಕೊಡುವವರ ಮುಂದೆ ಹೇಳುತ್ತಾರೆ “ಕಷ್ಟಕಾಲದಲ್ಲಿ ಕೊಡುವ ದಾನ ಕೋಟಿ ದಾನಕ್ಕಿಂತ ಮಿಗಿಲು”. ಹೀಗೆ ಕೊಡುವವರು, ಪಡೆಯುವವರು, ಸ್ಥಳ ಮತ್ತು ಸಮಯದ ಪ್ರಕಾರ ಯಾವ ದಾನ ಶ್ರೇಷ್ಠ ಎನ್ನುವುದು ನಿರ್ಧಾರವಾಗುತ್ತದೆ. ಪಡೆಯುವ ಮನಸ್ಸಿಗೆ ಘಾಸಿಯಾಗದಂತೆ, ನೀಡುವ ಮನಸ್ಸು ನಿರ್ಮಲವಾಗಿದ್ದರೆ ಅದೆಲ್ಲವೂ ಶ್ರೇಷ್ಠ ದಾನವೆ.
ಇಂದಿನ ತಂತ್ರಜ್ಞಾನ ಯುಗದಲ್ಲಿ ಆರೋಗ್ಯ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ ಇಂಥ ಸಂದರ್ಭದಲ್ಲಿ ಅಂಗಾಂಗಗಳ ಕೊರತೆಯಿಂದ ಹಲವಾರು ಜನ ಅಪಘಸಾವಿರವಾಗಲಿಿದಾಗ ನರಳುತ್ತಿರುತ್ತಾರೆ ಅಂತವರಿಗೆ ಅಂಗಾಂಗ ದಾನವೇ ಇಂದು ಶ್ರೇಷ್ಠವೆನಿಸುತ್ತಿದೆ. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ನರಳುತ್ತಿದ್ದ ಹರೀಶ್ ಇರಬಹುದು ಸಂಚಾರಿ ವಿಜಯ್ ಇರಬಹುದು ಅವರ ಸೇವಾ ಕಾರ್ಯದಿಂದ ನಮ್ಮೆಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ.
ದೇಶದಲ್ಲಿ ವಿವಿಧ ಅಂಗಾಂಗಗಳ ಕೊರತೆಯಿಂದ ಸಾಯುತ್ತಿರುವವರ ಪ್ರಮಾಣ 4 ಲಕ್ಷಕ್ಕೂ ಅಧಿಕ. ಮತ್ತೊಂದೆಡೆ ಅಂಗಾಂಗ ದಾನಕ್ಕೆ ಮೂಲವಾದ ಮೆದುಳು ಸಾವು (ಬ್ರೇನ್ ಡೆತ್) ಕೂಡ ದೇಶದಲ್ಲೇ ಹೆಚ್ಚು. ಆದರೆ, ಅಂಗಾಂಗ ದಾನದ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಮತ್ತು ಮೌಢ್ಯದಿಂದ ದೇಹವು ಯಾವುದೇ ಬಗೆಯ ಪ್ರಯೋಜನಕ್ಕೆ ಒಳಗಾಗದೇ ಮಣ್ಣು, ಬೆಂಕಿಯಲ್ಲಿ ಲೀನವಾಗುತ್ತಿದೆ.
ದೇಶದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಸುಮಾರು ಶೇ 0.7ರಷ್ಟು ಮಂದಿ ಮೆದುಳು ಸಾವಿಗೆ ಒಳಗಾಗುತ್ತಿದ್ದಾರೆ. ಆದರೆ, ಈವರೆಗೆ ಶೇ 1 ರಷ್ಟು ಪ್ರಮಾಣದಲ್ಲಿ ಕೂಡ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗಿಲ್ಲ. ಸಕಲೇಶಪುರದ ಆದರ್ಶ ದಂಪತಿಗಳು ಇದನ್ನು ಸಾಧ್ಯ ಮಾಡಿದ್ದಾರೆ.
ಸಕಲೇಶಪುರ ನಗರದ ಬಿಜೆಪಿ ಘಟಕದ ಅಧ್ಯಕ್ಷರು,ಹಿಂದೂ ಮುಕ್ತಿದಾಮ ಕಾರ್ಯದರ್ಶಿಗಳು,ಗುತ್ತಿಗೆದಾರರ ಸಂಘದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿರುವ ಉಮೇಶ್ ರವರ ಪತ್ನಿ ಹರ್ಷಿತಾರವರು ಇಂಜಿನಿಯರ್ ಪದವೀಧರೆ,ಹಲವಾರು ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಹರ್ಷಿತಾರವರಿಗೆ ಅನಿಸಿತು,ನಾವು ಬದುಕಿದ್ದಾಗಲೇ ಜೀವಸಾರ್ಥಕತೆ ಮೆರೆಯಬೇಕು ನಮ್ಮ ಅಂಗಾಂಗಗಳನ್ನು ದಾನಮಾಡಿ ಹಲವರಿಗೆ ಪ್ರೇರಣೆಯಾಗಬೇಕು ಎಂದು ನಿರ್ಧರಿಸಿ ಪತಿಗೂ ತಿಳಿಸಿದೆ ತಾವೇ ಸ್ವಯಂ ಜೀವಸಾರ್ಥಕತೆ ಫೌಂಡೇಶನ್ ನಲ್ಲಿ ಸರ್ವಂಗಗಳನ್ನು ದಾನ ಮಾಡುವುದಾಗಿ ರಿಜಿಸ್ಟರ್ ಮಾಡಿಸುತ್ತಾರೆ.ಸಂಜೆ ಮನೆಗೆ ಬಂದ ಪತಿಗೆ ವಿಷಯ ತಿಳಿಸುತ್ತಾರೆ ತಕ್ಷಣ ಪತ್ನಿಯ ಆದರ್ಶವನ್ನು ನೆನೆದು ಹೆಮ್ಮೆಯೆನಿಸಿದ ಉಮೇಶ್ ರವರು ಕೂಡ ತಕ್ಷಣ ಆನ್ಲೈನ್ನಲ್ಲಿ ಸರ್ವಾಂಗ ದಾನಗಳ ರಿಜಿಸ್ಟರ್ ಮಾಡಿಸುತ್ತಾರೆ.
ದೂರವಾಣಿ ಮೂಲಕ ದಂಪತಿಗಳನ್ನು ಸಂಪರ್ಕಿಸಿದಾಗ ಭಾವನಾತ್ಮಕವಾಗಿ ಹೇಳಿದರು ನಾನು ನಾನಾಗಿ ಬದುಕುವುದಕ್ಕಿಂತ, ನಾವಾಗಿ ಬದುಕಬೇಕೆಂಬುದು ನಮ್ಮಿಬ್ಬರ ಹಂಬಲ, ಈ ಜಗತ್ತಿನಲ್ಲಿ ಹುಟ್ಟಿರುವ ಪ್ರತಿಯೊಬ್ಬ ಮನುಷ್ಯ ಕೂಡ ನಮ್ಮ ಕುಟುಂಬ ಸದಸ್ಯರು ಎಂಬ ಭಾವನೆ ಹಾಗಾಗಿ, ಮನುಷ್ಯನಿಗೆ ನೆರವಾಗ ಬೇಕಾದ್ದು ಮನುಷ್ಯ ಧರ್ಮ ಎಂದರು,ಇವರು ನಮ್ಮವರು ನಮ್ಮ ಊರಿನವರು ನಮ್ಮ ಮನೆಯವರು ಎಂದೆನಿಸಿತು.
ಇದು ಹಲವರಿಗೆ ಮಾದರಿಯಾಗಲಿ ಈ ರೀತಿಯ ಆದರ್ಶ ದಂಪತಿಗಳು ಪ್ರೀತಿಸಿ ಮದುವೆಯಾಗಿ ಸರ್ವಾಂಗ ದಾನದ ಮುಖಾಂತರ ಸರ್ವರಲ್ಲೂ ಪ್ರೀತಿ ಪಾತ್ರರಾಗಿದ್ದಾರೆ ಇಂಥವರ ಕುಟುಂಬ ಸಾವಿರ ಸಾವಿರವಾಗಲಿ

ಮುಖ್ಯವಾಗಿ….
ಬಿದ್ದು ಹೋಗುವ ನಶ್ವರ ಶರೀರ
ಅಂಗಾಗ ದಾನದಿಂದ ಅದು ಅಮರ.
ಉಸಿರು ಹೋಗುವ ಮುನ್ನ ಮಾಡಿಬಿಡು
ಅಂಗಾಗ ದಾನ.
ಸ್ವ ಇಚ್ಛೆಯಿಂದ ಕೊಟ್ಟ ಈ ದಾನ
ಕೊಟ್ಟೀತು ಮನಕೆ ಸಮಾಧಾನ.

ಯಡೇಹಳ್ಳಿ “ಆರ್”ಮಂಜುನಾಥ್.

LEAVE A REPLY

Please enter your comment!
Please enter your name here