ಹಾಸನ : ತಿಪಟೂರು ನಿಂದ ಶಿವಮೊಗ್ಗಕ್ಕೆ ಹೊರಟ ಬಸ್ ಸಂಖ್ಯೆ KA14E0021 ರಲ್ಲಿ ಕಳೆದುಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಒಬ್ಬರ ಪರ್ಸ್ ನಲ್ಲಿದ್ದ ಸ್ಮಾರ್ಟ್ ಫೋನ್, ಪಾನ್ ಕಾರ್ಡ್ ಮತ್ತು 3 ಎಟಿಎಂ ಕಾರ್ಡ್ಗಳು, ಬಸ್ ಪಾಸ್, 600 ರೂ ಹಣವನ್ನು ಬಸ್ ಹಿಂದಿರಿಗಿ ಬರುವ ಪ್ರಯಾಣದ ಸಂಧರ್ಭದಲ್ಲಿ ಕಂಡಕ್ಟರ್ ಒಬ್ಬರು ಅರಸೀಕೆರೆ ಬಸ್ ಸ್ಟಾಪ್ ಗೆ ತಂದು ಕೊಟ್ಟ ಪ್ರಾಮಾಣಿಕತೆಯ ಅಪರೂಪದ ಸನ್ನಿವೇಶ ನಡೆದಿದೆ.
ಕಲ್ಪತರು ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ ಕವಿತಾ ತಾನು ಬಸ್ ಹತ್ತಿದ್ದ ನಂತರ ತನ್ನ ಪರ್ಸ್ ನ್ನು ಮೇಲಿನ ಕ್ಯಾರಿಯರ್ ನಲ್ಲಿದ್ದ ತನ್ನ ಏರ್ಬ್ಯಾಗ್ ಗೆ ಇಡುವಾಗ ಸರಿಯಾಗಿ ಗಮನಿಸದೆ ಮಾಡಿದ ಎಡವಟ್ಟಿನಿಂದಾಗಿ ಅದು ಕ್ಯಾರಿಯರ್ ನಲ್ಲೇ ಉಳಿದಿತ್ತು. ಮದ್ಯಾಹ್ನ ಸುಮಾರು 2.15ರ ವೇಳೆಗೆ ಅರಸೀಕೆರೆ ಬಸ್ ಸ್ಟಾಪ್ ನಲ್ಲಿ ಇಳಿದ ನಂತರ ಏರ್ಬ್ಯಾಗ್ ನಲ್ಲಿ ಪರ್ಸ್ ಇಲ್ಲದಿದ್ದಾಗ ಆಕೆ ತನ್ನ ತಮ್ಮ ಮನೋಜ್ ಮತ್ತು ಶಿಕ್ಷಕ ಜೆ.ಎಲ್. ಲೀಲಾಮಹೇಶ್ವರ್ ಅವರೊಂದಿಗೆ ಅಲ್ಲಿನ ಟಿಸಿಗಳಿಗೆ ಈ ಬಗ್ಗೆ ವಿನಂತಿಸಿದ್ದಾರೆ.
ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಈ ವಿಚಾರ ತಲುಪಿ ಅದೇ ಬಸ್ ಪುನ ಹಿಂದಿರಿಗಿ ಬೆಂಗಳೂರು ಕಡೆಗೆ ಹೊರಟು ಅರಸೀಕೆರೆಗೆ ಬರುವಾಗ ರಾತ್ರಿ 11 ಗಂಟೆ ಯಾಗಿದ್ದು ಪರ್ಸ್ ಮತ್ತು ಅದರಲ್ಲಿನ ವಸ್ತುಗಳನ್ನು ಕಂಡಕ್ಟರ್ ಅರುಣ್ ಕುಮಾರ್ ಎಸ್. ಪಿ, ಬಿಲ್ಲೆ ಸಂಖ್ಯೆ 2817, ಶಿವಮೊಗ್ಗ ಘಟಕದವರು ಸ್ಥಳೀಯರಾದ ಶಿಕ್ಷಕ ಜೆ.ಎಲ್. ಲೀಲಾಮಹೇಶ್ವರ್ ಗೆ ಟಿಸಿಗಳಾದ ಪಾಟೀಲ್ ಮತ್ತು ಧರ್ಮೇಗೌಡರ ಮೂಲಕ ಅರಸೀಕೆರೆಯಲ್ಲಿ ಹಿಂದಿರುಗಿಸಿರುತ್ತಾರೆ.
3 ತಿಂಗಳ ಹಿಂದೆ ಇದೇ ಕಂಡಕ್ಟರ್ ಪ್ರಯಾಣ ಸಂಧರ್ಭದಲ್ಲಿ ಸಿಕ್ಕಿದ್ದ 22000 ರೂ ಹಣವನ್ನು ವಾರಸುದಾರರಿಗೆ ತಲುಪಿಸಿ ಇಲಾಖೆಯಿಂದ ಪ್ರಶಂಸೆ ಪಡೆದಿದ್ದಾರೆ.