ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧ ಎರಡು ಗುಂಪಿನ ನಡುವೆ ಭೂ ವಿವಾದ ತೀವ್ರ ತಾರಕಕ್ಕೆ ಏರಿದ ಪರಿಣಾಮ ಸ್ಥಳಕ್ಕೆ ಶಾಸಕ ಹೆಚ್.ಕೆ.ಸುರೇಶ್, ತಹಶೀಲ್ದಾರ್ ಎಂ.ಮಮತ, ಸಿಪಿಐ ಶ್ರೀಕಾಂತ ಭೇಟಿ ನೀಡಿ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿ, ಯಾವುದೇ ಅಶಾಂತಿ ಸೃಷ್ಟಿಸಬಾರದು ಎಂದು ಎಚ್ಚರಿಕೆ ನೀಡಿದ ಘಟನೆ ಬೇಲೂರು ತಾಲ್ಲೂಕಿನ ತಟ್ಟೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲ್ಲೂಕಿನ ತಟ್ಟೆಹಳ್ಳಿ ಗ್ರಾಮಕ್ಕೆ ಒಳಪಟ್ಟ ಸರ್ವೆ ನಂ ೪೭, ೫೧, ೫೩ ರಲ್ಲಿ ಸರಿ ಸುಮಾರು ೬೪ ಎಕ್ಕರೆ ೩೮. ಗುಂಟೆ ಭೂಮಿ ಸರ್ಕಾರಕ್ಕೆ ಸೇರಿದ ಕಾರಣದಿಂದ ಈ ಹಿಂದೆ ಗ್ರಾಮಸ್ಥರು ಸೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಲಿಂಗಾಯತ ಇನ್ನಿತರ ಸಮುದಾಯಕ್ಕೆ ತಲಾ ೧೮ ಗುಂಟೆಯಂತೆ ಹಂಚಿಕೆ ಮಾಡಿಕೊಂಡಿದ್ದರು. ಅದರೆ ಬಹುತೇಕರು ಭೂಮಿ ಹಾಳು ಬಿಟ್ಟ ಕಾರಣದಿಂದ ಇನ್ನೊಂದು ಪಂಗಡ ರಾತ್ರೋರಾತ್ರಿ ಹಂಚಿಕೆ ಮಾಡಿದ ಭೂಮಿ ಉಳುಮೆ ಮಾಡಿ ತೆಂಗಿನ ಸಸಿ ನೆಟ್ಟ ಕಾರಣದಿಂದ ಗ್ರಾಮದಲ್ಲಿ ಪರಿಸ್ಥಿತಿ ತಾರಕಕ್ಕೆ ಏರಿ, ಬೇಲೂರು ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ ನಡೆದ ಬಳಿಕ ಇಂದು ಸ್ಥಳಕ್ಕೆ ಶಾಸಕ ಹೆಚ್.ಕೆ.ಸುರೇಶ್, ತಹಶೀಲ್ದಾರ್ ಎಂ.ಮಮತ, ಸಿಪಿಐ ಶ್ರೀಕಾಂತ್ ಸೇರಿದಂತೆ ಅಧಿಕಾರಿಗಳ ತಂಡ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ತಾತ್ಕಾಲಿಕವಾಗಿ ಸಫಲಾರಾದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಹೆಚ್.ಕೆ.ಸುರೇಶ್, ಸರ್ಕಾರಕ್ಕೆ ಒಳಪಟ್ಟ ಭೂಮಿಯನ್ನು ಗ್ರಾಮಸ್ಥರು ಒಟ್ಟಾಗಿ ಸೇರಿ ಹಂಚಿಕೆ ಮಾಡಿಕೊಂಡಿದ್ದಾರೆ. ಅದರೆ ಗ್ರಾಮದಲ್ಲಿ ಗೊಂದಲ ಸೃಷ್ಟಿಯಾಗಿದೆ. ಈಗಾಗಲೇ ೬೪ ಎಕ್ಕರೆಯಲ್ಲಿ ೭ ಎಕರೆ ಆಶ್ರಯ ಮನೆ ನಿವೇಶನಕ್ಕೆ ಮೀಸಲಿಡಲಾಗಿದೆ. ಉಳಿದ ೫೨ ಎಕ್ಕರೆಗೆ ೫೨ ಮಂದಿ ಬಗರ್ ಹುಕ್ಕಂ ಸಾಗುವಳಿ ಅರ್ಜಿ ಸಲ್ಲಿಸಿದ್ದು, ಎರಡು ಗುಂಪುಗಳು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮುಂದಾಗಬೇಕಿದೆ. ತಾಲ್ಲೂಕು ಆಡಳಿತದಿಂದ ತಹಶೀಲ್ದಾರ್ ರವರು ಶೀಘ್ರವೇ ಈ ಸರ್ಕಾರಿ ಭೂಮಿಯನ್ನು ವಶ ಪಡಿಸಿಕೊಂಡು ಕಾನೂನು ರೀತಿಯಲ್ಲಿ ಸರ್ವೆ ನಡೆಸಿ ಜಾಗ ಗುರುತಿಸಬೇಕಿದೆ. ಬಳಿಕ ಬಗರ್ ಹುಕ್ಕಂ ಅರ್ಜಿ ಸಲ್ಲಿಸಿದವರಿಗೆ ಪರಿಶೀಲನೆ ನಡೆಸಿ ಕಾನೂನು ಪ್ರಕಾರ ಭೂಮಿಯನ್ನು ಹಂಚಿಕೆ ಮಾಡುವ ಹಿನ್ನೆಲೆಯಲ್ಲಿ ಯಾರು ಕೂಡ ಜಮೀನಿಗೆ ಪ್ರವೇಶ ಮಾಡಬಾರದು, ವೈಯಕ್ತಿಕ ನಿಂದನೆಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ತಹಶೀಲ್ದಾರ್ ಎಂ.ಮಮತ ಮಾತನಾಡಿ, ತಟ್ಟೆಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಗೊಂದಲ ಮತ್ತು ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯ ಸಮ್ಮತವಾಗಿ ಈಗಾಗಲೇ ಶಾಸಕರು ಮಾತನಾಡಿದ್ದು, ಗ್ರಾಮಸ್ಥರು ಗೊಂದಲಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಕಾಣದ ಕೈಗಳ ಮಾತು ಕೇಳಿ ಗೊಂದಲ ಸೃಷ್ಟಿಗೆ ಮುಂದಾದರೆ ನಿಜಕ್ಕೂ ಕಾನೂನು ಕ್ರಮ ಕೈಗೊಳ್ಳಲು ತಾಲ್ಲೂಕು ಆಡಳಿತ ಮೀನಾ ಮೇಷ ಎಣಿಸುವುದಿಲ್ಲ, ಬಗರ್ ಹುಕುಂ ಸಮಿತಿ ರಚನೆಯಾದ ಬಳಿಕ ನಾವುಗಳು ೫೨ ಅರ್ಜಿಯನ್ನು ಸಭೆಯ ಮುಂದಿಟ್ಟು ಅರ್ಹರಿಗೆ ಭೂಮಿ ನೀಡಲಾಗುತ್ತದೆ ಎಂದರು