ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ಬರುವ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ವೀಕ್ಷಿಸಲು ರೈಲ್ವೆ ಪ್ರಯಾಣಿಕರು ಹಾತೊರೆಯುವುದುಂಟು. ಅದಕ್ಕಾಗಿ ಕಿಟಕಿ ಪಕ್ಕದಲ್ಲಿ ಸೀಟು ಹಿಡಿಯಲು, ಬಾಗಿಲಲ್ಲಿ ನಿಂತು ನೋಡಲು ಕಷ್ಟ ಪಡುತ್ತಾರೆ. ಆದರೆ ಈಗ ರೈಲು ಕೋಚ್ ಅನ್ನೇ ಪಶ್ಚಿಮ ಘಟ್ಟಗಳ ಸೌಂದರ್ಯ ವೀಕ್ಷಣೆಗೆ ಅನುಕೂಲಕರವಾಗಿ ರೂಪಿಸಲಾಗಿದೆ. ವಿಸ್ಟಾಡೋಮ್ ಕೋಚ್ ಎಂದು ಕರೆಯಲಾಗುವ ಈ ಕೋಚ್ ಗಳನ್ನು ಬೆಂಗಳೂರು-ಮಂಗಳೂರು ರೈಲಿಗೆ ಜೋಡಿಸಲಾಗಿದೆ. ಈ ಕೋಚ್ ಗಳಿರುವ ರೈಲು ಇಂದಿನಿಂದ ಆರಂಭವಾಗಿದೆ.
ಭಾನುವಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ರೈಲಿಗೆ ಚಾಲನೆ ನೀಡಿದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಸೇವೆ ಆರಂಭವಾಗಿದೆ.ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಿರುವ ರೈಲು ಸಂಚಾರ ಆರಂಭಿಸಿತು.
ಮಂಗಳೂರು-ಯಶವಂತಪುರ ನಡುವೆ ಹಗಲು ರೈಲು (06540/06539) ವಿಸ್ಟಾಡಾಮ್ ಕೋಚ್ ಹೊಂದಿದೆ.ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯವಿದೆ. ಈ ಬೋಗಿಗಳು ಗಾಜಿನ ಮೇಲ್ಛಾವಣಿಯನ್ನು ಹೊಂದಿದ್ದು, ಸೀಟುಗಳು 180 ಡಿಗ್ರಿ ತಿರುಗಲಿವೆ. ರೈಲಿನಲ್ಲಿಯೇ ಕುಳಿತು ಜನರು ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ.ಅಗಲವಾದ ದೊಡ್ಡ ಕಿಟಕಿಗಳು, ಗಾಜಿನ ಮೇಲ್ಛಾವಣಿ ಹೊಂದಿರುವ ವಿಸ್ಟಾಡಾಮ್ ಕೋಚ್ ರೈಲು ಬೋಗಿ ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯದ ಸ್ಪಷ್ಟವಾದ ನೋಟವನ್ನು ನೀಡುತ್ತದೆ.
ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್‌ಎಚ್‌ಬಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್‌ಫಾರ್ಮ್ /ತಂತ್ರಜ್ಞಾನ)ನಲ್ಲಿ ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದ್ದು, ಇದು ಬೇಸಿಗೆಯಲ್ಲೂ ಆಕಾಶದ ಸ್ಪಷ್ಟ ನೋಟಗಳನ್ನು ನೀಡುತ್ತದೆ.ವಿಸ್ಟಾಡಾಮ್ ಕೋಚ್‌ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್‌ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್ ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಇವೆ. ಇದಲ್ಲದೆ, ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ.
ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಹಗಲು ರೈಲಿನಲ್ಲಿ ವಿಸ್ಟಾಡಾಮ್ ಕೋಚ್ ಅಳವಡಿಸಲಾಗಿದ್ದು, ಮೊದಲ ಪಯಣದಲ್ಲಿ 84 ಆಸನಗಳ ಪೈಕಿ 73 ಆಸನಗಳು ಭರ್ತಿಯಾಗಿವೆ. ಒಬ್ಬರಿಗೆ 1,600 ರೂ. ದರ ನಿಗದಿಪಡಿಸಲಾಗಿದೆ. ಸುಬ್ರಹ್ಮಣ್ಯ, ಸಕಲೇಶಪುರದ ಪಶ್ಚಿಮ ಘಟ್ಟ ಪ್ರದೇಶಗಳ ಅದ್ಭುತ ಸೌಂದರ್ಯ ನೋಡಲು ವಿಸ್ಟಾಡಾಮ್ ಕೋಚ್‌ನಲ್ಲಿ ಸಂಚಾರ ನಡೆಸಬೇಕು.