ಇನಾಫ್: ಜಾನುವಾರುಗಳ ಉತ್ಪಾದಕತೆ ಮತ್ತು ಆರೋಗ್ಯ ಮಾಹಿತಿ ಜಾಲ

0

ಹಾಸನ:- ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಇನಾಫ್ ಯೋಜನೆಯಡಿ ಜಿಲ್ಲೆಯಾದ್ಯಾಂತ ಜಾನುವಾರುಗಳಿಗೆ ಕಿವಿ ಓಲೆ ಹಾಕಿ ಆನ್ ಲೈನ್ ದಾಖಲಿಸುವ ಕಾರ್ಯಕ್ರಮ ಪ್ರಗತಿಯಲ್ಲಿದೆ.
ರಾಸುಗಳ ಉತ್ಪಾದನೆ ಮತ್ತು ಆರೋಗ್ಯದ ಸಂಪೂರ್ಣ ಮಾಹಿತಿಯನ್ನು ಗಣಕೀಕರಣಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರ ಈ ಇನಾಫ್ ಅಥವಾ ಜಾನುವಾರುಗಳ ಉತ್ಪಾದಕತೆ ಮತ್ತು ಆರೋಗ್ಯದ ಮಾಹಿತಿ ಜಾಲ ಎಂಬ ಮಹತ್ವಾಕಾಂಕ್ಷಿ ರಾಷ್ಟ್ರಿಯ ಯೋಜನೆ ರೂಪಿಸಿ ಜಾರಿಗೊಳಿಸಿದೆ.
ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ರೈತನು ಹೊಂದಿದ ಪ್ರಾಣಿಗಳ ಮಾಹಿತಿಯನ್ನು ಕಲೆಹಾಕಿ ಗಣಕೀಕರಣಗೊಳಿಸಲಾಗುತ್ತದೆ. ಗುರುತಿಗಾಗಿ ಹನ್ನೆರಡು ಅಂಕಿಗಳ ವಿಶಿಷ್ಠ ಸಂಖ್ಯೆ ಇರುವ ಕಿವಿಯೋಲೆಯನ್ನು ರಾಸುಗಳಿಗೆ ಹಾಕಲಾಗುತ್ತದೆ ಮತ್ತು ಆ ಸಂಖ್ಯೆಯ ಸಹಿತ ಪ್ರಾಣಿಯ ಎಲ್ಲಾ ಮಾಹಿತಿಯನ್ನು ಇನಾಫ್ ಪೋರ್ಟಲ್‍ನಲ್ಲಿ ದಾಖಿಸಲಾಗುತ್ತದೆ.
ರೈತರು ಹೊಂದಿರುವ ಜಾನುವಾರುಗಳ ಸಂಖ್ಯೆ, ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ, ವಿಳಾಸಗಳನ್ನು ಕಲೆಹಾಕಿ ಗಣಕೀಕರಣಗೊಳಿಸಲಾಗುವುದು. ಈ ಯೋಜನೆಯಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಾಲು ಉತ್ಪಾದನೆ, ತಳಿ ಸಂವರ್ಧನೆ, ಆರೋಗ್ಯ ನಿರ್ವಹಣೆ, ರೋಗೋದ್ರೇಕ ಆಹಾರ ಪದ್ಧತಿ ಮತ್ತು ಒಟ್ಟಾರೆ ಹೈನುಗಾರಿಕೆಯ ಅಭಿವೃದ್ಧಿಯ ಪ್ರಗತಿಯನ್ನು ಕಾಣಬಹುದಾಗಿದೆ.
ನಮ್ಮ ಆಧಾರ್ ಸಂಖ್ಯೆಯು ನಾವು ಪಡೆಯುವ ಸವಲತ್ತುಗಳಿಗೆ ಮತ್ತು ನಮ್ಮ ಗುರುತು ಚೀಟಿಯಾಗಿ ಬಳಕೆಯಾಗುತ್ತಿದೆಯೋ ಅದೇ ರೀತಿ, ರಾಸುಗಳ ಕಿವಿ ಓಲೆ ಸಂಖ್ಯೆ ಕೂಡ ಮುಂದಿನ ದಿನಗಳಲ್ಲಿ ಬಳಕೆಯಾಗುವ ಸಾಧ್ಯತೆಗಳಿದ್ದು ರಾಸುಗಳ ಮಾರಾಟ, ಸಾಗಾಣಿಕೆ, ಮಾಲಿಕತ್ವ ಸಾಬೀತು, ಮರಣ ಪ್ರಮಾಣ ಪತ್ರ, ಕೃತಕ ಗರ್ಭಧಾರಣೆಯ ದಾಖಲೀಕರಣ ಮುಂತಾದ ಸಂದರ್ಭಗಳಲ್ಲಿ ಉಪಯುಕ್ತವಾಗುವುದು.
ಜಿಲ್ಲೆಯಲ್ಲಿ ಒಟ್ಟು 6.62 ಲಕ್ಷ ರಾಸುಗಳಿದ್ದು, ಈಗಾಗಲೇ ಸುಮಾರು 3.2 ಲಕ್ಷ ರಾಸುಗಳನ್ನು ಆನ್‍ಲೈನ್ ಮೂಲಕ ದಾಖಲಿಸಲಾಗಿದೆ. ಬಾಕಿ ಉಳಿದಿರುವ 3.42 ಲಕ್ಷ ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸರುವ ಕಾರ್ಯವನ್ನು ಪಶು ಸಂಗೋಪನಾ ಇಲಾಖೆಯ ಸಮರೋಪಾದಿಯಲ್ಲಿ ಕೈಗೊಂಡಿದ್ದು, ಪ್ರತಿದಿನ ಮೂರರಿಂದ ನಾಲ್ಕು ಸಾವಿರ ರಾಸುಗಳನ್ನು ದಾಖಲಿಸಲಾಗುತ್ತದೆ.
ಪಶುಸಂಗೋಪನಾ ಇಲಾಖೆಯ ಸಿಬ್ಬಂದಿ ಹಳ್ಳಿಗಳಿಗೆ ತೆರಳಿ ಕಿವಿ ಓಲೆಗಳನ್ನು ಅಳವಡಿಸುತ್ತಿದ್ದಾರೆ. ಈ ಕಾರ್ಯದಲ್ಲಿ ನಗರದ ಹಾಲು ಉತ್ಪಾದಕರ ಒಕ್ಕೂಟ ಸಹಾ ಇಲಾಖೆಯೊಂದಿಗೆ ಕೈ ಜೋಡಿಸಿದೆ.
ಹೈನುಗಾರಿಕೆ ಭಾರದ ರೈತರ ಬದುಕಿನ ಬಹಲ ಪ್ರಮುಖವಾದ ಭಾಗ ಜಾಗತಿಕ ಮಟ್ಟದಲ್ಲಿ ಭಾರತವೇ ಅತೀ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾದರೂ ಸಹಾ ನಮ್ಮ ರಾಸುಗಳ ಸರಾಸರಿ ಹಾಲಿನ ಉತ್ಪಾದನೆ ಬಹಳ ಕಡಿಮೆ. ಅದನ್ನು ವೃದ್ಧಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.
ರೈತರಿಗೆ ಹಲವು ವಿಧಗಳಲ್ಲಿ ಉಪಯುಕ್ತವಾಗಿರುವ ಈ ಯೋಜನೆಯಲ್ಲಿ ಎಲ್ಲಾ ಪಶು ಪಾಲಕರು ಪಾಲ್ಗೊಂಡು, ಓಲೆ ಹಾಕುವುದನ್ನು ನಿರಾಕರಿಸದೇ ಪಶುಪಾಲನಾ ಇಲಾಖೆಯೊಂದಿಗೆ ಸಹಕರಿಸಿ ತಮ್ಮ ರಾಸುಗಳಿಗೆ ಕಿವಿಯೋಲೆಯನ್ನು ಹಾಕಿಸಿಕೊಳ್ಳಬೇಕು.
ಸಮಗ್ರ ಜಾನುವಾರು ಸಂಪತ್ತಿನ ಮಾಹಿತಿ ಸಂಗ್ರಹಣೆಯ ಈ ರಾಷ್ಟ್ರ ವ್ಯಾಪಿ ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿಸುವಂತೆ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಕೋರಿದ್ದಾರೆ.

LEAVE A REPLY

Please enter your comment!
Please enter your name here