ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರವೊಂದಕ್ಕೆ ಸಿಲುಕಿ ಯುವತಿಯೊಬ್ಬಳು ಸಾವಿಗೀಡಾಗಿದ್ದು, ಆಕೆಯ ಕುಟುಂಬ ಮಾತ್ರವಲ್ಲದೆ ಸಹೋದ್ಯೋಗಿಗಳೆಲ್ಲರೂ ದುಃಖಿತರಾಗಿದ್ದಾರೆ. ಹಾಸನದ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಈ ದುರಂತ ಸಂಭವಿಸಿದೆ.
ಹಾಸನದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶಾಹಿ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯಾ ಮೃತಪಟ್ಟವರು. ಹೊಳೆನರಸೀಪುರ ಮೂಲದ ದೊಡ್ಡಬ್ಯಾಗತವಳ್ಳಿ ಗ್ರಾಮದ ಕಾವ್ಯ ಎಂದಿನಂತೆ ಶುಕ್ರವಾರವೂ ಕೆಲಸಕ್ಕೆ ಬಂದಿದ್ದು, ಸಣ್ಣದೊಂದು ಆಕಸ್ಮಿಕ ಆಕೆ ಜೀವವನ್ನೇ ಕಳೆದುಕೊಳ್ಳುವಂತೆ ಮಾಡಿದೆ.
ಗಾರ್ಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅಲ್ಲಿನ ಪ್ರಿಂಟಿಂಗ್ ಮಷಿನ್ ನೊಂದಕ್ಕೆ ಕಾವ್ಯಾಳ ಕೈ ಸಿಲುಕಿಕೊಂಡಿತ್ತು. ಅದು ದೇಹವನ್ನೂ ಎಳೆದುಕೊಂಡಿತ್ತು. ತಕ್ಷಣ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾವ್ಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.