ತಂಬಾಕು ಮಾರುಕಟ್ಟೆ ಮುಂದೆ ತಲೆಮೇಲೆ ಚಪ್ಪಡಿ ಕಲ್ಲು ಹೊತ್ತು ರೈತರಿಂದ ಪ್ರತಿಭಟನೆ

1

ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಬೆಲೆ ಕುಸಿತ ಮತ್ತು ಕೆಳದರ್ಜೆ ತಂಬಾಕು ಖರೀದಿಸದಿರುವುದನ್ನು ಖಂಡಿಸಿ ರೈತರು ನಡೆಸುತ್ತಿರುವ ಆಹೋರಾತ್ರಿ ಧರಣಿ ಮುಂದುವರಿದಿದ್ದು ಇಂದು ಚಪ್ಪಡಿ ಚಳವಳಿ ನಡೆಸಿ ಪ್ರತಿಭಟಿಸಿದರು.

ತಂಬಾಕಿಗೆ ಉತ್ತಮ ಬೆಲೆ ನೀಡಬೇಕು, ಕೆಳದರ್ಜೆ ಹೊಗೆಸೊಪ್ಪು ಖರೀದಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ನಿನ್ನೆಯಿಂದ ವಿವಿಧ ಸಂಘಟನೆಗಳ ಮುಖಂಡರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇಂದು ಧರಣಿನಿರತರು ತಲೆಮೇಲೆ ಚಪ್ಪಡಿ ಕಲ್ಲುಗಳನ್ನು ಹೊತ್ತು ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರ, ಸಿಎಂ ಯಡಿಯೂರಪ್ಪ, ಪಿಎಂ ನರೇಂದ್ರ ಮೋದಿ ಹಾಗೂ ತಂಬಾಕು ಮಂಡಳಿ ಮತ್ತು ಕಂಪನಿ ವರ್ತಕರ ವಿರುದ್ದ ಅಯ್ಯಯ್ಯೋ ಅನ್ಯಾಯ ಅನ್ಯಾಯ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರಪ್ರದೇಶದಲ್ಲಿ ಹೊಗೆಸೊಪ್ಪಿಗೆ ಉತ್ತಮ ದರ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ರೈತರು ಉತ್ಕೃಷ್ಟ ದರ್ಜೆಯ ತಂಬಾಕು ಉತ್ಪಾದಿಸಿದರೂ ಒಳ್ಳೆ ಬೆಲೆ ನೀಡದೇ ಬೇಕಾಬಿಟ್ಟಿ ದರ ನೀಡಲಾಗುತ್ತಿದೆ.ಆಂಧ್ರ ಮೂಲದಿಂದ ಬಂದಿರುವ ವರ್ತಕರು ಇಲ್ಲಿ ಮನಸೋ ಇಚ್ಚೆ ಬೆಲೆಗೆ ತಂಬಾಕು ಕೊಂಡು ಅನ್ಯಾಯ ಎಸಗುತ್ತಿದ್ದಾರೆ. ತಂಬಾಕು ಖರೀದಿಸಿದ ಐಟಿಸಿ ಯಂತಹ ಅನೇಕ ಕಂಪನಿಗಳು ವಿದೇಶಗಳಿಗೆ ದುಪ್ಪಟ್ಟು ಬೆಲೆ ಮಾರಾಟ ಮಾಡಿ ಕೋಟಿಗಟ್ಟಲೆ ಲಾಭ ಮಾಡಿಕೊಂಡು ದೊಡ್ಡ ಬಂಡವಾಳಶಾಹಿ ಉದ್ಯಮಿಗಳಾಗಿ ಹೊರಹೊಮ್ಮಿ ಉದ್ದಾರವಾಗುತ್ತಿವೆ. ಆದರೆ ದಶಕಗಳಿಂದ ತಂಬಾಕು ಉತ್ಪಾದಿಸಿದ ರೈತರು ಇಂದಿಗೂ ಕನಿಷ್ಠ ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ಶೋಷಣೆಗೆ ಒಳಗಾಗಿದ್ದಾರೆ.

ಇಲ್ಲಿ ಈತನಕ ಆಯ್ಕೆಯಾದ ಸ್ಥಳೀಯ ಶಾಸಕರು ಮತ್ತು ಹಾಸನ ಸಂಸದರು ರೈತರ ಕಣ್ಮರೆಸುವ ಕೆಲಸ ಮಾಡುತ್ತಿದ್ದಾರೆ ಹೊರತು ವಾಸ್ತವ ಸಮಸ್ಯೆ ಬಗೆಹರಿಸಲು ವಿಫಲವಾಗಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.ಹರಾಜು ಅಧೀಕ್ಷಕ ದಯಾನಂದ ಮಾತನಾಡಿ, ಆಂಧ್ರಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಶಾಸಕರು, ಸಂಸದರು ಸರ್ಕಾರದ ಗಮನ ಸೆಳೆದು ೩೦೦ ಕೋಟಿ ರೂ ವೆಚ್ಚದಲ್ಲಿ ಕೆಳದರ್ಜೆ ಸೊಪ್ಪು ಖರೀದಿಸುವಂತೆ ಮಾಡಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳಬೇಕು ಎಂದರು.

ಸ್ಥಳಕ್ಕೆ ಧಾವಿಸಿದ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್, ಬಿ. ಮಾರಣ್ಣ ಮಾತನಾಡಿ, ಇನ್ನು ಇವತ್ತು ದಿನದೊಳಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಬೆಳೆಗಾರರ ಬೇಡಿಕೆ ಈಡೇರಿಸುವುದಾಗಿ ಮನವೊಲಿಸಲು ಯತ್ನಿಸಿದರು. ಇದಕ್ಕೆ ಒಪ್ಪದ ರೈತರು, ಕೋವಿಡ್ ನೆಪ ಹೇಳಿ ತಂಬಾಕು ಬೆಳೆಗಾರರನ್ನು ವಂಚಿಸಲಾಗುತ್ತಿದೆ. ನಾವು ಬೆಳೆದ ತಂಬಾಕು ತಿಪ್ಪೆಗೆಸದರೂ ಪರವಾಗಿಲ್ಲ ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ, ಕೆಳದರ್ಜೆಯದನ್ನು ನಿರ್ಲಕ್ಷಿಸಲಾಗುತ್ತಿದೆ. ಸಬೂಬು ಹೇಳಿ ಗಡುವು ನೀಡುವುದನ್ನು ನಿಲ್ಲಿಸಿ ಒಂದೆರಡು ದಿನದಲ್ಲಿ ಕೆಳದರ್ಜೆ ತಂಬಾಕು ಖರೀದಿಸಿ ಬೇಡಿಕೆ ಈಡೇರಿಸುವ ಕುರಿತು ಲಿಖಿತ ಹೇಳಿಕೆ ನೀಡುವಂತೆ ಪಟ್ಟುಹಿಡಿದು ಪ್ರತಿಭಟನಾಕಾರರು ಘೋಷಣೆ ಕೂಗಲಾರಂಭಿಸಿ ಪೊಲೀಸರು ಮತ್ತು ಅಧಿಕಾರಿಗಳೊಂದಿಗೆ ಜಟಾಪಟಿ ಏರ್ಪಟ್ಟು ಕೆಲಹೊತ್ತು ಮಾತಿನ ಚಕಮಕಿ ನಡೆಸಿದರು.

ಪೊಲೀಸರು ಮಧ್ಯಪ್ರವೇಶಿಸಿ ರೈತ ಸಂಘದವರೊಂದಿಗೆ ನಿನ್ನೆ ರಾತ್ರಿ ನಡೆದ ಮಾತುಕತೆ ಪ್ರಕಾರ ಇನ್ನು ೨೦ ದಿನದೊಳಗೆ ಬೇಡಿಕೆ ಈಡೇರಿಸಲು ಕ್ರಮ ವಹಿಸುವುದಾಗಿ ಅಧಿಕಾರಿಗಳ ಅಶ್ವಾಸನೆ ಪಡೆದು ರೈತರು ಗೊಂದಲದ ನಡುವೆ ಪ್ರತಿಭಟನೆ ಹಿಂಪಡೆದರು.

1 COMMENT

LEAVE A REPLY

Please enter your comment!
Please enter your name here