ಹಾಸನ: 26 ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಮೂರು ತಿಂಗಳಿಂದ ಪೊಲೀಸರ ನಿದ್ದೆಗೆಡಿಸಿದ್ದ ಅಂತರ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಅರಸೀಕೆರೆ ಪೊಲೀಸರು 20 ಲಕ್ಷ ರೂ. ಬೆಲೆಯ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ತುರುವೆಕೇರಿ ತಾಲೂಕು ಆರ್.ಎಸ್, ಪಾಳ್ಯ ನಿವಾಸಿ ಮಹಮ್ಮದ್ ಇಬ್ರಾಹಿಂ (34) ಬಂಧಿತ. ಈತನ ವಿರುದ್ಧ ಚಿಕ್ಕಮಗಳೂರಿನ ವಿವಿಧ ಠಾಣೆಗಳಲ್ಲಿ 6, ಹಾಸನದಲ್ಲಿ 12, ತುಮಕೂರು, 5 ಹಾಗೂ ಶಿವಮೊಗ್ಗದಲ್ಲಿ 3 ಕಳ್ಳತನ ಪ್ರಕರಣ ದಾಖಲಾಗಿದೆ. ಬೈಕ್ನಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಪ್ರವಾಸ ಮಾಡುತ್ತಿದ್ದ ಈತ ಶ್ರೀಮಂತ ಮನೆಗಳಲ್ಲಿ ಕಳ್ಳತನ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ದುಷ್ಕೃತ್ಯ ನಡೆಸುತ್ತಿದ್ದ ಮಹಮ್ಮದ್ನ ಸೆರೆಗೆ ನಮ್ಮ ಸಿಬ್ಬಂದಿ ಮೂರು ತಿಂಗಳಿಂದ ಬಹಳ ಶ್ರಮ ವಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಸೆ. 1ರ ರಾತ್ರಿ ಅರಸೀಕೆರೆ ತಾಲೂಕಿನ ಚಿಕ್ಕಹೊಳಲು ಗ್ರಾಮದ ಮಹಾಲಕ್ಷ್ಮಿ ಎಂಬುವರ ಮನೆಗೆ ನುಗ್ಗಿದ್ದ ಮಹಮ್ಮದ್, ಬಲವಾದ ಆಯುಧದಿಂದ ಹಿಂಬಾಗಿಲ ಬೀಗ ಮುರಿದು ಬೀರುವಿನಲ್ಲಿಟ್ಟಿದ್ದ 123 ಗ್ರಾಂ ಚಿನ್ನಾಭರಣ ಅಪಹರಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.
ಈಗಾಗಲೇ ಶಿಕ್ಷೆ ಅನುಭವಿಸಿರುವ, ಕಳ್ಳತನದ ಸಂಶಯವಿರುವವರನ್ನು ಕರೆಸಿ ವಿಚಾರಿಸಿದಾಗ ಮಹಮ್ಮದ್ ಮೇಲೆ ಸಂಶಯ ಬಂದಿತು. ಹುಟ್ಟೂರು ಆರ್.ಎಸ್. ಪಾಳ್ಯದಲ್ಲಿ ನೆಲೆಯೂರಿದ್ದ ಈತನನ್ನು ಸಂಪರ್ಕಿಸಿ ವಿಚಾರಣೆಗೆ ಒಳಪಡಿಸಿದಾಗ ಚಿಕ್ಕಹೊಳಲು ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ. ಆ ಬಳಿಕ ಈತ 26 ಪ್ರಕರಣದ ಪ್ರಮುಖ ಆರೋಪಿ ಎಂಬುದು ತಿಳಿಯಿತು ಎಂದರು.