ಮೈಸೂರು ನಗರ ಕೇಂದ್ರ ಗ್ರಂಥಾಲಯ ಉದ್ಘಾಟಿಸಿದ ಸಚಿವರಾದ ಸೋಮಶೇಖರ್, ಎಸ್.ಸುರೇಶ್ ಕುಮಾರ್

0


ಮೈಸೂರು: ಮೈಸೂರಿನ ಪೀಪಲ್ಸ್ ಪಾರ್ಕ್‍ನಲ್ಲಿ ನೂತನವಾಗಿ ನಿರ್ಮಿಸಿರುವ ನಗರ ಕೇಂದ್ರ ಗ್ರಂಥಾಲಯವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಉದ್ಘಾಟಿಸಿದರು.
ಬಳಿಕ ಡಿಜಿಟಲ್ ಗ್ರಂಥಾಲಯ ವಿಭಾಗವನ್ನು ಕಂಪ್ಯೂಟರ್ ಮೂಲಕ ವೀಕ್ಷಣೆ ಮಾಡಿ ಚಾಲನೆ ನೀಡಿದರು. ಗ್ರಂಥಾಲಯದ ಪುಸ್ತಕಗಳು, ಅಧ್ಯಯನ ವಿಭಾಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ವಿಭಾಗಳನ್ನು ವೀಕ್ಷಿಸಿದ ಸಚಿದ್ವಯರು, ಪುಸ್ತಕಗಳ ಸಂಗ್ರಹಣೆ ಹಾಗೂ ವಿಷಯಗಳ ಬಗ್ಗೆ ಗಮನಹರಿಸಿದರು.
ಈ ಗ್ರಂಥಾಲಯವು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಕಟ್ಟಡವನ್ನು 1819.7 ಚದರ ಮೀಟರ್‍ಗಳ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಗ್ರಂಥಾಲಯವು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇವರಿಂದ 499.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಸದರಿ ಗ್ರಂಥಾಲಯದಲ್ಲಿ ಸುಮಾರು 36,000 ಪುಸ್ತಕಗಳಿದ್ದು, ಉತ್ತಮವಾದ ಪಿಠೋಪಕರಣಗಳ ವ್ಯವಸ್ಥೆ ಇರುತ್ತದೆ. ಗ್ರಂಥಾಲಯದಲ್ಲಿ 31 ಪ್ರಮುಖ ದಿನಪತ್ರಿಕೆಗಳು ಹಾಗೂ 51 ನಿಯತಕಾಲಿಕೆಗಳು ಇರಲಿವೆ.


ಕಟ್ಟಡದ ನೆಲಮಹಡಿಯಲ್ಲಿ ಬ್ರೈಲ್ ಹಾಗೂ ವಿಶೇಷ ಚೇತನ ಓದುಗರ ವಿಭಾಗ, ಮಹಿಳಾ ಓದುಗರ ವಿಭಾಗ, ಗಣಕಯಂತ್ರ ಹಾಗೂ ಡಿಜಿಟಲ್ ಲೈಬ್ರರಿ, ಪುಸ್ತಕ ದಾಸ್ತಾನು, ದಿನಪತ್ರಿಕೆ ಹಾಗೂ ನಿಯತಕಾಲಿಕೆ ಮತ್ತು ಹಿರಿಯ ನಾಗರಿಕ ವಿಭಾಗ, ಮಕ್ಕಳ ವಿಭಾಗ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ, ಪರಾಮರ್ಶನ ಹಾಗೂ ಹಳೆಯ ಪತ್ರಿಕೆಗಳ ಕೊಠಡಿ, ಮಹಿಳಾ ಮತ್ತು ಪುರುಷರ ಶೌಚಾಲಯಗಳಿಂದ ಕೂಡಿರುತ್ತದೆ.
ಮೊದಲನೇ ಮಹಡಿಯಲ್ಲಿ ಗ್ರಂಥಾಲಯದ ಕಾರ್ಯಾಲಯ, ಅಧಿಕಾರಿಗಳ ಕೊಠಡಿ, ತಾಂತ್ರಿಕ ವಿಭಾಗ, ಕಿರು ಮತ್ತು ತೆರೆದ ಸಭಾಂಗಣ, ತೆರೆದ ಪರಾಮರ್ಶನ ವಿಭಾಗ, ಸರ್ವರ್ ಕೊಠಡಿ ಹಾಗೂ ಮೂಲಭೂತ ಸೌಕರ್ಯದಿಂದ ಕೂಡಿದ್ದು, ಸುಸಜ್ಜಿತವಾಗಿ ಬೆಳಕಿನ ವ್ಯವಸ್ಥೆಯಿಂದ ಹೊಂದಿದೆ.
ಕಟ್ಟಡದಲ್ಲಿ ಮಳೆ ನೀರಿನ ಕೊಯ್ಲು ಪದ್ಧತಿ ಅಳವಡಿಸಲಾಗಿದ್ದು, ಆವರಣದಲ್ಲಿ ಔಷದೀಯ ಉದ್ಯಾನವನ, ಲ್ಯಾಂಡ್‍ಸ್ಕೇಪಿಂಗ್, ದ್ವಿಚಕ್ರ ವಾಹನ ನಿಲ್ದಾಣ, ಕಟ್ಟಡದ ಸುತ್ತಲೂ ಪಾಥ್‍ವೇಸ್, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಕುಳಿತು ವಿಶ್ರಮಿಸಲು ಕಲ್ಲಿನ ಬೆಂಚ್ ಅಳವಡಿಕೆ ಪ್ರಸ್ತಾವನೆಯಲ್ಲಿ ಸಿದ್ಧಗೊಳ್ಳುತ್ತಿದೆ.
ಶಾಸಕ ಎಲ್.ನಾಗೇಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ಬಿ.ಶರತ್, ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ, ಡಿಸಿಪಿ ಪ್ರಕಾಶ್‍ಗೌಡ, ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಬಿ.ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here