ಕೋವಿಡ್-19 ವೈರಸ್ ಇಳಿಮುಖವಾಗುತ್ತಿರುವ ಹೊತ್ತಿನಲ್ಲೇ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ‘ಕೊರೊನಾ ರೂಪಾಂತರದ ವೈರಸ್’ ರಾಜ್ಯದಲ್ಲಿ ಶಾಲಾರಂಭ ಮತ್ತು ಪರೀಕ್ಷೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
”ಕೊರೊನಾ ವೈರಸ್ ಹೊಸ ಸ್ವರೂಪ ಪಡೆದಿರುವುದರಿಂದ, ಜ.1ರಿಂದ ಶಾಲೆ ಪುನಾರಂಭ ಮಾಡಬೇಕೊ ಬೇಡವೊ ಎಂಬ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಕೇಳಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಸಿಎಂ ಜತೆ ಸಮಾಲೋಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ನಡುವೆ ”ಲಭ್ಯವಾಗುವ ಸೀಮಿತ ಅವಧಿಯ ಹಿನ್ನೆಲೆಯಲ್ಲಿ 2021ರ ಮಾರ್ಚ್, ಏಪ್ರಿಲ್‌ನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸಲಾಗುವುದಿಲ್ಲ. ಈ ಪರೀಕ್ಷೆಗಳನ್ನು ಯಾವಾಗ ನಡೆಸಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಮತ್ತೊಂದೆಡೆ, ಹೊಸ ವೈರಸ್ ಹರಡದಂತೆ ತಡೆಯಲು ಯುದ್ಧೋಪಾದಿಯಲ್ಲಿ ರಾಜ್ಯ ಸರಕಾರ ಸಜ್ಜಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿದೆ. ಕಳೆದ 14 ದಿನದಲ್ಲಿ ಬಂದಿರುವ 10,500 ಮಂದಿಯ ಪತ್ತೆ ಕಾರ‍್ಯಕ್ಕೆ ಆರೋಗ್ಯ ಇಲಾಖೆ ಈಗಾಗಲೇ ಇಳಿದಿದೆ. ಹಲವರ ತಪಾಸಣೆ ನಡೆಸಿ, ಕ್ವಾರಂಟೈನ್‌ಗೆ ಒಳಪಡಿಸಿದೆ. ಲಂಡನ್‌ನಿಂದ ಬಂದು ಬೆಳಗಾವಿಯ ಖಡೇಬಜಾರ್‌ನಲ್ಲಿ ವಾಸವಾಗಿರುವ ಮಹಿಳೆಯೊಬ್ಬರ ಮೇಲೆ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ತೀವ್ರ ನಿಗಾ ಇಟ್ಟಿದೆ.
ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಆರೋಗ್ಯ ಇಲಾಖೆಯಿಂದ ತಪಾಸಣಾ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ವಿದೇಶಿ ಪ್ರಯಾಣಿಕರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ.