ಹಾಸನ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿರುವ ಘಟನೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ, ಅರಸೀಕೆರೆ ಪಟ್ಟಣದ 27, 28, 29 ವಾರ್ಡ್‌ಗಳಲ್ಲಿರುವ ಮನೆಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತಗಳು ನೀರಿನಲ್ಲಿ ತೇಲಿವೆ. ಅರಸೀಕೆರೆ ಪಟ್ಟಣದ ಮಟನ್ ಮಾರ್ಕೆಟ್ ಹಿಂಭಾಗ, ಟಿಪ್ಪು ನಗರ, ಪ್ರತಿಭಾ ಕಾಲೇಜು ಹಿಂಭಾಗದ ಹಲವಾರು ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ನಿವಾಸಿಗಳ ಪರದಾಡಿದರು.
ಮನೆಗೆ ನೀರು ನುಗ್ಗಿದ್ದರಿಂದ ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಇತರೆ ಹಾನಿಯಾಗಿದೆ. ನಗರಸಭೆ ಅಧಿಕಾರಿಗಳಿಗೆ ಫೋನ್ ಮಾಡಿದರು ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಗೆ ನುಗ್ಗಿರುವ ನೀರನ್ನು ನಿವಾಸಿಗಳು ಹೊರಹಾಕುತ್ತಿದ್ದು ಮಳೆಯಿಂದಾದ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.