ಕೋವಿಡ್ ಕಾರಣದಿಂದಾಗಿ ಹೊಸ ವರ್ಷಾಚರಣೆಯ ಬದಲು ಈ ವರ್ಷ ಶೋಕಾಚರಣೆಯನ್ನಾಗಿ ಮಾಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. ಟಾಸ್ಕ್ ಫೋರ್ಸ್ ಸಭೆ ನಡೆಸಿ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, 2020 ಕೋವಿಡ್‌ನಿಂದಾಗಿ ಎಲ್ಲರಿಗೂ ಶೋಕಾಚರಣೆಯಂತಾಗಿದೆ. ಕೋವಿಡ್‌ಗೆ ತುತ್ತಾಗಿ ಹಲವರು ಸಾವಿಗೀಡಾಗಿದ್ದಾರೆ. ಹಾಗಾಗಿ ಈ ಬಾರಿಯ ಹೊಸ ವರ್ಷ ಆಚರಿಸುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ಕೋವಿಡ್ ಎರಡನೇ ಅಲೆ ಬರುವ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚು ಮಾಡುವಂತೆ 10 ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಗುರಿ ನೀಡಲಾಗಿದ್ದು,ಅದನ್ನು ಕಡ್ಡಾಯವಾಗಿ ತಲುಪಬೇಕು. ಅಷ್ಟೇ ಅಲ್ಲದೆ, ಎರಡು ತಿಂಗಳು ಸಾಮಾಜಿಕ ಕಾರ್ಯಕ್ರಮ, ಮದುವೆ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ತಿಳಿಸಿದರು.
ಮುಂಜಾಗರೂಕತಾ ಕ್ರಮವಾಗಿ ಡಿಸೆಂಬರ್ 20 ರಿಂದ ಜನವರಿ 2 ವರೆಗೆ ನಡೆಯಲಿರುವ ಸಭೆ ಸಮಾರಂಭಕ್ಕೆ 200 ಜನರು ಸೀಮಿತವಾಗಿರಬೇಕು. ಎರಡನೇ ಅಲೆ ಆರಂಭವಾದರೆ ಆಕ್ಸಿಜನ್ ಜನರೇಟರ್ ಸಿದ್ದ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
10 ಜಿಲ್ಲಾ ಆಸ್ಪತ್ರೆ, 30 ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಸಿದ್ಧತೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಅಗತ್ಯವಿರುವ 37.77 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ 90 ದಿನಗಳಲ್ಲಿ 10 ಲಕ್ಷ ರಾಪಿಡ್ ಆ್ಯಂಟಿಜನ್ ಕಿಟ್ ಗೆ 11.32 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿದೆ. ಖಾಸಗಿ ಆಸತ್ರೆಗಳು ರೆಮಿಡಿಸ್ವೀರ್ ಇಂಜೆಕ್ಷನ್ ಗೆ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, 1800-2000 ರೂ. ಮಾತ್ರ ರೆಮಿಡಿಸ್ವೀನ್ ಇಂಜೆಕ್ಷನ್ ಗೆ ಚಾರ್ಜ್ ಮಾಡಬೇಕು. ಹೆಚ್ಚು ದರ ವಸೂಲಿ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊರೊನಾ ಲಸಿಕೆ ವಿತರಣೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ವಾರಿಯರ್ಸ್ ಗೆ ಮೊದಲು ಲಸಿಕೆ ಕೊಡುತ್ತೇವೆ. ಈಗಾಗಲೇ ಯಾರಿಗೆ ಲಸಿಕೆ ಕೊಡಬೇಕು ಎಂದು ಸಿದ್ಧತೆ ಮಾಡಿಕೊಂಡಿದ್ದೇವೆ. ಲಸಿಕೆ ಇಡಲು ಅಗತ್ಯ ಕೋಲ್ಡ್ ಸ್ಟೋರೇಜ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.