ಎತ್ತಿನ ಹೊಳೆ ಯೋಜನೆಯ ಎರಡನೇ ಹಂತದ ಕಾಮಗಾರಿ ಬೇಲೂರು ತಾಲ್ಲೂಕಿನಲ್ಲಿ ಅಗತ್ಯ ಭೂಮಿ ಒದಗಿಸುವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸಭೆ ನಡೆಯಿತು.
ಶಾಸಕರಾದ ಕೆ.ಎಸ್. ಲಿಂಗೇಶ್ ಅವರು ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ಭೂಮಿ ಒದಗಿಸಲು ಉಂಟಾಗಿರುವ ತಾತ್ಕಾಲಿಕ ತೊಡಕುಗಳ ಬಗ್ಗೆ ಎತ್ತಿನ ಹೊಳೆ ಯೋಜನೆಯ ಇಂಜಿನಿಯರ್‍ಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಯವರು ಚರ್ಚೆ ನಡೆಸಿದರು.
ಶಾಸಕರಾದ ಲಿಂಗೇಶ್ ಅವರು ಮಾತನಾಡಿ ಬೇಲೂರು ತಾಲ್ಲೂಕಿನ ಕೆಲವು ಭಾಗಗಳಿಗೆ ನೀರು ಪೂರೈಸುವ ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳಬೇಕು ಅದಕ್ಕೆ ಅಗತ್ಯವಿರುವ ಭೂಮಿಯನ್ನು ಆದಷ್ಟು ಶೀಘ್ರವಾಗಿ ಒದಗಿಸಿ ಎಂದು ಮನವಿ ಮಾಡಿದರು. ಯೋಜನಾ ವ್ಯಾಪ್ತಿಯ ಐದು ಹಳ್ಳ ಭಾಗದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಹಾಲಿ ಇರುವ ಜಾಗದ ದಾಖಲೆಗಳ ಬಗೆಗಿನ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಶೀಘ್ರವಾಗಿ ಪರಿಹರಿಸಬೇಕು ರೈತರ ಭೂಮಿ ದಾಖಲೆಗಳು ಅದಲು ಬದಲನ್ನು ಸರಿಪಡಿಸಿ ಜಮೀನು ಕಳೆದು ಕೊಂಡವರಿಗೆ ನಿಯಮಾನಿಸಾರ ಪರಿಹಾರ ವಿತರಿಸಬೇಕು ಎಂದು ಶಾಸಕರಾದ ಕೆ.ಎಸ್.ಲಿಂಗೇಶ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಐದುಹಳ್ಳ ಭಾಗದಲ್ಲಿ 1898 ರಲ್ಲಿಯೇ ಅರಣ್ಯ ಇಲಾಖೆಗೆ ಜಾಗ ಮಂಜೂರಾಗಿದ್ದು ಇನ್ನು ಹಲವು ಪ್ರದೇಶದ ಖಾತೆ ವರ್ಗಾವಣೆಯಾಗದೆ ಬಾಕಿ ಇದೆ ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಅಲ್ಲದೆ ಅರಣ್ಯೆತರ ಚಟುವಟಿಕೆ ಬಗ್ಗೆ ಇಲಾಖಾ ಮೂಲಕ ಅಗತ್ಯ ನಿಯಮ ಪಾಲನೆ ಮಾಡಿ ಎತ್ತಿನ ಹೊಳೆ ಯೋಜನೆಗೆ ಭೂಮಿ ಒದಗಿಸಬೇಕಾಗುತ್ತದೆ ಅದಕ್ಕೆ ಆದ್ಯತೆ ಮೇಲೆ ಕ್ರಮ ವಹಿಸಿ ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದರು.
ಅಲ್ಲದೆ ರೈತರ ಜಮೀನುಗಳ ದಾಖಲೆ ಅದಲು ಬದಲಾಗಿದ್ದರೆ ಆ ಬಗ್ಗೆ ಮರು ಸರ್ವೆ ನಡೆಸಿ ನಿಯಾಮಾನುಸಾರ ದಾಖಲೆ ಬದಲಾವಣೆಗೆ ಇರುವ ಅವಕಾಶಗಳನ್ನು ಗಮನಿಸಿ ಕ್ರಮವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದರು.
ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನ ಹಳ್ಳ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ್ ಅವರು ಬೇಲೂರು ತಾಲ್ಲೂಕಿನಲ್ಲಿ ಈವರೆಗೆ ಆಗಿರುವ ಪ್ರಗತಿ ಹಾಲಿ ತುರ್ತಾಗಿ ಅಗತ್ಯವಿರುವ ಜಮೀನಿನ ಪ್ರಮಾಣ ಅರಣ್ಯ ಇಲಾಖೆ ವ್ಯಾಪಿಯಲ್ಲಿ ಕಾಮಗಾರಿ ಮಾಡಲು ಬೇಕಾಗಿರುವ ಅನುಮತಿಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಅವರು ಅರಣ್ಯ ಇಲಾಖೆ ಹೆಸರಿಗೆ ಇನ್ನೂ ಸಾಕಷ್ಟು ಜಮೀನಿನ ಖಾತೆ ವರ್ಗಾವಣೆ ಬಾಕಿ ಇದೆ ಅಲ್ಲದೆ ಯೋಜನೆ ಅನುಷ್ಠಾನಕ್ಕೆ ನಿಯಮಾನುಸಾರ ಸಾಧ್ಯವಿರುವ ಎಲ್ಲಾ ನೆರವನ್ನು ತುರ್ತಾಗಿ ಒದಗಿಸಲು ಶ್ರಮಿಸುವುದಾಗಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಭೂದಾಖಲೆಗಳ ಉಪನಿರ್ದೇಶಕರಾದ ಹೇಮಲತಾ, ತಹಸೀಲ್ದಾರ್ ನಟೇಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು