ಹಾಸನ ದೇಶಾದ್ಯಂತ ಕೋವಿಡ್ – 19 ವ್ಯಾಪಕತೆಯು ದಿನೆ ದಿನೇ ಹೆಚ್ಚುತ್ತಿದ್ದು, ಅದರ ನಿಯಂತ್ರಣ ಮಾಡುವುದು ಮುಖ್ಯ. ಈ ದಿಸೆಯಲ್ಲಿ ಪೊಲೀಸ್ ಇಲಾಖೆಯು ಮುಖ್ಯ ಪಾತ್ರವಹಿಸುತ್ತಿದ್ದು ಜನಸಾಮಾನ್ಯರ ನಡುವೆ ಸಮನ್ವಯತೆಯನ್ನು ಸಾಧಿಸುವ ಮೂಲಕ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲು ನಿರಂತರ ಶ್ರಮಿಸುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ ಅವರು ತಿಳಿಸಿದ್ದಾರೆ.
ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲಗೌಡ ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಕೋವಿಡ್ – 19 ನಿರ್ವಹಣಾ ಸಮಿತಿಯ ಮೂಲಕ ನೀಡಲಾದ ನಿರ್ದೇಶನದನ್ವಯ ನಗರದ ಎನ್.ಆರ್. ವೃತ್ತದಲ್ಲಿರುವ ನಗರ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಪೆನ್‍ಷನ್ ಮೊಹಲ್ಲಾ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ, ಬಡಾವಣೆ ಪೊಲೀಸ್ ಠಾಣೆ ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕೋವಿಡ್‍ವ್ಯಾದಿ ಸಮಯದಲ್ಲಿ ಠಾಣೆಗಳ ಸ್ವಚ್ಚತೆ, ನಿರ್ವಹಣೆ, ದೂರು ಪಡೆಯುವಿಕೆ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಕೋವಿಡ್ – 19 ನಿಯಂತ್ರಣಕ್ಕಾಗಿ ಸರ್ಕಾರ ರೂಪಿಸಿರುವ ನಿಯಮಗಳನ್ನು ಮೀರುವವರ ಮೇಲೆ ದಾಖಾಲಾಗುವ ದೂರುಗಳ ಮಾಹಿತಿ ಹಾಗೂ ಕೈಗೊಂಡಿರುವ ಕಠಿಣ ಕ್ರಮಗಳ ಕುರಿತು ಪರಿಶೀಲಿಸಿ ಮಾಹಿತಿಯನ್ನು ಪಡೆದರು.
ಜನಸಾಮಾನ್ಯರು ಲಾಕ್ ಡೌನ್ ನಿಂದಾಗಿ ಜೀವನ ನಿರ್ವಹಣೆಯಲ್ಲಿ ತುಂಬಾ ಕಷ್ಟ ಪಡುತ್ತಿದ್ದರು ಸಹ ಕೋವಿಡ್ – 19 ನಂತಹ ಮಾರಣಾಂತಿಕ ಖಾಯಿಲೆಗೆ ಸಾಮಾಜಿಕ ಅಂತರ ಕಾಪಾಡುವುದನ್ನು ಹೊರತುಪಡಿಸಿ ನಿಯಂತ್ರಣಕ್ಕಾಗಿ ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ ಹಾಗಾಗಿ ಸಾರ್ವಜನಿಕರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದರು.
ಕೋವಿಡ್- 19 ನಿಯಂತ್ರಣ ನಿರ್ವಹಣೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಕರ್ನಾಟಕ ಉಚ್ಛ ನ್ಯಾಯಾಲಯವು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು ಇಲಾಖೆಯು ಜನಸಮುದಾಯದ ಏಳಿಗೆಗಾಗಿ ತಮ್ಮ ಜೀವವನ್ನು ಲೆಕ್ಕಿಸದೆ ನಿರಂತರವಾಗಿ ಶ್ರಮಿಸುತ್ತಿರುವುದು ಕಂಡುಬಂದಿದೆ.
ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ – 19 ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು ಹಾಗೂ ಪೊಲೀಸ್ ಇಲಾಖೆಯ ಜೊತೆ ಕೈ ಜೋಡಿಸಿ ಸ್ವಯಂಪ್ರೇರಿತರಾಗಿ ತಮ್ಮನ್ನು ಮತ್ತು ಇತರರನ್ನು ರಕ್ಷಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ ತಿಳಿಸಿದರು
https://twitter.com/HASSANNEWSPAGE?s=09