ಶಾರ್ಪ್ ಶೂಟರ್ ವೆಂಕಟೇಶ್ ಇನ್ನ ನೆನಪು ಮಾತ್ರ

0

ಹಾಸನ: ಇತ್ತೀಚೆಗೆ ಕಾಡಾನೆಗಳ ನಡುವಿನ ಕಲಹದ ವೇಳೆ ಗಾಯಗೊಂಡಿದ್ದ ಕಾಡಾನೆ ಭೀಮನಿಗೆ ಚಿಕಿತ್ಸೆ ಕೊಡಲು ಹೋಗಿದ್ದ ಅರಣ್ಯ ಸಿಬ್ಬಂದಿಯ ಮೇಲೆ ಭೀಮ, ದಾಳಿ ನಡೆಸಿರುವ ಘಟನೆ ಆ. 31ರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ವೆಂಕಟೇಶ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಭೀಮ ಗಾಯಗೊಂಡಾಗಿನಿಂದ ಆನೆಯನ್ನು ಹುಡುಕಾಡಿ ಅದರ ಗಾಯಕ್ಕೆ ಚಿಕಿತ್ಸೆ ನೀಡುವ ಕೆಲಸ ನಿತ್ಯವೂ ಅರಣ್ಯ ಇಲಾಖೆಯ ಸಿಬ್ಬಂದಿಯು ಮಾಡುತ್ತಿದ್ದರು. ದೂರದಿಂದಲೇ ಅದಕ್ಕೆ ಅರವಳಿಕೆ ಗನ್ ನಿಂದ ಅರವಳಿಕೆ ಕೊಟ್ಟು, ಅದು ಪ್ರಜ್ಞೆ ತಪ್ಪಿದ ನಂತರ ಅದರ ಬಳಿಗೆ ಹೋಗಿ ಅದಕ್ಕೆ ಚಿಕಿತ್ಸೆ ನೀಡುವುದು ನಿತ್ಯದ ಕೆಲಸವಾಗಿತ್ತು.

ಅದೇ ರೀತಿ, ಆ. 31ರಂದು ಬೆಳಗ್ಗೆಯಿಂದ ಆನೆಯನ್ನು ಹುಡುಕಾಡುತ್ತಿದ್ದ ಸಿಬ್ಬಂದಿಗೆ, ಅದು ಆಲೂರು ತಾಲೂಕಿನ ಹಳ್ಳಿಯೂರು ಎಂಬಲ್ಲಿ ನಿಂತಿದ್ದು ಕಣ್ಣಿಗೆ ಬಿತ್ತು. ಅದನ್ನು ಗಮನಿಸಿದ ವೈದ್ಯರು, ದೂರದಿಂದಲೇ ಅದಕ್ಕೆ ಅರವಳಿಕೆ ನೀಡಿದ್ದಾರೆ. ಆದರೆ, ಅರವಳಿಕೆ ಗನ್ ಶಬ್ದ ಕೇಳುತ್ತಲೇ ರೊಚ್ಚಿಗೆದ್ದ ಭೀಮ, ಕೂಡಲೇ ಅರಣ್ಯ ಸಿಬ್ಬಂದಿಯಿದ್ದ ಕಡೆಗೆ ಧಾವಿಸಿಬಂದಿದ್ದಾನೆ.

ಈ ಸಂದರ್ಭದಲ್ಲಿ ವೈದ್ಯರು ಹಾಗೂ ಅರಣ್ಯ ಸಿಬ್ಬಂದಿಯು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ, ಭೀಮನು ವೆಂಕಟೇಶ್ ಅವರನ್ನೇ ಬೆನ್ನಟ್ಟಿ ಹೋಗಿದ್ದಾನೆ. ಸ್ವಲ್ಪ ದೂರ ಓಡಿದ ಮೇಲೆ ವೆಂಕಟೇಶ್ ದೊಡ್ಡದಾಗಿ ನೆಲದಲ್ಲೇ ಹರಡಿಕೊಂಡಿದ್ದ ಮುಳ್ಳುಗಿಡದ ಹಿಂದೆ ಅವರು ಅವಿತುಕೊಳ್ಳಲು ಓಡಿದ್ದಾರೆ.

ಆದರೆ, ಆನೆಯು ಅವರು ಧರಿಸಿದ್ದ ನೀಲಿ ಟಿಶರ್ಟ್ ಅನ್ನೇ ಗುರುತಾಗಿಟ್ಟುಕೊಂಡು ಅವರ ಹಿಂದೆಯೇ ಹೋಗಿ ಅವರ ಮೇಲೆ ಹಲ್ಲೆ ನಡೆಸಿದೆ.
ತನ್ನ ಸೊಂಡಿಲಿನಿಂದ ವೆಂಕಟೇಶ್ ಅವರನ್ನು ಕಾಲಿನಿಂದ ತುಳಿದಿದ್ದಾನೆ ಭೀಮ. ಆನಂತರ ತನ್ನೆರಡೂ ಮುಂಗಾಲುಗಳನ್ನು ನೆಲದ ಮೇಲೆ ಊರಿ ತನ್ನ ತಲೆಯಿಂದ ವೆಂಕಟೇಶ್ ಅವರ ತಲೆಗೆ ಡಿಚ್ಚಿ ಹೊಡೆದಿದ್ದಾನೆ. ನಂತರ ಅವರ ಮೇಲೆ ಬಿದ್ದು ಹೊರಳಾಡಿದ್ದಾನೆ. ಆನಂತರ ಅಲ್ಲಿಂದ ಹೊರಟು ಹೋಗಿದ್ದಾನೆ.

ಆನಂತರ, ಸ್ಥಳಕ್ಕೆ ಓಡಿದ ಉಳಿದ ಅರಣ್ಯಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಂಕಟೇಶ್ ಹಲವು ವರ್ಷಗಳಿಂದ ಈ ಹಿಂದೆ ಹತ್ತಾರು ಕಾಡಾನೆಗಳ ಸೆರೆ ವೇಳೆ ಅರವಳಿಕೆ ಮದ್ದು ನೀಡಿದ ಅನುಭವ ಹೊಂದಿದ್ದರು. ಆದರೆ ಈ ಬಾರಿ ಚಿಕಿತ್ಸೆ ನೀಡುವ ಮುನ್ನ ಅರವಳಿಕೆ ಚುಚ್ಚುಮದ್ದು ನೀಡುವಾಗ ನಡೆದ ಎಡವಟ್ಟಿನಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಭೀಮ
ಮೂರು ದಿನಗಳ ಹಿಂದೆ, ಇತರ ಕಾಡಾನೆಗಳ ಜೊತೆಗೆ ಕಾದಾಟ ನಡೆಸಿದ್ದ ಭೀಮ, ಬೇರೆ ಕಾಡಾನೆಯೊಂದರ ದಂತದಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಆತನಿಗೆ ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಕಳೆದ ಮೂರು ದಿನಗಳಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರವಾದ ಗಾಯ, ನೋವು, ಹಸಿವಿನಿಂದ ಭೀಮ ಕಂಗೆಟ್ಟಿದ್ದ ಎಂದು ಹೇಳಲಾಗಿದೆ. ಆ. 31ರಂದು ಅರಣ್ಯ ಇಲಾಖೆಯ ಸಿಬ್ಬಂದಿಯು ಬಂದ ಕೂಡಲೇ ರೊಚ್ಚಿಗೆದ್ದು ಆತ ಏಕಾಏಕಿ ದಾಳಿ ನಡೆಸಿದ್ದಾನೆ. ಆತ ದಾಳಿ ಮಾಡುತ್ತಾನೆಂದು ಕನಸಿನಲ್ಲಿ ಅಂದುಕೊಂಡಿದರ ಸಿಬ್ಬಂದಿಗಳು ಓಡುವಷ್ಟರಲ್ಲಿ ವೆಂಕಟೇಶ್ ಅವರು ಭೀಮನ ದಾಳಿಗೆ ತುತ್ತಾಗಿದ್ದಾರೆ.


ಮಾರ್ಗ ಮಧ್ಯೆದಲ್ಲಿ ಕೈಕೊಟ್ಟ ಆ್ಯಂಬುಲೆನ್ಸ್
ಆನೆಯಿಂದ ದಾಳಿಗೊಳಗಾಗಿದ್ದ ವೆಂಕಟೇಶ್ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಲು ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ. ಆಗ, ಬೇರೊಂದು ವಾಹನದಲ್ಲಿ ಅವರನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here