ನಬಾರ್ಡ್ ನಿಂದ 2021-2022ನೇ ಸಾಲಿಗೆ ರೂಪಿಸಲಾದ ಸಾಮರ್ಥ್ಯ ಆಧಾರಿತ ಸಾಲ ಯೋಜನೆ(PಐP)ಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಅವರು ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಬಾರ್ಡ್ ನ ಹಾಸನ ಜಿಲ್ಲಾ ವ್ಯವಸ್ಥಾಪಕರಾದ ವಿ.ಜಿ. ಭಟ್ ಅವರು ಮಾತನಾಡಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಸಾಲ ನೀಡುವ ಮೂಲಕ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳು, ಮಾರುಕಟ್ಟೆ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನು ಪರಿಗಣಿಸಿ ಪಾಲುದಾರರೊಂದಿಗೆ ಚರ್ಚಿಸಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ತಯಾರಿಸಲಾಗಿದೆ ಹಾಗೂ ಇದರ ಆಧಾರದ ಮೇಲೆ ಜಿಲ್ಲಾ ಕ್ರೆಡಿಟ್ ಪ್ಲಾನ್‍ನನ್ನು ತಯಾರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ 8660.73 ಕೋಟಿ ರೂ.ಗಳ ಯೋಜನೆಯನ್ನು ತಯಾರಿಸಿದ್ದು, ಇದನ್ನು ಆದ್ಯತೆಯ ಮೇರೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಇದರಲ್ಲಿ ಒಟ್ಟು 5835.72 ಕೋಟಿ ರೂ.ಗಳನ್ನು ಕೃಷಿಗಾಗಿ (ಕೃಷಿ ಮೂಲಭೂತ ಸೌಕರ್ಯ ಹಾಗೂ ಕೃಷಿ ಪೂರಕ ಚಟುವಟಿಕೆಗಳನ್ನೊಳಗೊಂಡಂತೆ), ಎಮ್.ಎಸ್.ಎಂ.ಇ. ಗಾಗಿ ರೂ.1679.75 ಕೋಟಿಗಳನ್ನು, 172 ಕೋಟಿ ರೂ.ಗಳನ್ನು ಶಿಕ್ಷಣಕ್ಕಾಗಿ ಹಾಗೂ 880 ಕೋಟಿ ರೂ.ಗಳನ್ನು ಗೃಹ ನಿರ್ಮಾಣಕ್ಕಾಗಿ ವ್ಯಯಿಸಲು ನಿರ್ಧರಿಸಲಾಗಿದೆ ಎಂದು ವಿ.ಜಿ. ಭಟ್ ಅವರು ತಿಳಿಸಿದರು.