ಮಂಡ್ಯ/ಹಾಸನ/ಚೆನೈ : ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಂಡ್ಯ ಜಿಲ್ಲೆಯ ನಾಗಮಂಗಲದ ಎ.ನಾಗತಿಹಳ್ಳಿ ಸಮೀಪ ಭಾನುವಾರ (11ಡಿ.2022) ರಾತ್ರಿ ಸಂಭವಿಸಿದ ಎರಡು ಕಾರುಗಳ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಹಾಸನ ಮೂಲದ ಮೂವರು ಮತ್ತು ತಮಿಳುನಾಡಿನ ಚೆನ್ನೈ ಮೂಲದ ಇಬ್ಬರು ಸೇರಿ ಒಟ್ಟು ಐವರು ಸ್ಥಳದಲ್ಲೇ ಸಾವನ್ನಪ್ಪಿ ಎರಡೂ ಕಾರುಗಳಲ್ಲಿದ್ದ ಐದು ಮಂದಿ ಗಾಯಗೊಂಡಿದ್ದಾರೆ. , ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಾಸನ ಮೂಲದ
ಶ್ರೀನಿವಾಸ್(66), ಇವರ ಪತ್ನಿ ಜಯಂತಿ(60), ಪ್ರಭಾಕರ್ (75), ಸ್ವಿಫ್ಟ್ ಕಾರಿನ ಚಾಲಕ ಚೆನ್ನೈ ಮೂಲದ ಗಣೇಶ್(29) ಹಾಗೂ ಕಿಶೋರ್ (26) ಮೃತರು. ಗೌತಮ., ಕೆವಿನ್, ಶಬ್ರೀಕ್ ಸೇರಿದಂತೆ ಐವರು ಗಾಯಗೊಂಡು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. , ಬೆಂಗಳೂರಿನಲ್ಲಿ ಸಂಬಂಧಿಕರೊಬ್ಬರ ಮದುವೆ ಸಮಾರಂಭ ಮುಗಿಸಿ ಹಾಸನಕ್ಕೆ ತೆರಳುತ್ತಿದ್ದ ವೇಳೆ ಇನೋವಾ ಕಾರಿನ ಟೈರ್ ಸಿಡಿದು
ರಾಷ್ಟ್ರೀಯ ಹೆದ್ದಾರಿ ರಸ್ತೆಯ ವಿಭಜಕಕ್ಕೆ ಅಪ್ಪಳಿಸಿ ಹಾಸನದಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ತಮಿಳುನಾಡಿನ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿತ್ತು. , ಸ್ವಿಫ್ಟ್ ಕಾರಿನಲ್ಲಿದ್ದವರು ಚೆನ್ನೈ ಮೂಲದ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎನ್ನಲಾಗಿದೆ. ವಾರಂತ್ಯದ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. , ಸುದ್ದಿ ತಿಳಿದು ಜಿಲ್ಲಾ ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ವೃತ್ತನಿರೀಕ್ಷಕರು ಆಸ್ಪತ್ರೆ ಮತ್ತು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದರು. ಎರಡೂ ಕಾರುಗಳಲ್ಲಿದ್ದ ಐವರ ಪೈಕಿ
ಮೂವರಿಗೆ ಗಂಭೀರ ಗಾಯ ಮತ್ತು ಇನ್ನಿಬ್ಬರು ಸಣ್ಣ ಪುಟ್ಟಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. , ಘಟನೆಯಲ್ಲಿ ಸಾವನ್ನಪ್ಪಿದ್ದ ಐವರ ಮೃತದೇಹಗಳನ್ನು ಇದೇ ಆಸ್ಪತ್ರೆಯ ಶವಾಗಾರದಲ್ಲಿ ಸೋಮವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ
ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಮೃತದ ಸಂಬಂಧಿಕರ ರೋಧನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ಮುಂದಿನ ಕಾನೂನು ಕ್ರಮವಹಿಸಿದ್ದಾರೆ.