ಚೇತನ್ ಬಂಧಿತ ಆರೋಪಿ: ಎಸ್ಪಿ ಹರಿರಾಂ ಶಂಕರ್ ಮಾಹಿತಿ
ಹಾಸನ: ಮನೆಗೆ ಬೀಗ ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಳ್ಳತನ ಆಗಿದ್ದು, ದೂರಿನ ಮೇರೆಗೆ ತನಿಖೆ ನಡೆಸಿದಾಗ ಚೇತನ್ ಎನ್ನುವ ವ್ಯಕ್ತಿ ಪತ್ತೆಯಾಗಿದ್ದು, ವಿಚಾರಣೆ ವೇಳೆ ಬಂಧಿತನಿಂದ ೮ ಲಕ್ಷದ ೪೮ ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಚನ್ನರಾಯಪಟ್ಟಣ ತಾಲೂಕು ದಿಡಗ ಗ್ರಾಮದ ಮೋಹನ್ ನಾಗ್ ಅವರು ತಮ್ಮ ಮನೆಯ ಮುಂದಿನ ಬಾಗಿಲಿಗೆ ಡೋರ್ ಲಾಕ್ ಮಾಡಿಕೊಂಡು ನಾಗಮಂಗಲದಲ್ಲಿರುವ ಮುಳ್ಳುಕಟ್ಟಮ್ಮ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದು, ರಾತ್ರಿ ೧೦:೪೦ಕ್ಕೆ ವಾಪಸ್ ಬಂದು ಮನೆ ನೋಡಿದಾಗ ಮನೆಯೊಳಗೆ ರೂಮಿನ ಬೀಗವನ್ನು ಯಾರೋ ಕಳ್ಳರು ತೆಗೆದು ನೋಡಿದಾಗ ೮ ಲಕ್ಷದ ೪೮ ಸಾವಿರ ರೂಗಳು ಕಳವು ಆಗಿರುವ ಬಗ್ಗೆ ಬೆಳಕಿಗೆ ಬಂದಿತ್ತು.
ಪತ್ತೆ ಮಾಡಿಕೊಡಬೇಕಾಗಿ ಹಿರಿಸಾವೆ ಪೊಲೀಸ್ ಠಾಣೆಗೆ ಕೊಟ್ಟ ದೂರಿನ ಹಿನ್ನಲೆಯಲ್ಲಿ ಆರೋಪಿ ಪತ್ತೆ ಮಾಡಲು ವಿಶೇಷ ತಂಡ ರಚಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ಅಧೀಕ್ಷಕರಾದ ಪಿ. ರವಿಪ್ರಸಾದ್ ಸೂಚನೆಯಲ್ಲಿ ತನಿಖೆ ನಡೆಸಿದಾಗ ಬೆಂಗಳೂರಿನ ಚಿಕ್ಕಸಂದ್ರ ಬಸ್ ನಿಲ್ದಾಣದ ಬಳಿ ಅನುಮಾನಸ್ಪದದಲ್ಲಿ ಹೊಂಚು ಹಾಕುತ್ತಿದ್ದ ಚೇತನ್ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಣ ದೋಚಿರುವುದರ ಬಗ್ಗೆ ಸತ್ಯಾಂಶ ಹೊರ ಬಂದಿತು ಎಂದರು. ಹಿರಿಸಾವೆ ಪೊಲೀಸರ ಯಶಸ್ವಿ ಕಾರ್ಯಚರಣೆಗೆ ಎಸ್ಪಿ ಅವರು ಶ್ಲಾಘನೆವ್ಯಕ್ತಪಡಿಸಿದರು.