ಹಾಸನ: ಹಾಸನದ ಹೇಮಗಂಗೋತ್ರಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಹಾಸನ ವಿಶ್ವವಿದ್ಯಾಲಯವು 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಮೊದಲು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿದ್ದ ಹೇಮಗಂಗೋತ್ರಿಯು ಈಗ ಪ್ರತ್ಯೇಕವಾದ ಸ್ವತಂತ್ರ ಮಾದರಿ ವಿಶ್ವವಿದ್ಯಾಲಯವಾಗಿ ರೂಪುಗೊಂಡು ಯುಜಿಸಿ, ನವದೆಹಲಿ ( ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಅಧಿನಿಯಮ 1956 ರ ಪ್ರಕರಣ 2 (ಎಫ್) ಅಡಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ.
ಕರ್ನಾಟಕ ಸರ್ಕಾರವು ನೂತನವಾಗಿ ಸ್ಥಾಪಿಸಿರುವ 8 ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾಸನ ವಿಶ್ವವಿದ್ಯಾಲಯವು ಈಗಾಗಲೇ ತನ್ನ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಾಲೇಜು ಹಾಗೂ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ 55 ಪ್ರಥಮ ದರ್ಜೆ ಕಾಲೇಜುಗಳಿಗೆ ಸ್ನಾತಕ ಪದವಿ ಕೋರ್ಸುಗಳ ಪ್ರವೇಶಾತಿಯನ್ನು ನೀಡಿದೆ. ಮುಂದುವರಿದಂತೆ ಪ್ರಸ್ತುತ ಹಾಸನ ವಿಶ್ವವಿದ್ಯಾಲಯದ ಹೇಮಗಂಗೋತ್ರಿ ಕ್ಯಾಂಪಸ್ ಮತ್ತು ಹಾಸನ ವಿಶ್ವವಿದ್ಯಾಲಯದಲ್ಲಿ ಸಂಯೋಜನೆಗೊಂಡ ಸರ್ಕಾರಿ ಕಾಲೇಜು ಹಾಗೂ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ ಕೋರ್ಸುಗಳಾದ ಎಂ.ಎ./ಎಂ.ಕಾಂ./ ಎಂ.ಎಸ್.ಡಬ್ಲ್ಯೂ./ ಎಂ.ಎಸ್ಸಿ./ಪಿ.ಜಿ. ಡಿಪ್ಲೋಮ ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಪ್ರವೇಶ ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳು ಸ್ನಾತಕ ಪದವಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಆಧರಿಸಿ ಮತ್ತು ಮೀಸಲಾತಿ ನಿಯಮಗಳನ್ವಯ ಮೆರಿಟ್ ಪಟ್ಟಿ ತಯಾರಿಸಿ ಪ್ರವೇಶಾತಿ ಕೈಗೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ.
ದಿನಾಂಕ: 05-09-2023 ರಿಂದ ಸ್ನಾತಕೋತ್ತರ ಪದವಿಯ ಪ್ರವೇಶಾತಿಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ದಿನಾಂಕ: 25-09-2023 ರವರೆಗೆ ಮಾತ್ರ ಪ್ರವೇಶಾತಿ ಅರ್ಜಿಗಳನ್ನು ಸ್ವೀಕರಿಸಲು ಅನುವು ಮಾಡಿಕೊಡಲಾಗಿದೆ. ಹೀಗಾಗಿ ಹಾಸನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಈ ಪ್ರಕಟಣೆಯನ್ನು ಗಮನಿಸಿ ಅರ್ಜಿಯನ್ನು ಸಲ್ಲಿಸಬಹುದು. ಪ್ರವೇಶಾತಿ ಅರ್ಜಿಯನ್ನು ಹಾಸನ ವಿಶ್ವವಿದ್ಯಾಲಯದ ಆಡಳಿತ ಕಚೇರಿ/ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳ (ಸ್ನಾತಕೋತ್ತರ ವಿಭಾಗ) ಪ್ರಾಂಶುಪಾಲರ ಬಳಿ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಹಾಸನ ವಿಶ್ವವಿದ್ಯಾಲಯ ಕಚೇರಿಯ ಸಹಾಯವಾಣಿ ಸಂಖ್ಯೆಗಳಾದ 082172-220014, 9986859851, 9141419806, 8197050324 ಕರೆ ಮಾಡಿ ತಮಗೆ ಬೇಕಾದ ಮಾಹಿತಿ ಪಡೆಯಬಹುದೆಂದು ಈ ಮೂಲಕ ತಿಳಿಸಲಾಗಿದೆ.