ನಾಳೆಯಿಂದ ಹಾಸನದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿ ಆದೇಶ ; ಜಿಲ್ಲಾಧಿಕಾರಿ

0

ಹಾಸನ ಮೇ.19 : ಜಿಲ್ಲೆಯಲ್ಲಿ ನಾಳೆಯಿಂದ ವಾರದಲ್ಲಿ ನಾಲ್ಕು ದಿನಗಳ ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದ್ದು ಮೂರುದಿನಗಳು ಅಗತ್ಯವಸ್ತು ಖರೀದಿಗೆ ಅವಕಾಶವಿದೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದರು.

ಕೋವಿಡ್ 19 ನಿಯಂತ್ರಣ ಕುರಿತು ಜನಪ್ರತಿನಿಧಿಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಎಲ್ಲಾ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಎಲ್ಲಾ ತಾಲ್ಲೂಕುಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಇದೇರೀತಿ ಆಯಾ ತಾಲ್ಲೂಕುಗಳು, ಹೋಬಳಿ ಹಾಗೂ ಗ್ರಾಮಮಟ್ಟದ ಅಧಿಕಾರಿಗಳನ್ನು ನೇಮಿಸಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.

ತಡವಾಗಿ ಆಸ್ಪತ್ರೆಗೆ ಸೇರುತ್ತಿರುವುದು ಕೋವಿಡ್ 19 ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಇದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ವ್ಯವಸ್ಥಿತವಾಗಿ ಕೆಲಸ ಮಾಡಿ ಎಂದು ಹೇಳಿದರು.

ನೋಡಲ್ ಅಧಿಕಾರಿಗಳು ಇತರ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸಮಾಡಿ ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ವಾರಕ್ಕೆರಡು ಬಾರಿ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರಧಿಮಾಡಬೇಕು ಪ್ರತಿ ಸೋಮವಾರ ಹಾಗೂ ಗುರುವಾರದಂದು ನಿಗದಿತ ಸಮಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು. ಸಾಧ್ಯವಾದಷ್ಟು ಸೋಂಕಿತರ ಪ್ರಥಮ ಸಂಪರ್ಕಿತರು, ಕುಟುಂಬ ವರ್ಗದವರು ಹಾಗೂ ರೋಗಲಕ್ಷಣ ಇರುವವರುಗಳನ್ನೆಲ್ಲ ತಪಾಸಣೆಗೆ ಒಳಪಡಿಸಿ ಪಾಸಿಟಿವ್ ಬಂದವರ ಮನೆಯಲ್ಲಿ ಸೌಲಭ್ಯ ಇಲ್ಲದಿದ್ದರೆ ಕರೆತಂದು ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಿ ಅಗತ್ಯವಿದ್ದರೆ ಪೊಲೀಸ್ ನೆರವು ಪಡೆಯಿರಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸೋಂಕಿತರಿಗೆ ಸೀಲ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದ್ದು, ನಿಯಮಗಳ ಉಲ್ಲಂಘನೆ ಬಗ್ಗೆ ನಿಗಾವಹಿಸಿ ಎಲ್ಲಾ ಸೋಂಕಿತರಿಗೆ ಔಷದ ತಲುಪಿರುವುದನ್ನು ಖಾತರಿಮಾಡಿಕೊಳ್ಳಿ ಎಂದರು. ವಾರದ ಎಲ್ಲಾ ದಿನವು ಹಾಲು, ಔಷಧಿ ಮಾರಾಟಕ್ಕೆ ಅವಕಾಶವಿದೆ. ಆಸ್ಪತ್ರೆ ಸುತ್ತ ಮುತ್ತ ಇರುವ ಹೋಟೆಲ್‍ಗಳು ಎಲ್ಲಾ ದಿನ ಬೆಳಗ್ಗೆ 8-10 ಗಂಟೆ ಮಧ್ಯಾಹ್ನ 1-2 ಗಂಟೆ ಹಾಗೂ ಸಂಜೆ 7-8 ಗಂಟೆಯವರೆಗೂ ಪಾರ್ಸೆಲ್ ನೀಡಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ವೀಡಿಯೋ ಸಂವಾದದ ಮೂಲಕ ಪಾಲ್ಗೊಂಡ ಶಾಸಕರಾದ ಹೆಚ್.ಡಿ.ರೇವಣ್ಣ ಮತ್ತು ಕೆ.ಎಂ. ಲಿಂಗೇಶ್ ಅವರು ತಮ್ಮ ತಾಲ್ಲೂಕಿನಲ್ಲಿನ ಆಸ್ಪತರೆಗಳ ಕೊರತೆ ಹಾಗೂ ಇರುವ ಸೌಲಭ್ಯಗಳ ಕುರಿತು ಗಮನಸೆಳೆದರು. ಆಮ್ಲಜನಕ ಹಾಗೂ ಔಷಧಿಗಳನ್ನು ಒದಗಿಸಲು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ, ಮೊದಲನೇ ಅಲೆಯಲ್ಲಿ ಸೋಂಕಿನ ಲಕ್ಷಣಗಳು ವೇಗವಾಗಿ ಕಂಡುಬರುತ್ತಿತ್ತು, ಎರಡನೇ ಅಲೆಯಲ್ಲಿ ಲಕ್ಷಣಗಳು ವಿಭಿನ್ನವಾಗಿವೆ ಹಾಗೂ ತಕ್ಷಣ ತೀಕ್ಷ್ಣ ಸ್ವರೂಪ ಪಡೆಯುತ್ತಿವೆ. ಸೋಂಕಿತರು ಆಸ್ಪತ್ರೆಗೆ ತಡವಾಗಿ ದಾಖಲಾಗುತ್ತಿರುವುದರಿಂದ ಸಾವು ಸಂಭವಿಸುತ್ತಿದ್ದು ಪ್ರತಿ ಗ್ರಾಮದಲ್ಲಿನ ಆಶಾ,ಅಂಗನವಾಡಿ ಕಾರ್ಯಕರ್ತೆಯರು ಸೋಂಕಿತರಿಗೆ ಅರಿವು ಮೂಡಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ನರೇಗಾ ಯೋಜನೆಯಲ್ಲಿ ಬಿಡುಗಡೆ ಮಾಡಿರುವ ಐ.ಇ.ಸಿ ನಿಧಿಯನ್ನು ಕೋವಿಡ್ ಜಾಗೃತಿಗೂ ಬಳಸಿ ಎಂದು ತಿಳಿಸಿದರು.

ಅಪರ ಪೊಲೀಸ್‍ವರಿಷ್ಠಾಧಿಕಾರಿ ಬಿ.ಏನ್.ನಂದಿನಿ ಮಾತನಾಡಿ ಪೊಲೀಸ್ ಇಲಾಖೆ ಅಧಿಕಾರಿಗಳ ಎಲ್ಲಾ ಡಿ.ವೈ.ಎಸ್ಪಿಗಳ ಸಂಪೂರ್ಣ ಸಹಕಾರ ತೆಗೆದುಕೊಂಡು ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಆಂಬುಲೆನ್ಸ್‍ಗಳು ಓಡಾಡುವಂತೆ ಮುಖ್ಯರಸ್ತೆಯನ್ನು ಮಾತ್ರ ತೆರೆಯಬೇಕೆಂದು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿ ಎಂದು ತಿಳಿಸಿದರಲ್ಲದೆ, ಗ್ರಾಮಾಂತರ ಪ್ರದೇಶಗಳ ಕಡೆ ಸಮಾರಂಭಗಳು ಹೆಚ್ಚಾಗುತ್ತಿದ್ದು 40 ಜನಗಳು ಸೇರುವ ಮದುವೆಯನ್ನು ಬಿಟ್ಟು ಉಳಿದೆಲ್ಲಾ ಸಮಾರಂಭಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಅವರು ಮಾತನಾಡಿ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರಿಗೆ ಸ್ವ್ಯಾಬ್‍ಟೆಸ್ಟ್ ಮಾಡಿ, ಹತ್ತುದಿನಗಳ ಕಾಲ ಹೋಂ ಐಸೋಲೇಷನ್‍ನಲ್ಲಿಡಬೇಕು ಹಾಗೂ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದವರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವುದು ಕಾಣುತ್ತಿದ್ದು ಅವರ ಬಗ್ಗೆಯೂ 17ದಿನಗಳ ಕಾಲ ನಿಗಾವಹಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ತಹಸಿಲ್ದಾರ್ ಶಿವಶಂಕರಪ್ಪ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಹಾಗೂ ಮತ್ತಿತರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


LEAVE A REPLY

Please enter your comment!
Please enter your name here