100 ಕೋಟಿ ಕೋವಿಡ್ ಲಸಿಕಾಕರಣ ಹಾಸನದಲ್ಲಿ ಸಂಭ್ರಮಾಚರಣೆ

0

ಹಾಸನ ಅ.21 :  ದೇಶದಲ್ಲಿ  100 ಕೋಟಿ ಕೋವಿಡ್ ಲಸಿಕೆ ಹಾಕುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಈ  ಸಾಧನೆಯ ಸ್ಮರಣಾರ್ಥ ಜಿಲ್ಲಾಡಳಿತದ ವತಿಯಿಂದ  ಸಾಂಕೇತಿವಾಗಿ  ಸಂಭ್ರಮಾಚರಣೆ ಮಾಡಲಾಯಿತು .

ಜಿಲ್ಲಾಧಿಕಾರಿ ಕಚೇರಿ  ಆವರಣದಲ್ಲಿ  ರಂಗೋಲಿ ಹಾಕಿ, ದೀಪ ಬೆಳಗಿ 100 ಬಲೂನ್‍ಗಳನ್ನು ಹಾರಿಸುವುದರ ಮೂಲಕ   ಸಂಭ್ರಮಾಚರಣೆ ಮಾಡಲಾಯಿತು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿüಕಾರಿ ಶ್ರೀನಿವಾಸ್ ಗೌಡ,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ಸತೀಶ್, ಆರ್ ಸಿ ಹೆಚ್ ಅಧಿಕಾರಿ ಡಾ|| ಕಾಂತರಾಜ್,   ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು, ಮತ್ತಿತರರು ಹಾಜರಿದ್ದರು.

ಲಸಿಕಾ ಮೇಳ ಯಶಸ್ವಿಗೊಳಿಸಲು ಬಿ.ಎ.ಪರಮೇಶ್ ಸೂಚನೆ
ಹಾಸನ ಅ.21 : ಜಿಲ್ಲೆಯಲ್ಲಿ ಅ.22 ರಂದು ನಡೆಯುವ ಕೋವಿಡ್ ಲಸಿಕಾ ಮೇಳದಲ್ಲಿ 1 ಲಕ್ಷಕ್ಕೂ ಅಧಿಕ ಲಸಿಕೆ ಗುರಿ ನಿಗಧಿಪಡಿಸಲಾಗಿದ್ದು, ಪ್ರತಿಯೊಬ್ಬರೂ ಸಹಕರಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಎ ಪರಮೇಶ್ ಅವರು ತಿಳಿಸಿದ್ದಾರೆ.  
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಅ.22 ರಂದು  ಒಂದೇ ದಿನ 30 ಲಕ್ಷ ಲಸಿಕೆ ನೀಡಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 90813 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲು ಬಾಕಿ ಇದೆ ಇದರ ಬಗ್ಗೆ ಹೆಚ್ಚಿನ ಜಾಗೃತಿವಹಿಸಿ ಲಸಿಕೆ ನೀಡಿದರೆ ಗುರಿ ತಲುಪಲು ಸಹಾಯವಾಗುತ್ತದೆ ಎಂದು ತಿಳಿಸಿದರು.


ಗ್ರಾಮಪಂಚಾಯ್ತಿಗಳು ಲಸಿಕಾ ಕಾರ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಜನಗಳು ಬಾರದಿದ್ದ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಲಸಿಕೆ ಹಾಕುವಂತೆ ತಿಳಿಸಿದರಲ್ಲದೇ, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜನಪ್ರತಿನಿಧಿಗಳ ಸಹಕಾರ ಪಡೆದು ಅಧಿಕಾರಿಗಳು ಸಿಬ್ಬಂದಿಗಳು ಗುರಿ ಸಾಧನೆಗೆ ಶ್ರಮವಹಿಸಬೇಕು ಎಂದು ಬಿ.ಎ.ಪರಮೇಶ್ ಸೂಚಿಸಿದರು.
ರಾಜ್ಯಾದ್ಯಂತ ನಡೆಯುವ ಲಸಿಕಾ ಮೇಳದಲ್ಲಿ 30 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಜಿಲ್ಲೆಗಳಿಗೆ ನಿಗದಿ ಪಡಿಸಿರುವ  ಲಸಿಕೆ  ಗುರಿಯನ್ನು ಸಾಧಿಸುವಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದರಲ್ಲದೆ  ಜನರಲ್ಲಿ ಲಸಿಕೆಯ ಬಗ್ಗೆ ಇರುವ ಅಪನಂಬಿಕೆ ಹೋಗಲಾಡಿಸಿ ಅರಿವು ಮೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿ  ಎಂದು ತಾಲ್ಲೂಕು ಅಧಿಕಾರಿಗಳಿಗೆ ಹೇಳಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಅ.22ರಂದು ರಾಜ್ಯಾದ್ಯಂತ ಬೃಹತ್ ಕೋವಿಡ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಹಾಸನವು ಒಳಗೊಂಡಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದ್ದು, ಜಿಲ್ಲೆಯಲ್ಲಿ ಸುಮಾರು 1ಲಕ್ಷ ಗುರಿಯನ್ನು ಹೊಂದಲಾಗಿದೆ ಎಂದರು.


ಮೊದಲ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರಲ್ಲದೇ, ಜಿಲ್ಲಾವಾರು ಹಾಸನ ತಾಲ್ಲೂಕಿನಲ್ಲಿ 33,000 ಅರಕಲಗೂಡು ತಾಲ್ಲೂಕಿನಲ್ಲಿ 13,634 ಅರಸೀಕೆರೆ ತಾಲ್ಲೂಕಿನಲ್ಲಿ 20,632 ಹೊಳೆನರಸೀಪುರ ತಾಲ್ಲೂಕಿನಲ್ಲಿ 15,292 ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 17,721 ಸಕಲೇಶಪುರ ತಾಲ್ಲೂಕಿನಲ್ಲಿ 6,500 ಆಲೂರು ತಾಲ್ಲೂಕಿನಲ್ಲಿ 6,968 ಬೇಲೂರು ತಾಲ್ಲೂಕಿನಲ್ಲಿ 7,058 ನೀಡುವಂತೆ ಗುರಿ ನಿಗದಿ ಪಡಿಸಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಲಸಿಕೆ ಲಭ್ಯವಿದ್ದು, ಗುರಿಸಾಧನೆಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.


ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ತಹಸೀಲ್ದಾರ್ ನಟೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಸತೀಶ್, ಆರ್.ಸಿ.ಹೆಚ್. ಅಧಿಕಾರಿ ಡಾ|| ಕಾಂತ್‍ರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ||ವಿಜಯ್, ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ|| ನಾಗೇಶ್ ಆರಾಧ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅ.22 ರಂದು ಮತ್ತೊಂದು ಬೃಹತ್ ಕೋವಿಡ್ ಲಸಿಕಾ ಮೇಳ ಜಿಲ್ಲೆಗೆ 1ಲಕ್ಷ ಗುರಿ
ಹಾಸನ ಅ.21 : ರಾಜ್ಯದಲ್ಲಿ ಅ.22ರಂದು ಮತ್ತೊಂದು ಬೃಹತ್ ಕೋವಿಡ್ ಲಸಿಕಾ ಮೇಳ ಹಮ್ಮಿಕೊಂಡಿದ್ದು, ಹಾಸನ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಗುರಿ ಸಾಧನೆಯ ಮೂಲಕ  ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದಲ್ಲಿ ಭಾರತ ದೇಶವು 100 ಕೋಟಿ ಲಸಿಕೆ ನೀಡಿ ದಾಖಲೆ ಬರೆದಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.


ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮಾಂತರ ಪ್ರದೇಶಗಳು ಲಸಿಕಾಮೇಳಕ್ಕೆ ಅಗತ್ಯ ಸಿದ್ದತೆಗೆ ಸಹಕಾರ ನೀಡಬೇಕು ಜಿಲ್ಲಾಡಳಿತ  ಎಲ್ಲರ ಸಹಯೋಗದೊಂದಿಗೆ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ  ಲಸಿಕೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದ ಅವರು ಅಧಿಕ ಸಂಖ್ಯೆಯಲ್ಲಿ ಲಸಿಕಾ ಕೇಂದ್ರಗಳನ್ನ ತೆರೆದು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು.

ಲಸಿಕೆ ನಿಡುವಲ್ಲಿ ಹಿಂದುಳಿದಿರುವ ಜಿಲ್ಲೆಗಳು ಈ ಮಾಸಾಂತ್ಯದೊಳಗೆ ರಾಜ್ಯದ ಸರಾಸರಿಯಷ್ಟಾದರು ಗುರಿ ಸಾಧನೆ ಮಾಡಬೇಕು. ಈಗಾಗಲೇ ಉತ್ತಮ ಸಾಧನೆ ಮಾಡಿರುವ ಹಾಸನ ಸೆರಿದಂತೆ ಇತರೆ ಜಿಲ್ಲೆಗಳು ಅಭಿನಂದನರ್ಹವಾಗಿದ್ದು ಇನ್ನಷ್ಟೂ ಉತ್ತಮ ಗುರಿ ಸಾಧನೆ ಮಾಡಿ ಮಾಸಾಂತ್ಯದೊಳಗೆ ಶೇ.100 ರಷ್ಟು ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳಿ ಎಂದರು.

ಅಧಿಕಾರಿಗಳು ಸೂಕ್ತ ಗಮನಹರಿಸಿ ಜನಗಳು ಬಾರದಿದ್ದ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಲಸಿಕೆ ಹಾಕುವಂತೆ ತಿಳಿಸಿದರಲ್ಲದೇ, ಜನಪ್ರತಿನಿಧಿಗಳ ಸಹಕಾರವನ್ನು ಪಡೆದು ಗುರಿ ಸಾಧನೆಗೆ ಶ್ರಮವಹಿಸಬೇಕು ಎಂದು ಪಿ.ರವಿಕುಮಾರ್ ತಿಳಿಸಿದರು.

ಸಭೆಯಲ್ಲಿ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಸತೀಶ್, ಹಿಮ್ಸ್ ನಿರ್ದೇಶಕರಾದ ಡಾ ||ರವಿಕುಮಾರ್, ಆರ್.ಸಿ.ಹೆಚ್. ಅಧಿಕಾರಿ ಡಾ|| ಕಾಂತ್‍ರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ||ಕೃಷ್ಣಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಶಿವಶಂಕರ್, ಜಿಲ್ಲಾ ಕುಷ್ಟ ಮತ್ತು ಅಂಧತ್ವ ನಿಯಂತ್ರಣಾಧಿಕಾರಿ ಡಾ|| ವೇಣುಗೋಪಾಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ||ಹರೀಶ್, ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here