ಚನ್ನರಾಯಪಟ್ಟಣ: ದರೋಡೆಗೆ ಸಂಚು ಹಾಕಿದ್ದ ಬಿಹಾರ ಮೂಲದ ಮತ್ತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಜು.4 ರಂದು ಬೆಳಗಿನ ಜಾವ 5.30 ರಲ್ಲಿ ನಗರ ಠಾಣೆ ಪಿಎಸ್‌ಐ ಲೋಕೇಶ ಅವರು ಠಾಣೆಯಲ್ಲಿದ್ದಾಗ
ಹೊಸೂರು ಗೇಟ್‌ನ ಶಿವವನದ ಬಳಿಯ ಚನ್ನರಾಯಪಟ್ಟಣ-ಹಾಸನ ರಸ್ತೆಯಲ್ಲಿ ಕೆಲವರು ಹೊಂಚು ಹಾಕಿ ಕಾಯುತ್ತಿದ್ದಾರೆ.
ರಸ್ತೆಯ ಬಳಿ ನಿಂತು ಹಿಂದಿಯಲ್ಲಿ ಮಾತನಾಡುತ್ತಾ ಅನುಮಾನಾಸ್ಪದ ರೀತಿಯಲ್ಲಿ ಓಡಾಡುವ ವಾಹನ ನೋಡುವುದು, ಜನರನ್ನು ಬೇರೆ ರೀತಿಯಲ್ಲಿ ದಿಟ್ಟಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಸಿಬ್ಬಂದಿಗಳೊಂದಿಗೆ 6 ಗಂಟೆಗೆ ದೌಡಾಯಿಸಿದರು.
ಈ ವೇಳೆ
ಬಬ್ಲುಕುಮಾರ್(25), ಬಾಬೂಲ್ ಕುಮಾರ್(29), ಮನೀಶ್ ಕುಮಾರ್(20), ಮಿತ್ಯಾಕುಮಾರ್(24) ಮತ್ತು ಕುಣದನ್(19) ಎಂಬುವರು ಸಿಕ್ಕಿ ಬಿದ್ದಿದ್ದಾರೆ.
ಇವರೆಲ್ಲರೂ ಬಿಹಾರ ರಾಜ್ಯದ ವಿವಿಧ ಜಿಲ್ಲೆಯವರಾಗಿದ್ದು, ಕೈಗಳಲ್ಲಿ ಮರದ ದೊಣ್ಣೆ, ಕಬ್ಬಿಣದ ರಾಡು, ಖಾರದ ಪುಡಿ ಪ್ಯಾಕೆಟ್ ಹಿಡಿದುಕೊಂಡಿದ್ದರು ಎನ್ನಲಾಗಿದ್ದು, ದರೋಡೆ ಮಾಡಲು ಸಂಚು ರೂಪಿಸಿ ಕಾಯುತ್ತಿದ್ದರು ಎಂದು ತಿಳಿದು ಬಂದಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಗುರುವಾರ ಮುಂಜಾನೆ
ಚನ್ನರಾಯಪಟ್ಟಣ-ಹೊಳೆನರಸೀಪುರ ರಸ್ತೆಯ ಸುರಗಿ ತೋಪಿನ ಬಳಿ ಇದೇ ರೀತಿ ಅನುಮಾನಾಸ್ಪದವಾಗಿ ನಿಂತಿದ್ದ ಬಿಹಾರ ಮೂಲದ ಐವರನ್ನು ಪೊಲೀಸರು ಬಂಧಿಸಿದ್ದರು. ಮತ್ತೆ ಐವರು ಸೆರೆ ಸಿಕ್ಕಿರುವುದರಿಂದ ಇಂಥದ್ದೊಂದು ತಂಡ ಈ ಭಾಗದಲ್ಲಿ ಸಕ್ರಿಯವಾಗಿದೆ ಎಂಬ ಅನುಮಾನ ಮೂಡಿದೆ.